ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿಯ ಸುದರ್ಶನ್ ಪುತ್ತೂರು ಪತ್ರಿಕಾಗೋಷ್ಠಿ
ಪುತ್ತೂರು: ಪುತ್ತೂರು ಟೌನ್ ಬ್ಯಾಂಕ್‌ನಲ್ಲಿ ನಡೆದ ದುರಾಡಳಿತ ಮತ್ತು ಅವ್ಯವಹಾರಗಳಿಂದ ರೋಸಿ ಹೋದ ಸಮಾನ ಮನಸ್ಕರಾದ ನಾವು 9 ಮಂದಿ ಜ.25ರಂದು ನಡೆಯುವ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೇವೆ. ಈ ಬಾರಿ ಬದಲಾವಣೆ ಬಯಸಿ ನೂತನ ಆಡಳಿತ ಮಂಡಳಿ ಆಯ್ಕೆಯಾಗಲು ಮತದಾರರು ಸಹಕರಿಸುವಂತೆ ಸಾಮಾನ್ಯ ಕ್ಷೇತ್ರದಲ್ಲಿ ಕಣಕ್ಕಿಳಿದ ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ಸಂಚಾಲಕ ಪಡ್ನೂರು ರಾಮನಗರ ನಿವಾಸಿ ಸುದರ್ಶನ್ ಗೌಡ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕಳೆದ 115 ವರ್ಷಗಳಿಂದ ಆಡಳಿತ ನಡೆಸುತ್ತಿದ್ದವರು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ, ಪಾಲು ಬಂಡವಾಳ ಹೊಂದಿರುವ ಸದಸ್ಯರಿಗೆ ಸಾಲ ಬಾಕಿ ನೆಪದಲ್ಲಿ ಮತ್ತು ಮಹಾಸಭೆಗೆ ಹಾಜರಾಗದ ನೆಪವೊಡ್ಡಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮತ್ತು ಮತದಾನ ನಿರ್ಬಂಧಿಸುವ ಹಕ್ಕನ್ನು ಬೈಲಾದಲ್ಲಿ ಅಳವಡಿಸಿ ಸರ್ವಾಧಿಕಾರಿ ದುರಾಡಳಿತ ನಡೆಸುತ್ತಿದ್ದಾರೆ. ಈ ಪದ್ದತಿ ಬದಲಾಗಿ ಮೀಸಲು ಕ್ಷೇತ್ರದ ಎಲ್ಲರಿಗೂ ಸಮಪಾಲು ಅಧಿಕಾರ ದೊರೆಯುವಂತೆ ಬದಲಾವಣೆ ಬಯಸಿ ಹೊಸ ಅಧ್ಯಾಯ ತೆರೆಯಲು ಈ ಬಾರಿ ಸ್ಪರ್ಧೆ ಮಾಡುತ್ತಿದ್ದೇವೆ. ಈ ಬಾರಿಯ ಚುನಾವಣೆಗೆ ಸಂಬಂಧಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಕೆಲ ಪ್ರಮುಖರು ಮತದಾರರ ಪಟ್ಟಿಯನ್ನು ಕ್ಷೇತ್ರವಾರು ವಿಂಗಡಣೆ ಮಾಡಿ ಮತದಾರರ ಮೊಬೈಲ್ ದೂರವಾಣಿ ಸಂಖ್ಯೆ ಸಹಿತ ಬ್ಯಾಂಕಿನಲ್ಲೇ ಮುದ್ರಿಸಿ ಬೆಂಬಲಿತ ಮತದಾರರ ಮನೆಗೆ ತೆರಳಿ ಪ್ರಚಾರ ಮಾಡಿ ಗುರುತು ಚೀಟಿಯನ್ನೂ ಹಂಚಿದ್ದಾರೆ. ಈ ಕುರಿತು ಮಾಹಿತಿ ನನಗೆ ಲಭ್ಯವಾಗುತ್ತಲೇ ನಾನೂ ಬ್ಯಾಂಕ್‌ನಿಂದ ಕೇಳಿದಾಗ ಕೊಡಲಿಲ್ಲ. ಆದರೆ ಕೊನೆಗೆ ನಾನೇ ಬ್ಯಾಂಕ್‌ನಿಂದ ಹ್ಯಾಕ್ ಮಾಡಿ 3,600 ಮಂದಿ ಮತದಾರರ ಕ್ಷೇತ್ರವಾರು ಮತದಾರ ಪಟ್ಟಿಯನ್ನು ಪಡೆದುಕೊಂಡಿದ್ದೇನೆ ಎಂದವರು ಹೇಳಿದರು.
ಕುಕ್ಕರ್ ಸೆಟ್ ಉಡುಗೊರೆ:
2024ರ ಮಹಾಸಭೆಯಲ್ಲಿ ಉಪಸ್ಥಿತರಿದ್ದ 1,100 ಸದಸ್ಯರಿಗೆ ಚುನಾವಣೆ ಆಮಿಷವಾಗಿ ಕುಕ್ಕರ್ ಸೆಟ್ ಹಂಚಲಾಗಿದೆ. ಇನ್ನುಳಿದ ಸಾವಿರ ಮಂದಿಗೆ ಮನೆ ಮನೆಗೆ ಹಂಚಲಾಗಿದೆ ಎಂದು ಆರೋಪಿಸಿದ ಸುದರ್ಶನ್, ಇದಕ್ಕಾಗಿ ಕೊಟೇಷನ್ ರಹಿತ ಖರೀದಿ ಮಾಡಿರುವ ಬಗ್ಗೆ ಆರ್.ಬಿ.ಐ, ಸಹಕಾರ ಸಚಿವರು, ಯುಸಿಬಿ ಮುಖ್ಯ ಕಾರ್ಯದರ್ಶಿಯವರಿಗೆ, ಪುತ್ತೂರು ಸಹಾಯಕ ನಿಬಂಧಕರಿಗೆ ದೂರು ನೀಡಲಾಗಿದೆ. ಎಲ್ಲಾ ಅವ್ಯವಹಾರಗಳಿಗೆ ಕಾರಣಕರ್ತರಾದ ಕೆಲವರನ್ನು ಈ ಬಾರಿ ಸ್ಪರ್ಧೆಯಿಂದ ಹೊರಗಿಟ್ಟಿದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜೋನ್ ಸಿರಿಲ್ ರೋಡ್ರಿಗಸ್ ಚಿಕ್ಕಮುಡ್ನೂರು, ಮಹಮ್ಮದ್ ಅಶ್ರಫ್ ಕಲ್ಲೇಗ ಉಪಸ್ಥಿತರಿದ್ದರು.
ನಮಗೆ ಶಾಸಕರ ಬೆಂಬಲವಿದೆ
ನಾವು ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ಅಥವಾ ಕಾಂಗ್ರೆಸ್ ಬೆಂಬಲಿಗರಾಗಿಲ್ಲ. ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ಎಂಬ ಬ್ಯಾನರ್‌ನ ಅಡಿಯಲ್ಲಿ ಚುನಾವಣೆಗೆ ನಿಂತಿದ್ದೇವೆ. ಇದಕ್ಕೆ ಶಾಸಕರ ಬೆಂಬಲವಿದೆ. ನಾನು ನಿಮಗೆ ಪ್ರಚಾರ, ಬೆಂಬಲ, ಸಹಕಾರ ಕೊಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದವನಾಗಿ ಅಲ್ಲ. ನಿಮಗೆ ಒಂದು ರೂಪಾಯಿ ಖರ್ಚಾಗದಂತೆ ನಾನು ನಿಮಗೆ ಸಹಕಾರ ಕೊಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ. -ಸುದರ್ಶನ್ ಗೌಡ