ಕೂಡುರಸ್ತೆ: ಅಪಘಾತಕ್ಕೆ ಕಾರಣವಾಗುತ್ತಿದೆ ಅಪೂರ್ಣ ಕಾಮಗಾರಿ..? :ರಸ್ತೆ ಹೊಂಡಕ್ಕೆ ಬಿದ್ದು ಕಳಚಿದ ಬೊಲೆರೋ ವಾಹನದ ಚಕ್ರ

0

ಪುತ್ತೂರು: ಮುಂಡೂರು-ತಿಂಗಳಾಡಿ ಮಧ್ಯದ ಕೂಡುರಸ್ತೆಯಲ್ಲಿ ಅವ್ಯವಸ್ಥಿತ ಕಾಮಗಾರಿಯಿಂದ ವಾಹನ ಸವಾರರು ನಿತ್ಯ ತೊಂದರೆಗೊಳಗಾಗುತ್ತಿದ್ದು ಜ.27ರಂದು ಸಂಜೆ ಬೊಲೆರೋ ಪಿಕಪ್‌ವೊಂದರ ಚಕ್ರ ಕಳಚಿದ್ದು ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.


ಕೂಡುರಸ್ತೆಯಲ್ಲಿ ಮೋರಿ ಬ್ಲಾಕ್ ಆಗಿ ನೀರು ರಸ್ತೆಯಲ್ಲಿ ಶೇಖರಣೆಗೊಂಡು ವಾಹನ ಸಂಚಾರರು ಪರದಾಟ ನಡೆಸುತ್ತಿದ್ದ ಘಟನೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಕಳೆದ ವರ್ಷ ಶಾಸಕರ ಸೂಚನೆಯಂತೆ ತುರ್ತು ಕಾಮಗಾರಿ ಅನುದಾನದ ಮೂಲಕ ಕಾಮಗಾರಿ ನಡೆಸಲಾಗಿದ್ದು ರಸ್ತೆಯ ಇನ್ನೊಂದು ಬದಿಯಿಂದ ಹೊಸ ಮೋರಿಯನ್ನು ಅಳವಡಿಸಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು ಮಾಡಿರುವ ಈ ಕಾಮಗಾರಿ ಅವೈಜ್ಞಾನಿಕ ಎನ್ನುವ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು. ಮೋರಿ ಅಳವಡಿಸಲು ಅಗೆದ ರಸ್ತೆಯನ್ನು ಮತ್ತು ಮೋರಿ ಅಳವಡಿಸಿದ ರಸ್ತೆ ಬದಿಯ ಕಾಮಗಾರಿಯನ್ನು ಪೂರ್ಣಗೊಳಿಸದೇ ಹಾಗೆಯೇ ಬಿಟ್ಟು ಬಿಡಲಾಗಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲವು ಅಪಘಾತಗಳು ನಡೆದಿದ್ದು ಇತ್ತೀಚೆಗೆ ಎರಡು ದ್ವಿಚಕ್ರ ವಾಹನಗಳು ಇದೇ ಸ್ಥಳದಲ್ಲಿ ಪಲ್ಟಿಯಾಗಿದೆ. ರಾತ್ರಿ ವೇಳೆ ಇಲ್ಲಿ ತಕ್ಷಣಕ್ಕೆ ರಸ್ತೆ ಬದಿಯ ಗುಂಡಿ ಗೋಚರವಾಗದ ಹಿನ್ನೆಲೆಯಲ್ಲಿ ಅಪಾಯ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಜ.27ರಂದು ಸಂಜೆ ಲೋಹಿತ್ ಬಂಗೇರ ಎಂಬವರು ಮುಂಡೂರು ಕಡೆಯಿಂದ ತಿಂಗಳಾಡಿ ಕಡೆಗೆ ಚಲಾಯಿಸುತ್ತಿದ್ದ ಬೊಲೆರೋ ವಾಹನದ ಚಕ್ರ ಇದೇ ರಸ್ತೆಯ ಗುಂಡಿಗೆ ಬಿದ್ದಿದ್ದು ಟಯರ್ ಕಳಚಿ ಬಿದ್ದಿದೆ. ಸುಮಾರು ಹೊತ್ತು ಸ್ಥಳದಲ್ಲಿ ಭಾಗಿಯಾಗಿದ್ದ ಬೊಲೆರೋ ವಾಹನವನ್ನು ಬಳಿಕ ಹಲವಾರು ಯುವಕರು ಸೇರಿಕೊಂಡು ಮೇಲಕ್ಕೆತ್ತಿದ್ದು ಘಟನೆಯಿಂದ ಲೋಹಿತ್ ಬಂಗೇರ ಅವರಿಗೆ ಅಪಾರ ನಷ್ಟು ಉಂಟಾಗಿದೆ.

LEAVE A REPLY

Please enter your comment!
Please enter your name here