ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟುರವರಿಗೆ ಆರ್ಯಾಪು ಕೃ.ಪ.ಸಹಕಾರಿ ಸಂಘದಿಂದ ಸನ್ಮಾನ

0

ಪುತ್ತೂರು:ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಲ್ಯೋಟ್ಟುರವರಿಗೆ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನ ಕಾರ್ಯಕ್ರಮ ಜ.29 ರಂದು ಆರ್ಯಾಪು ಸೊಸೈಟಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿರವರ ಅಧ್ಯಕ್ಷತೆಯಲ್ಲಿ ಸೊಸೈಟಿ ಸಭಾಂಗಣದಲ್ಲಿ ಜರಗಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು, ಜಿಲ್ಲಾ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಲು ನನಗೆ ಸೂಚಕರಾಗಿದ್ದವರು ಆರ್ಯಾಪು ಸೊಸೈಟಿ ಅಧ್ಯಕ್ಷ ಮಹಮ್ಮದ್ ಆಲಿರವರು. ಆರ್ಯಾಪು ಸೊಸೈಟಿ ಅಭಿವೃದ್ಧಿಗೆ ಅನುದಾನದ ಬಗ್ಗೆ ಆಲಿರವರು ಕೇಳಿಕೊಂಡಾಗ ಡಿಸಿಸಿ ಬ್ಯಾಂಕ್ ನಲ್ಲಿ ಶೀಘ್ರವಾಗಿ ಸ್ಪಂದಿಸಿದ್ದೇನೆ. ಅಲ್ಲದೆ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಜೊತೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ ಸಂತೋಷ ನನಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್‌ರವರು ನನ್ನ ಮೇಲಿಟ್ಟ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಮಾತ್ರವಲ್ಲ ಯಾವುದೇ ಚ್ಯುತಿ ಬಾರದಂತೆ ಸಂಘವನ್ನು ಮಾದರಿ ಸಂಘ ಎಂಬಂತೆ ನಿರೂಪಿಸಲಿದ್ದೇನೆ ಎಂದರು.


ಎಂ.ಎನ್ ರಾಜೇಂದ್ರ ಕುಮಾರ್‌ರವರ ಆತ್ಮೀಯರು ಬಾಲ್ಯೊಟ್ಟುರವರು-ಚಂದ್ರಹಾಸ ಶೆಟ್ಟಿ:
ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ನಮ್ಮ ಸ್ನೇಹಿತರಾದ ಶಶಿಕುಮಾರ್ ರೈಯವರು ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಹಕಾರಿ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿದವರಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್‌ರವರಂತೆ ಯಾರೂ ಇಲ್ಲ. ಅವರಿಗೆ ಪ್ರತಿಯೊಂದು ವಿಷಯದಲ್ಲಿ ಧೈರ್ಯ ತುಂಬುವವರು ಓರ್ವರು ಉಡುಪಿಯ ದೇವಿಪ್ರಸಾದ್ ಶೆಟ್ಟಿ, ದ.ಕ ಜಿಲ್ಲೆಯಲ್ಲಿ ಶಶಿಕುಮಾರ್ ರೈಯವರು. ಯಾಕೆಂದರೆ ರಾಜೇಂದ್ರ ಕುಮಾರ್‌ರವರಿಗೆ ಇವರೀರ್ವರ ಮೇಲೆ ಬಹಳ ವಿಶ್ವಾಸ, ನಂಬಿಕೆ ಎಂದ ಅವರು ಜೊತೆಗೆ ಯಾವುದೇ ಕಳಂಕವಿಲ್ಲದ ರಾಜಕಾರಣಿ ಅಂದ್ರೆ ಮಹಮ್ಮದ್ ಆಲಿರವರು. ಅವರ ನೇರ ನಡೆ-ನುಡಿ, ನಿಷ್ಟುರವಾದ ಮಾತುಗಳಿಂದ ಅವರು ಪ್ರಸಿದ್ಧಿ ಪಡೆದವರು. ಪುತ್ತೂರು ನಗರಸಭೆಯವರು ಮಹಮದ್ ಆಲಿರವರಿಗೆ ಹೆದರುವಷ್ಟು ಯಾರಿಗೂ ಹೆದರುವುದಿಲ್ಲ. ಯಾವುದೇ ಸಂಘಸಂಸ್ಥೆಗಳ ಚುನಾವಣೆಯು ಅವಿರೋಧವಾಗಿ ಒಮ್ಮತದಿಂದ ಆದ್ರೆ ಒಳ್ಳೆಯದು. ಇಲ್ಲದಿದ್ದರೆ ಅಲ್ಲಿ ಸಂಘರ್ಷ ಹಾಗೂ ಖರ್ಚಿಗೆ ಕಾರಣವಾಗುತ್ತದೆ ಎಂದರು.


ಅಭಿವೃದ್ಧಿಯಲ್ಲಿ ಎತ್ತಿದ ಕೈ ಶಶಿಕುಮಾರ್ ರೈಯವರು-ಸದಾನಂದ ಶೆಟ್ಟಿ:
ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷರೂ, ಪ್ರಸ್ತುತ ನಿರ್ದೇಶಕರಾಗಿರುವ ಸದಾನಂದ ಶೆಟ್ಟಿ ಕೂರೇಲು ಮಾತನಾಡಿ, ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮೂರು ಅವಧಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ. ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿಯಲ್ಲೂ ಶಶಿಕುಮಾರ್ ರೈಯವರ ಕೊಡುಗೆ ಇದೆ ಅಲ್ಲದೆ ಅವರ ಸ್ವಂತ ಹಣವನ್ನು ಹಾಕಿ ಅಭಿವೃದ್ಧಿಗೆ ಕೈಜೋಡಿಸಿರುತ್ತಾರೆ ಎಂದರು.


ಅವಕಾಶವನ್ನು ಸದುಪಯೋಗಪಡಿಸಿಕೊಂಡವರು ಶಶಿಕುಮಾರ್ ರೈಯವರು-ಶಿವರಾಮ ಆಳ್ವ:
ಉದ್ಯಮಿ ಶಿವರಾಮ ಆಳ್ವ ಮಾತನಾಡಿ, ಯೋಗ ಎಂಬುದು ಯಾರಿಗೂ ಬರುವುದಿಲ್ಲ. ಯೋಗ ಬಂದಾಗ ಅದರ ಸದುಪಯೋಗವನ್ನು ಮಾಡುವುದು ನಮ್ಮ ಜವಾಬ್ದಾರಿ ಎಂಬುದಕ್ಕೆ ಶಶಿಕುಮಾರ್ ರೈ ಉದಾಹರಣೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ರವರಿಗೆ ಹಿಂದೆ ದಿವಂಗತ ಜೀವನ್ ಭಂಡಾರಿ ಇಂದು ಶಶಿಕುಮಾರ್ ರೈಯವರು ಶಕ್ತಿಯಾಗಿದ್ದಾರೆ. ಅಷ್ಟು ಆತ್ಮೀಯತೆ ರಾಜೇಂದ್ರ ಕುಮಾರ್ ಹಾಗೂ ಶಶಿಕುಮಾರ್ ರೈರವರಲ್ಲಿತ್ತು. ಶಶಿಕುಮಾರ್ ರೈಯವರು ಎಲ್ಲರೊಂದಿಗೆ ಬಹಳ ಆತ್ಮೀಯತೆಯಲ್ಲಿರುವವರು ಜೊತೆಗೆ ಸಾಲಗಾರರನ್ನು ಮೇಲೆತ್ತುವ ಗುಣ ಕೂಡ ಅವರಲ್ಲಿದೆ ಎಂದರು.


ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಬಿ.ಗಣೇಶ್ ರೈ ಬಳ್ಳಮಜಲು ಕುರಿಯ, ಶೀನಪ್ಪ ಮರಿಕೆ ಆರ್ಯಾಪು, ಇಸ್ಮಾಯಿಲ್ ಮಲಾರು, ತೆರೆಜಾ ಸಿಕ್ವೇರಾ ಕೆಮ್ಮಿಂಜೆ, ಸಂಶುದ್ಧೀನ್ ನೀರ್ಕಜೆ ಆರ್ಯಾಪು, ಸತೀಶ್ ನಾಯ್ಕ್ ಪರ್ಲಡ್ಕ, ತಿಮ್ಮಪ್ಪ ಜಂಗಮುಗೇರು ಸಂಪ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್ ಹಾಗೂ ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶುಭಾಷಿನಿ, ವಿನಯಕುಮಾರ್, ಅರ್ಜುನ್ ಭಾಸ್ಕರ್, ಪ್ರಶಾಂತಿ, ಡಿಸಿ ಬ್ಯಾಂಕ್ ದರ್ಬೆ ಶಾಖೆಯ ಪ್ರಬಂಧಕ ಕೇಶವ್, ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮೇಲ್ವಿಚಾರಕ ಶರತ್ ಕುಮಾರ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ ರೈ, ಪೂರ್ಣಿಮಾ ರೈ, ಮಾಜಿ ಸದಸ್ಯರಾದ ಜಯಪ್ರಕಾಶ್ ರೈ ಕುರಿಯ, ಜಬ್ಬಾರ್ ಸಂಪ್ಯ, ನವೀನ್ ರೈ ಬಳ್ಳಮಜಲು, ನವೋದಯ ಸಂಘದ ಸದಸ್ಯರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೊಸೈಟಿ ಸಿಬ್ಬಂದಿ ಉಮೇಶ್ ಎಸ್.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಚಂದ್ರಕಲಾ ಓಟೆತ್ತಿಮಾರು ವಂದಿಸಿದರು.‌


“ಸರ್” ಎಂದು ಮಾತಾಡಿಸುವ ಗುಣ ಬಾಲ್ಯೊಟ್ಟುರವರದ್ದು…
ಡಿಸಿಸಿ ಬ್ಯಾಂಕ್ ನಿರ್ದೇಶಕರು, ಪ್ರಸ್ತುತ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿರುವ ಶಶಿಕುಮಾರ್ ರೈಯವರು ವಿವಿಧ ಸಂಘಸಂಸ್ಥೆಗಳಲ್ಲಿ ನಿರ್ದೇಶಕರಾಗಿ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದವರಾಗಿದ್ದಾರೆ. ಜಿಲ್ಲೆಯ ಸಹಕಾರಿ ಸಂಘಗಳ ಬೆಳವಣಿಗೆಗೆ ಶಶಿಕುಮಾರ್ ರೈಯವರ ಕೊಡುಗೆ ಬಹಳಷ್ಟಿದೆ. ನಮ್ಮ ಆರ್ಯಾಪು ಸೊಸೈಟಿ ಹಾಗೂ ಡಿಸಿಸಿ ಬ್ಯಾಂಕ್ ಜೊತೆಗೆ ಅಭಿವೃದ್ಧಿಯ ಕೊಂಡಿಯಾಗಿ ಶಶಿಕುಮಾರ್ ರೈಯವರು ಕಾರ್ಯನಿರ್ವಹಿಸಿದ್ದಾರೆ. ಶಶಿಕುಮಾರ್ ರೈಯವರು ಪಕ್ಷ ರಾಜಕಾರಣ ಮಾಡದೆ ರಾಜಕೀಯ ರಹಿತವಾಗಿ ಸಹಕಾರಿ ಕ್ಷೇತ್ರದಲ್ಲಿ ಅವರು ದುಡಿದಿದ್ದಾರೆ. ಎಲ್ಲರನ್ನೂ “ಸರ್” ಎಂದು ಮಾತನಾಡಿಸಿಕೊಳ್ಳುವ ಶಶಿಕುಮಾರ್ ರೈಯವರು ಸಹಕಾರಿ ಸಂಘದಲ್ಲಿ ಆರೋಪಗಳು ಬಂದಾಗ ಅವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಚಾಕಚಾಕ್ಯತೆ ಅವರದಾಗಿತ್ತು. ಯಾರಿಗೇ ಆಗಲಿ, ಅಧಿಕಾರ ಕೊಡುವ ಮೊದಲು ಅರ್ಹನೋ, ಅನರ್ಹನೋ ತುಲನೆ ಮಾಡುವುದು ಸರಿಯಲ್ಲ, ಅಧಿಕಾರ ಕೊಟ್ಟು ಮತ್ತೆ ತುಲನೆ ಮಾಡಿಕೊಳ್ಳಲಿ.
-ಎಚ್.ಮಹಮ್ಮದ್ ಆಲಿ, ಅಧ್ಯಕ್ಷರು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ

LEAVE A REPLY

Please enter your comment!
Please enter your name here