ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

0

ಧರ್ಮ ಬಲಗೊಳ್ಳಬೇಕಾದರೆ ಧರ್ಮದ ಅನುಷ್ಠಾನ ಮುಖ್ಯ : ಒಡಿಯೂರು ಶ್ರೀ

ಕಡಬ: ಮನೆ ಮನೆಗಳಲ್ಲಿ ಭಗವನ್ನಾಮ ಸಂಕೀರ್ತನೆಗಳು ನಡೆಯಬೇಕು. ಧರ್ಮ ಬಲಗೊಳ್ಳಬೇಕಾದರೆ ಧರ್ಮದ ಅನುಷ್ಠಾನ ಮುಖ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


ಅವರು ಕಡಬದ ಶ್ರೀ ದುಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದ್ದ 42ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾವು ನಿರ್ಮಲ ಮನಸ್ಸಿನಿಂದ ದೇವರನ್ನು ದ್ಯಾನಿಸಿದರೆ ನಮಗೆ ದೇವರ ಅನುಗ್ರಹದ ಜತೆಗೆ ಶಾಂತಿ ಮತ್ತು ಸಮಾಧಾನದಿಂದ ಬದುಕಬಹುದು. ನಿರ್ಮಲ ಮನಸ್ಸಿಗೆ ದೇವರು ಶೀಘ್ರ ಒಲಿಯುತ್ತಾನೆ. ನಮ್ಮ ಇಂದ್ರಿಯಗಳಿಗೆ ದಾಸನಾದರೆ ನಮಗೆ ಏಕಾಗ್ರತೆ ಬರುವುದಿಲ್ಲ, ಕಲಿಯುದಲ್ಲಿ ಭಗವಂತನ ಅನುಸಂಧಾನಕ್ಕೆ ಭಜನೆಯು ಅತ್ಯಂತ ಸುಲಭದ ದಾರಿಯಾಗಿದೆ ಕೃತಯುಗದಲ್ಲಿ ಧ್ಯಾನ, ದ್ವಾಪರ ಯುಗದಲ್ಲಿ ಅರ್ಚನೆ, ತ್ರೇತಾಯುಗದಲ್ಲಿ ಯಜ್ಞ ಯಾಗಗಳು ಮಹತ್ವ ಪಡೆದಿದ್ದರೆ ಕಲಿಯುಗದಲ್ಲಿ ಭಜನೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಭಜನೆಯಿಂದ ಭಾವಶುದ್ಧಿಯಾಗುತ್ತದೆ. ಆದುದರಿಂದ ಜೀವನದಲ್ಲಿ ಸಂಸ್ಕಾರ ಎನ್ನುವುದು ಅತ್ಯಂತ ಮಹತ್ವದ್ದು. ಸಂಸ್ಕಾರರಹಿತ ಶಿಕ್ಷಣ ಅಪೂರ್ಣ ಎಂದ ಶ್ರೀಗಳು ಭಜನೆಯ ಮೂಲಕ ಧಾರ್ಮಿಕ ಕ್ಷತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ಕಡಬದ ಶ್ರೀ ದುಗಾಂಬಿಕಾ ಭಜನಾ ಮಂಡಳಿಯ ಕಾರ್ಯ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಧಾರ್ಮಿಕ ಉಪನ್ಯಾಸ ನೀಡಿದ ವಾಗ್ಮಿ ಬಾರ್ಕೂರಿನ ಎನ್.ಆರ್.ದಾಮೋದರ ಶರ್ಮ ಅವರು, ನಮ್ಮ ಉನ್ನತಿಗೆ ಪ್ರೇರಣೆ ನೀಡಿದ ಹಿರಿಯರನ್ನು ನಮ್ಮ ಜೀವನದಲ್ಲಿ ಮರೆಯಬಾರದು ಅವರ ವ್ಯಕ್ತಿತ್ವ ನಮಗೆ ಆದರ್ಶವಾಗಬೇಕು, ಮಕ್ಕಳಿಗೆ ಎಳೆವೆಯಿಂದಲೇ ದೇವಸ್ಥಾನ, ಭಜನೆ, ಭಜನ ಮಂದಿರಗಳ ಕುರಿತು ಆಸಕ್ತಿ ಬರುವ ರೀತಿಯಲ್ಲಿ ಅವರನ್ನು ಹೆತ್ತವರು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಮಕ್ಕಳು ಹೆಮ್ಮೆ ಪಡುವ ರೀತಿಯಲ್ಲಿ ಅವರನ್ನು ಬೆಳೆಸಬೇಕು, ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತರುವ ಕೆಲಸ ಹಿರಿಯರಿಂದ ಆಗಬೇಕು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರು ಧರ್ಮದ ವಿಚಾರ ಬಂದಾಗ ನಾವೆಲ್ಲರೂ ಜಾತಿ ವಿಚಾರವನ್ನು ಮರೆತು ಒಂದಾಗಿ ಕೆಲಸ ಮಾಡಬೇಕು ಎಂದರು. ಬಲ್ಯ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಕನ್ಯಾನದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಅವರು ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಪೆಲತ್ತೋಡಿ ಉಪಸ್ಥಿತರಿದ್ದರು.


ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕೋಡಿಂಬಾಳದ ಸುರೇಂದ್ರ ನಾಕ್ ಕುಕ್ಕೆರೆಬೆಟ್ಟು ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಿಶನ್‌ಕುಮಾರ್ ರೈ ಪೆರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ಜರಗಿದ 63ನೇ ವರ್ಷದ ಏಕಾಹ ಭಜನೆಯಲ್ಲಿ ಉಳಿಕೆಯಾದ ಹಣದಲ್ಲಿ ದೇವಸ್ಥಾನದ ವಠಾರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.


ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ ಸ್ವಾಗತಿಸಿದರು. ಅಧ್ಯಕ್ಷ ಸೋಮಪ್ಪ ನಾಕ್ ಪ್ರಸ್ತಾವನೆಗೈದು ವಂದಿಸಿದರು. ದಯಾನಂದ ಆಚಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು ಲಕುಮಿ ತಂಡದ ಕುಸಲ್ದ ಕಲಾವಿದರು ಮಂಗಳೂರು ಇವರು ಅಭಿನಯಿಸಿದ ಗಡಿನಾಡ ಬೊಳ್ಳಿ ಸುರೇಶ್ ಮಂಜೇಶ್ವರ ರಚನೆಯ ಲಯನ್ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ವಿಭಿನ್ನ ಅಭಿನಯದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನ ನಡೆಯಿತು.


ಸತ್ಯನಾರಾಯಣ ಪೂಜೆ:
ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ ಕಡಬದ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಸಂಜೆ ಗಂಟೆಗೆ ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪುರೋಹಿತ ಕೆಂಚಭಟ್ರೆ ಸುಬ್ರಹ್ಮಣ್ಯ ಬೈಪಾಡಿತ್ತಾಯ ಅವರ ನೇತೃತ್ವದಲ್ಲಿ ಕಲಶ ಪ್ರತಿಷ್ಠೆಗೊಂಡು ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಕಡಬ ಎಸ್‌ಐ ಅಭಿನಂದನ್ ಎಂ.ಎಸ್. ಅವರು ವೇದಿಕೆಯಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here