ದೇಶಕ್ಕಾಗಿ ದುಡಿಯುವ ಮನೋಭಾವನೆ ಬರಲಿ- ಆರ್.ಸಿ. ನಾರಾಯಣ
ಪುತ್ತೂರು: ಪುತ್ತೂರಿನಂತಹ ಊರಿನಲ್ಲಿ ಒಬ್ಬಾಕೆ ತಾಯಿ ಇನ್ನೊಬ್ಬ ತಾಯಿಯ ಮಡಿಲು ತುಂಬಿಸುವ ಕೆಲಸ ಮಾಡುತ್ತಿರುವುದಕ್ಕೆ ನಮನ ಸಲ್ಲಿಸುವೆ. ಇಂತಹ ಅದ್ಭುತ ಕಲ್ಪನೆಯೊಂದಿಗೆ
ಸಮಾಜದಲ್ಲಿ ತೊಡಗಿಸಿಕೊಂಡಾಗ ಸಾಮರಸ್ಯ ಸಾಧ್ಯವಿದೆ. ತಾಯಿ ಯಾವತ್ತಿಗೂ ಶಕ್ತಿ ಸ್ವರೂಪಿಣಿಯಾಗಿದ್ದು ಜಗತ್ತಿನ ಇತಿಹಾಸದಲ್ಲಿ ಹನುಮಂತ, ರಾಮ ಹಾಗೂ ಭೀಮ ಇವರಿಗೂ ಶಕ್ತಿ ತುಂಬಿರುವಂತವಳು ತಾಯಿ ಎಂದು ಬಿ.ಜೆ.ಪಿ. ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ ಹೇಳಿದರು.
ಫೆ.2ರಂದು ಮುಕ್ರಂಪಾಡಿ ಸುಭದ್ರ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಮಂಡಲ ಬಿಜೆಪಿ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅವರ ಮಾಲಕತ್ವದ ಮುಕ್ರಂಪಾಡಿಯ ಆಯುರ್ ಬ್ಯೂಟಿ ಸೆಂಟರ್ ನ 12ನೇ ವಾರ್ಷಿಕೋತ್ಸವ, ವಸಂತಲಕ್ಷ್ಮೀ ಮತ್ತು ನ್ಯಾಯವಾದಿ ಶಶಿಧರ್ ದಂಪತಿಯ ವಿವಾಹ ವಾರ್ಷಿಕೋತ್ಸವದ ಬೆಳ್ಳಿಹಬ್ಬ ಆಚರಣೆ, ಗರ್ಭಿಣಿಯರಿಗೆ ಮಡಿಲು ತುಂಬುವ ಶ್ರೇಷ್ಠ ಕಾರ್ಯ ಮತ್ತು ಸ್ವಾವಲಂಬಿ ಮಹಿಳೆ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಆಯೋಜಿಸಲಾಗಿದ್ದ ಉಚಿತ ಸೌಂದರ್ಯ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು 12 ಜನ ಶಿಬಿರಾರ್ಥಿಗಳಿಗೆ ಉಚಿತ ತರಬೇತಿ ನೀಡಿರುವುದು ಶ್ರೇಷ್ಠ ಕಾರ್ಯವಾಗಿದ್ದು ಅದಕ್ಕಾಗಿ ಅಭಿನಂದನೆ ಸಲ್ಲಿಸುವೆ. ದೇಶಕ್ಕಾಗಿ ದುಡಿಯುತ್ತೇನೆ ಎನ್ನುವಂತಹ ಮನೋಭಾವನೆ ಎಲ್ಲಾ ತಾಯಂದಿರಿಗೂ ಬರಬೇಕು ಹಾಗೂ ನಿಮ್ಮ ಈ ನಿಸ್ವಾರ್ಥ ಸೇವೆಯೂ ಹೀಗೆ ಮುಂದುವರಿಯಬೇಕು ಎಂದು ಆರ್.ಸಿ.ನಾರಾಯಣ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳಗಾವಿ ಕೆ. ಎಲ್. ಇ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಜಯಶ್ರೀ ಚುನಮರಿ ಮಾತನಾಡಿ ಎಲ್ಲಿ ನಾವು ಮಹಿಳೆಯರನ್ನು ಪೂಜಿಸಿ ಗೌರವಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ಶರಣರು ಕೂಡ ಮಹಿಳೆಯರಿಗೆ ಪೂಜ್ಯ ಸ್ಥಾನವನ್ನು ಕೊಟ್ಟಿದ್ದಾರೆ. ಆಧುನಿಕ ಮಹಿಳೆ ಪುರುಷನಿಗೆ
ಸಮಾನವಾಗಿ ದುಡಿಯುತ್ತಾಳೆ ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಚಂದ್ರಯಾನದಲ್ಲೂ ಮಹಿಳೆ ಸದಾ ಮುಂಚೂಣಿಯಲ್ಲಿದ್ದಾಳೆ. ಆದರೆ ದುರದೃಷ್ಟವಶಾತ್ ಮಹಿಳೆ ಮನೋರಂಜನೆಯ ಸರಕ್ಕಾಗಿದ್ದಾಳೆ. ಅತ್ಯಾಚಾರ, ಲೈಂಗಿಕ ಕಿರುಕುಳ ಮೊದಲಾದ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾಳೆ ಎಂದರು. ಮಹಿಳೆಯನ್ನು ಗೌರವಯುತವಾಗಿ ಕಾಣುವುದು ಸಮಾಜದ ಮುಖ್ಯ ಜವಾಬ್ದಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ ಅವರು ದುಡಿಯುವವರಿಗೆ ತರಬೇತಿ ನೀಡಿ ನೂರಾರು ಮಂದಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿರುವ ಕಾರ್ಯದ ಜೊತೆಗೆ ಹೆಣ್ಣಿನ ಮಡಿಲು ತುಂಬುವ ಕಾಯಕ ಸಂತೋಷ ತಂದಿದೆ. ಆರೋಗ್ಯವಂತ ಮಗು ಜನಿಸಲಿ ಹಾಗೂ ಮುಂದೆ ಉಜ್ವಲ ಪ್ರತಿಭೆಯಾಗಿ ಬೆಳಗಲಿ ಎಂದು ಹಾರೈಸಿದರು.
ವಸಂತಲಕ್ಷ್ಮೀ ಅವರ ಮಾತೃಶ್ರೀ ವಸುಧಾ ಬಿ.ಎ. ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ವಸಂತಲಕ್ಷ್ಮೀಯವರ ಪಿತಾಶ್ರೀ ಅನಂತರಾವ್ ದೀಪ ಪ್ರಜ್ವಲನೆ ನೆರವೇರಿಸಿದರು. ವಸಂತಲಕ್ಷ್ಮಿ ಅವರ ಪತಿ ನ್ಯಾಯವಾದಿ ಶಶಿಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ವೇದಿಕೆಯಲ್ಲಿದ್ದರು.
ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ದತ್ತಾತ್ರೇಯ ರಾವ್ ಗೀತೆ ಹಾಡಿದರು. ಅದಿತಿಯವರಿಂದ ಭರತನಾಟ್ಯ ನಡೆಯಿತು. ಪ್ರಾಧ್ಯಾಪಕರಾದ ಡಾ. ಶ್ರೀಶಕುಮಾರ್,
ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಸಂಧ್ಯಾ ದತ್ತಾತ್ರೇಯ , ಭಾರತಿ ಅರಿಯಡ್ಕ ಸಹಿತ ಅತಿಥಿಗಳನ್ನು ಮತ್ತು ತರಬೇತಿ ಪಡೆದ ಮಹಿಳಾ ವೃಂದವನ್ನು ಹಾಗೂ ಮಡಿಲು ತುಂಬುವ ಮೂಲಕ ಗರ್ಭಿಣಿ ಮಹಿಳೆಯರನ್ನು ಸನ್ಮಾನಿಸಿದರು.
ಬಿಜೆಪಿ ಮುಂದಾಳುಗಳಾದ ನಾಗೇಶ್ ಪ್ರಭು, ಯುವರಾಜ ಪೇರಿಯತ್ತೋಡಿ,ಹರಿಪ್ರಸಾದ್ ಯಾದವ್ ,ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತಿತರರು ಹಾಜರಿದ್ದರು.ದೀಕ್ಷಾ ಎ. ಪ್ರಾರ್ಥಿಸಿದರು. ಆರಾಧ್ಯ ನೃತ್ಯ ತರಬೇತಿ ಕೇಂದ್ರದ ಪೂರ್ಣಿಮಾ ಪ್ರದೀಪ್ ಸ್ವಾಗತಿಸಿ, ಪರಮೇಶ್ವರಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೌಂದರ್ಯ ತರಬೇತಿ ಪಡೆದ ತಂಡದವರು ಮತ್ತು ಆರಾಧ್ಯ ನೃತ್ಯ ತಂಡದವರು ವಸಂತಲಕ್ಷ್ಮಿ ಮತ್ತು ಶಶಿಧರ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.