ರಾಮಕುಂಜ: ಕಾಡುಕೋಣವೊಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲದಲ್ಲಿ ಜ.23ರಂದು ಸಂಜೆ ಕಾಣಿಸಿಕೊಂಡಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿತು.
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಾಲೇಜು ಕಟ್ಟಡದ ಬಳಿ ಸಂಜೆ ಕಾಡುಕೋಣ ಕಾಣಿಸಿಕೊಂಡಿದೆ. ರಾಜ್ಯ ಹೆದ್ದಾರಿಯ ಬದಿ ಕಾಡುಕೋಣ ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದ ಪರಿಣಾಮ ತುಸು ಹೊತ್ತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಸ್ವಲ್ಪ ಸಮಯದ ಬಳಿಕ ಕಾಡುಕೋಣ ಕೊಯಿಲ ಪಶುಸಂಗೋಪನಾ ಇಲಾಖೆಯ ಹುಲ್ಲುಗಾವಲು ಪ್ರದೇಶದತ್ತ ತೆರೆಳಿತು. ಇದೇ ಕಾಡುಕೋಣ ಬೆಳಿಗ್ಗೆ ಕೊಯಿಲ ಪಶುಸಂಗೋಪನಾ ಇಲಾಖೆಯ ಜಾಗದ ಅಲೆಕ್ಕಿ ಎಂಬಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ.