ಪುತ್ತೂರು:ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಸುದರ್ಶನ್ ಮುರ ಎಂಬವರು ಬ್ಯಾಂಕ್ನ ಮತದಾರರ ಪಟ್ಟಿಯನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿಸಿ ಟೌನ್ ಬ್ಯಾಂಕ್ನ ನಿಕಟಪೂರ್ವ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಸುದರ್ಶನ್ ಮುರ ಅವರು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸುವ ಕುರಿತು ಪತ್ರಿಕಾಗೋಷ್ಠಿ ನಡೆಸಿ, ನಾವು ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ರಚನೆ ಮಾಡಿ ಅದರ ಮೂಲಕ ಚುನಾವಣೆಗೆ ಸ್ಪರ್ಧಿಸಲಿದ್ದೇವೆ ಎಂದು ಹೇಳಿ, ಆಡಳಿತ ಮಂಡಳಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ.ಅಲ್ಲದೆ ಬ್ಯಾಂಕ್ನ ಮತದಾರರ ಪಟ್ಟಿಯನ್ನು ನಾನು ಹ್ಯಾಕ್ ಮಾಡಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.ಇದು ಅತ್ಯಂತ ಗಂಭೀರ ವಿಷಯವಾಗಿದ್ದು,ಬ್ಯಾಂಕ್ನ ಆಂತರಿಕ ವ್ಯವಹಾರದ ಮತ್ತು ಬ್ಯಾಂಕಿನ ಹಣದ ಬಗ್ಗೆ ಅಪಾಯಕಾರಿ ಆಗಿರುತ್ತದೆ.ಅಲ್ಲದೆ ಹ್ಯಾಕ್ ಮಾಡುವುದು ಗಂಭೀರ, ಶಿಕ್ಷಾರ್ಹ ಅಪರಾಧ ಆಗುತ್ತದೆ.ಸುಳ್ಳು ಹೇಳಿಕೆಗಳನ್ನು ನೀಡಿ ಬ್ಯಾಂಕಿನ ಅಧಿಕೃತ ಪ್ರಕಟಣೆ ಎಂಬ ರೀತಿಯಲ್ಲಿ ಬಿಂಬಿಸಿ ಸದಸ್ಯ ಮತದಾರರನ್ನು ತಪ್ಪು ದಾರಿಗೆ ಎಳೆಯುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ.ಈ ಕುರಿತು ಸೂಕ್ತ ತನಿಖೆ ನಡೆಸಿ, ಅವರು ಹೇಳಿಕೊಳ್ಳುವಂತಹ ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿಯ ಬೆಂಬಲದಿಂದ ನಿಂತಿರುವ ಉಮೇದುವಾರರ ಅರ್ಜಿಯನ್ನು ಅನೂರ್ಜಿತಗೊಳಿಸಿ ಅವರನ್ನು ಡಿಸ್ಕ್ವಾಲಿಪೈ ಮಾಡಬೇಕಾಗಿ ದೂರಿನಲ್ಲಿ ಆಗ್ರಹಿಸಿದ್ದಾರೆ.