ದ.ಕ. ಜಿಲ್ಲೆಗೆ ಅತ್ಯುತ್ತಮ ಜಿಲ್ಲಾ ಪಂ. ಪುರಸ್ಕಾರ, ಕಡಬ ತಾಲೂಕಿಗೆ ಅತ್ಯುತ್ತಮ ತಾಲೂಕು ಪುರಸ್ಕಾರ, ಆಲಂಕಾರು ಅತ್ಯುತ್ತಮ ಗ್ರಾ. ಪಂಚಾಯತ್
ಪುತ್ತೂರು: ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿವಿಧ ಹಂತದ ಪಂಚಾಯತಿಗಳ ಮತ್ತು ಅನುಷ್ಠಾನ ಇಲಾಖೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
2023-24ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳು ಅನುಷ್ಠಾನ ಇಲಾಖೆಗಳನ್ನು ಗುರುತಿಸಿ ನರೇಗಾ ಹಬ್ಬ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ನರೇಗಾ ಹಬ್ಬ-2025 ಫೆ.5 ರಂದು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ. ಅತ್ಯುತ್ತಮ ತಾಲೂಕು ಪಂಚಾಯತ್ ಪುರಸ್ಕಾರಕ್ಕೆ ಕಡಬ ತಾಲೂಕು ಆಯ್ಕೆಯಾಗಿದೆ. ಅತ್ಯುತ್ತಮ ಗ್ರಾಮ ಪಂಚಾಯತ್ ಪುರಸ್ಕಾರಕ್ಕೆ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಆಲಂಕಾರು ಗ್ರಾ.ಪಂ
2023- 24 ನೇ ಸಾಲಿನಲ್ಲಿ ಆಲಂಕಾರು ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 47.5 ಲಕ್ಷ ರೂ ಕೂಲಿಗೆ, 21.33 ಲಕ್ಷ ರೂ ಸಾಮಾಗ್ರಿಗೆ ಸೇರಿ 68.83 ಲಕ್ಷ ಹಣವನ್ನು ವಿನಿಯೋಗಿಸಿದೆ. ಈ ಸಾಲಿನಲ್ಲಿ ಸಮುದಾಯ ಕಾಮಗಾರಿಗಳಾದ ಸಂಜೀವಿನಿ ಶೆಡ್ಡು ರಚನೆ, ಕೊಳವೆ ಬಾವಿಗೆ ಮರುಪೂರಣ ಘಟಕ, ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ ದ್ರವ ತ್ಯಾಜ್ಯ ಗುಂಡಿ ರಚನೆ, ಪಂಚಾಯತ್ ಎದುರುಗಡೆ ಉದ್ಯಾನವನ ರಚನೆ ಹಾಗೂ ವೈಯಕ್ತಿಕ ಕಾಮಗಾರಿಗಳಾದ ಅಡಿಕೆ ತೋಟ ರಚನೆ, ಕಾಳು ಮೆಣಸು ,ತೆಂಗು ಹೀಗೆ ತೋಟಗಾರಿಕೆ ಬೆಳೆಗಳು ಮತ್ತು ಆಡು ಶೆಡ್ಡು, ಕೋಳಿ ಶೆಡ್ಡು, ದನದ ಹಟ್ಟಿ ,ತೆರೆದ ಬಾವಿ, ಮನೆ ರಚನೆ, ಶೌಚಾಲಯ ರಚನೆ, ಗೊಬ್ಬರಗುಂಡಿ ರಚನೆ, ಗೋಬರ್ ಗ್ಯಾಸ್ ಘಟಕ, ಎರೆಹುಳ ತೊಟ್ಟಿ ರಚನೆ ಮಾಡಲಾಗಿದೆ. ಈ ಸಾಧನೆಯನ್ನು ಗುರುತಿಸಿ ಆಲಂಕಾರು ಗ್ರಾ.ಪಂ ಪ್ರಶಸ್ತಿಗೆ ಆಯ್ಕೆಯಾಗಿದೆ.