ಪುತ್ತೂರು: ಜ.26 ರಂದು ನಡೆಯುವ ಎರಡು ಅಭೂತಪೂರ್ವ ಕಾರ್ಯಕ್ರಮಗಳಿಗೆ ಕುಂಬ್ರ ಪೇಟೆ ಸಜ್ಜುಗೊಳ್ಳುತ್ತಿದೆ. ಸ್ಪಂದನ ಸೇವಾ ಬಳಗ ಕುಂಬ್ರ ಇದರ ವತಿಯಿಂದ ಕುಂಬ್ರ ಅಲ್ಲಂಗಾರ್ ಗದ್ದೆಯಲ್ಲಿ ನಡೆಯುವ ಶ್ರೀರಾಮ ಲೀಲೋತ್ಸವ ಹಾಗೇ ಎಸ್ಕೆಎಸ್ಎಸ್ಎಫ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಜಿಲ್ಲಾ ಮಟ್ಟದ ಮಾನವ ಸರಪಳಿ ಕಾರ್ಯಕ್ರಮ ಈ ಎರಡೂ ಕಾರ್ಯಕ್ರಮಗಳಿಗೆ ಈಗಾಗಲೇ ಕುಂಬ್ರ ಪೇಟೆ ಭರದಿಂದ ಸಜ್ಜುಗೊಳ್ಳುತ್ತಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿನದ ಅಂಗವಾಗಿ ನಡೆಯುವ ಶ್ರೀರಾಮ ಲೀಲೋತ್ಸವಕ್ಕೆ ಕುಂಬ್ರ ಪೇಟೆಯಲ್ಲಿ ಎರಡು ಬೃಹತ್ ಧ್ವಾರಗಳನ್ನು ಅಳವಡಿಸಲಾಗಿದೆ. ಕೇಸರಿ ಬಂಟಿಂಗ್ಸ್, ಪತಾಕೆಗಳನ್ನು ರಸ್ತೆಯುದ್ಧಕ್ಕೂ ಅಳವಡಿಸಲಾಗಿದೆ. ಅದೇ ರೀತಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಕೇಸರಿ ಬಿಳಿ ಹಸಿರು ಬಣ್ಣದ ಪತಾಕೆಗಳನ್ನು ಧ್ವಜಗಳನ್ನು ಅಲ್ಲಲ್ಲಿ ಅಳವಡಿಸಲಾಗಿದ್ದು ಕಾರ್ಯಕ್ರಮ ನಡೆಯುವ ಮೈದಾನದ ತುಂಬಾ ತ್ರಿವರ್ಣ ಬಣ್ಣದ ಪತಾಕೆಗಳು ರಾರಾಜಿಸುತ್ತಿವೆ.
ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದೊಂದಿಗೆ ನಡೆಯುವ ಮಾನವ ಸರಪಳಿ ಒಂದು ಕಡೆಯಾದರೆ, ಧರ್ಮ ಜಾಗೃತಿಯೊಂದಿಗೆ ರಾಮ ಸಂಕೀರ್ತನೆ ಎಂದ ಧ್ಯೇಯದೊಂದಿಗೆ ನಡೆಯುವ ಶ್ರೀ ರಾಮ ಲೀಲೋತ್ಸವ ಇನ್ನೊಂದು ಕಡೆಯಾಗಿದೆ. ಒಟ್ಟಿನಲ್ಲಿ ಸೌಹಾರ್ದತೆಗೆ ಕುಂಬ್ರದ ಜನತೆ ಸಾಕ್ಷಿಯಾಗಲಿದ್ದಾರೆ.