





ಮಂಗಳೂರು: ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯಾಗಿದ್ದು, ಸ್ಥಳ ಮಹಜರು ವೇಳೆ ಪೊಲೀಸ್ ಭದ್ರತೆ ಮುರಿದು ಪರಾರಿಯಾಗಲು ಯತ್ನಿಸಿದ್ದ ಮುಂಬೈಯ ಚೇಂಬೂರ್ ಸಮೀಪದ ತಿಲಕನಗರದ ಕಣ್ಣನ್ ಮಣಿ ಎಂಬಾತನಿಗೆ ಪೊಲೀಸರು ಗುಂಡು ಹಾರಿಸಿ ಮರಳಿ ವಶಕ್ಕೆ ಪಡೆದುಕೊಂಡು ಘಟನೆ ಕೆ.ಸಿ.ರೋಡ್ ಬಳಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿಯ ಮೊಣಕಾಲಿಗೆ ಗುಂಡು ಹಾರಿಸಿ ಆತ ಪರಾರಿಯಾಗದಂತೆ ಮಾಡಿರುವುದು ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಆಗಿರುವ ವಿಟ್ಲ ಮೂಲದ ರಫೀಕ್ ಎಂ.ಕೆ.ಅವರು ಎಂದು ತಿಳಿದು ಬಂದಿದೆ.


ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳ ಪೈಕಿ ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಕಣ್ಣನ್ ಮಣಿ (36ವ.)ಎಂಬಾತನನ್ನು ಸ್ಥಳ ಮಹಜರು ನಡೆಸುವ ಸಲುವಾಗಿ ಜ.21ರ ಸಂಜೆ 4.20ರ ವೇಳೆ ಕೆ.ಸಿ.ರೋಡ್ ಸಮೀಪದ ಆಲಂಕಾರು ಗುಡ್ಡೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಕಣ್ಣನ್ ಮಣಿ, ಸ್ಥಳದಲ್ಲೇ ಇದ್ದ ಒಡೆದ ಮದ್ಯದ ಬಾಟಲಿಯಿಂದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಬಾಲಕೃಷ್ಣರನ್ನು ದೂಡಿ ಹಾಕಿ ಅವರ ಮೇಲೂ ಹಲ್ಲೆ ನಡೆಸಲು ಮುಂದಾದ. ತಕ್ಷಣ ಅಪಾಯದ ಮುನ್ಸೂಚನೆ ಅರಿತ ಸಿಸಿಬಿ ಇನ್ಸ್ಪೆಕ್ಟರ್ ರಫೀಕ್ ಕೆ. ಎಂ. ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದ ಆರೋಪಿ ಕಣ್ಣನ್ ಮಣಿ ಪರಾರಿಯಾಗಲೆತ್ನಿಸಿದಾಗ ಆತನ ಮೊಣಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದರು. ಆತ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.





ಈ ಘಟನೆಯಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಎಚ್.ಎಚ್., ಸಿಸಿಬಿ ಘಟಕದ ಹೆಡ್ಕಾನ್ಸ್ಟೇಬಲ್ ಆಂಜನಪ್ಪ, ಉಳ್ಳಾಲ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ನಿತಿನ್ ಗಾಯಗೊಂಡಿದ್ದಾರೆ. ನಾಲ್ಕು ಮಂದಿ ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.17ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಜ.20ರಂದು ಬಂಧಿಸಿದ್ದರು. ಬಂಧಿತರಿಂದ ಕೃತ್ಯದ ವೇಳೆ ಬಳಸಲಾದ ಫಿಯೆಟ್ ಕಾರು, ಎರಡು ಪಿಸ್ತೂಲ್, 4 ಸಜೀವ ಮದ್ದು ಗುಂಡು, 3 ಲಕ್ಷ ರೂ.ನಗದು,2 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಸಿಸಿಬಿ ಇನ್ಸ್ಪೆಕ್ಟರ್ ರಫೀಕ್ ಕೆ.ಎಂ. ಅವರು ವಿಟ್ಲದ ಕೆಲಿಂಜ ಮೂಲದವರು. ಈ ಹಿಂದೆ ಇವರು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕದ್ರಿ, ಪಣಂಬೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬೆಂಗಳೂರು ಪುಲಕೇಶಿನಗರ ಹೈಗ್ರೌಂಡ್ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭ ಕೆಲವು ಸಮಯ ಇವರು ವಿಧಾನಸೌಧ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಆಗಿದ್ದ ಶ್ಯಾಂಸುಂದರ್ ಅವರ ವರ್ಗಾವಣೆ ಬಳಿಕ ಸರಕಾರ ರಫೀಕ್ ಕೆ. ಎಂ.ಅವರನ್ನು ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಆಗಿ ನೇಮಕಗೊಳಿಸಿತ್ತು.








