ನೆಲ್ಯಾಡಿ: ದೇಶದ ಅತಿ ಶ್ರೀಮಂತ ದೇವಸ್ಥಾನವಾಗಿರುವ ದೇವರ ನಾಡು ಕೇರಳದ ತಿರುವನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಕೊಕ್ಕಡ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ ಅವರು ಇದೀಗ ಮಹಾಪ್ರಧಾನ ಅರ್ಚಕರಾಗಿ ಬಡ್ತಿ ಹೊಂದಿದ್ದಾರೆ.
ಕೊಕ್ಕಡ ದಿ.ಸುಬ್ರಾಯ ತೋಡ್ತಿಲ್ಲಾಯ ಅವರ ಪುತ್ರ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ ಅವರು ಆರು ತಿಂಗಳ ಹಿಂದೆ ಶ್ರೀ ಅನಂತಪದ್ಮನಾಭ ದೇವಾಲಯಕ್ಕೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡಿದ್ದರು. ಇದೀಗ ಅವರಿಗೆ ಅತ್ಯಲ್ಪ ಅವಧಿಯಲ್ಲೇ ಮಹತ್ತರ ಗೌರವದ ಮಹಾಪ್ರಧಾನ ಅರ್ಚಕ ಸ್ಥಾನ(ಪೆರಿಯ ನಂಬಿ-ಛತ್ರಿ ಮರ್ಯಾದೆ)ಪ್ರಾಪ್ತಿಯಾಗಿದೆ. ಈವರೆಗೆ ಈ ಹುದ್ದೆ ನಿರ್ವಹಿಸಿದವರು ಕೊಕ್ಕಡದ ಹಲವರು ಇದ್ದರೂ ಅವರಿಗೆ ಜೀವನದ ಸಂಧ್ಯಾಕಾಲದಲ್ಲಿ ಈ ಹುದ್ದೆ ಲಭಿಸಿತ್ತು. ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ಕಿರಿಯ ವಯಸ್ಸಿನಲ್ಲೇ ಈ ಹುದ್ದೆ ಪ್ರಾಪ್ತಿಯಾಗಿದ್ದು ಜ.30ರಂದು ಹುದ್ದೆ ವಹಿಸಿಕೊಂಡಿದ್ದಾರೆ.