ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಚೆಲ್ಯಡ್ಕ ಮುಳುಗು ಸೇತುವೆಗೆ ಕಾಯಕಲ್ಪ

0


ನಿಡ್ಪಳ್ಳಿ: ಮುಳುಗು ಸೇತುವೆ ಎಂದು ಖ್ಯಾತಿ ಪಡೆದ ಚೆಲ್ಯಡ್ಕ ಸೇತುವೆ ಇನ್ನು ಮುಂದೆ ಸರ್ವಋತು ಸೇತುವೆಯಾಗಿ ನಿರ್ಮಾಣವಾಗಲಿದೆ.ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಕಾಮಗಾರಿ ಪ್ರಾರಂಭ ಗೊಂಡಿದ್ದು ಭರದಿಂದ ಸಾಗುತ್ತಿದೆ.
ಹಳೆಯ ಸೇತುವೆಯನ್ನು ಕೆಡವಿ ಹೊಸ ಸೇತುವೆಯ ಪಿಲ್ಲರ್‌ಗೆ ಅಡಿಪಾಯ ನಿರ್ಮಾಣ ಮಾಡಲು ಕಾಮಗಾರಿ ನಡೆಯುತ್ತಿದೆ.ಮುಂದಿನ ಮಳೆಗಾಲದ ಒಳಗಡೆ ಕಾಮಗಾರಿ ಮುಗಿಸುವಂತೆ ಶಾಸಕರು ಸೂಚಿಸಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ.


ಚೆಲ್ಯಡ್ಕ ಸೇತುವೆ ಕಾಮಗಾರಿ ಹೊಸದಾಗಿ ಪ್ರಾರಂಭಿಸಿರುವುದರಿಂದ ಈ ರಸ್ತೆಯಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಘನ ವಾಹನ ಸಂಚಾರ ಸಂಪೂರ್ಣ ನಿಷೇಽಸಿ ಜಿಲ್ಲಾಽಕಾರಿ ಹೊರಪಡಿಸಿರುವ ಆದೇಶ ಜಾರಿಯಲ್ಲಿದೆ. ಬೆಟ್ಟಂಪಾಡಿ,ನಿಡ್ಪಳ್ಳಿ, ಪಾಣಾಜೆಯಿಂದ ಪುತ್ತೂರು ಕಡೆಗೆ ಹೋಗುವ ವಾಹನಗಳು ಸಂಟ್ಯಾರು ರಸ್ತೆ ಮೂಲಕ ಸಂಚರಿಸುತ್ತಿವೆ.ವಿಟ್ಲ, ದೇವಸ್ಯ ಮೂಲಕ ಬೆಟ್ಟಂಪಾಡಿ ಕಡೆಗೆ ದೇವಸ್ಯ- ಬೈರೋಡಿ- ಕಾಪಿಕಾಡು- ಕೈಕಾರ ಮಾರ್ಗದ ಮೂಲಕ ಸಂಚರಿಸುವಂತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.


ಸೇತುವೆಯ ಪುನರ್ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಿರ್ಮಾಣ ಕಾಮಗಾರಿ ಆರಂಭಿಸಲು ವಿಳಂಬವಾಗಿತ್ತು. ಮಳೆಗಾಲದಲ್ಲಿ ಮುಳುಗಡೆ ಯಾಗುತ್ತಿರುವ ಸೇತುವೆಯನ್ನು ಈ ಬಾರಿಯ ಮಳೆಗಾಲದಲ್ಲಿ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ತಂಡದೊಂದಿಗೆ ಜಿಲ್ಲಾಽಕಾರಿ ಮುಲೈನ್ ಮುಗಿಲನ್ ಭೇಟಿ ನೀಡಿ ವೀಕ್ಷಣೆ ಮಾಡಿ ಸ್ಥಳೀಯ ಆಡಳಿತದ ಮಾಹಿತಿ ಪಡೆದು ಕೊಂಡಿದ್ದರು.


ಸೇತುವೆ ನಿರ್ಮಾಣದಿಂದ ಹಲವು ಅಹಿತಕರ ಘಟನೆಗಳು ಸಂಭವಿಸುವುದು ತಪ್ಪಲಿದೆ. ಅಲ್ಲದೆ ಮಳೆಗಾಲದಲ್ಲಿ ವಿಪತ್ತು ನಿರ್ವಹಣಾ ತಂಡ, ಪೊಲೀಸ್ ಇಲಾಖೆಯವರಿಗೆ ಇದ್ದ ತಲೆಬಿಸಿ, ಒತ್ತಡ ಕಡಿಮೆಯಾಗಲಿದ್ದು ಈ ಭಾಗದ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ.


ತಾತ್ಕಾಲಿಕ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ….:
ಸೇತುವೆಯ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಹೊಳೆಯ ನೀರು ಹರಿದು ಹೋಗಲು ಮೂರು ನಾಲ್ಕು ಪೈಪು ಗಳನ್ನು ಅಳವಡಿಸಲಾಗಿದೆ. ಇದರ ಮೇಲೆ ಲಘು ವಾಹನ ಸಂಚರಿಸಲು ಮಣ್ಣು ಹಾಕಿ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.ಆದರೆ ಈಗ ಈ ರಸ್ತೆಯಲ್ಲಿ ಘನ ವಾಹನ ಅನಧಿಕೃತವಾಗಿ ಸಂಚರಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು ಪೊಲೀಸ್ ಇಲಾಖೆ, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈ ಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


ಸೇತುವೆಯ ಗಾತ್ರ ಈ ರೀತಿ; ನೂತನ ಸರ್ವಋತು ಸೇತುವೆಯು 20.8ಮೀ. ಉದ್ದ, 10ಮೀ. ಅಗಲ ಹೊಂದಿದ್ದು, ನದಿ ಪಾತ್ರ ದಿಂದ 5ಮೀ ಎತ್ತರ ಹೊಂದಲಿದ್ದು,ಮಳೆಗಾಲದ ಮೊದಲು ನೂತನ ಸರ್ವಋತು ಸೇತುವೆ ಲೋಕಾರ್ಪಣೆ ಗೊಳ್ಳುವ ಭರವಸೆಯನ್ನು ಅಽಕಾರಿಗಳು ನೀಡಿದ್ದಾರೆ. ಈ ಮೂಲಕ ಬ್ರಿಟಿಷರ ಕಾಲದ ಸೇತುವೆಯೊಂದಕ್ಕೆ ಕಾಯಕಲ್ಪ ಸಿಗಲಿದೆ.

ರೂ. 300.00 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ .ಲಘು ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.ಬರುವ ಮಳೆಗಾಲದೊಳಗೆ ಸರ್ವಋತು ಸೇತುವೆ ನಿರ್ಮಾಣಗೊಳ್ಳಲಿದೆ.
ರಾಜೇಶ್ ರೈ,
ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ


ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.ಸೇತುವೆ ನಿರ್ಮಾಣದಿಂದ ಹಲವು ಅಪಾಯಗಳು ಮತ್ತು ಕಾರ್ಯದ ಒತ್ತಡ ಕಡಿಮೆಯಾಗಲಿದ್ದು ಸಾರ್ವಜನಿಕರಿಗೆ ಇದರಿಂದ ಬಹಳ ಪ್ರಯೋಜನವಾಗಿದೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಇರ್ದೆ ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರ ಒತ್ತಡದಿಂದ ಶಾಸಕರ ಮೊದಲ ಪ್ರಾಶಸ್ತ್ಯದ ಪ್ರಯತ್ನದಿಂದ ನಿರ್ಮಾಣವಾಗುತ್ತಿದ್ದು ಈ ಭಾಗದ ಸುತ್ತಮುತ್ತಲ ಹಲವು ಗ್ರಾಮಕ್ಕೆ ಅನುದಾನ ಕೊಟ್ಟ ಹಾಗೆ ಆಗಿದೆ. ಆದುದರಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಬೆಟ್ಟಂಪಾಡಿ ವಲಯ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ.
ಮೊಯಿದು ಕುಂಞ ಕೋನಡ್ಕ, ಸದಸ್ಯರು ಗ್ರಾ.ಪಂ. ಬೆಟ್ಟಂಪಾಡಿ.

LEAVE A REPLY

Please enter your comment!
Please enter your name here