ಕುಟ್ರುಪಾಡಿ ಗ್ರಾ.ಪಂ. ಗ್ರಾಮಸಭೆ – ಬಹುತೇಕ ಇಲಾಖಾಧಿಕಾರಿಗಳ ಗೈರು : ಗ್ರಾಮಸ್ಥರಿಂದ ಆಕ್ರೋಶ-ಸಭೆ ಮುಂದೂಡಿಕೆ

0

ಕಡಬ: ಬಹುತೇಕ ಇಲಾಖಾಧಿಕಾರಿಗಳು ಗೈರುಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡ ಕಾರಣ ಗ್ರಾಮಸಭೆ ಮುಂದೂಡಿದ ಘಟನೆ ಫೆ.3ರಂದು ನಡೆದಿದೆ.


ಗ್ರಾಮಸಭೆಗೆ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಸಮಾಜ ಕಲ್ಯಾಣ, ಕೆ.ಎಸ್.ಆರ್.ಟಿ.ಸಿ, ತೋಟಗಾರಿಕಾ, ಅರಣ್ಯ ಇಲಾಖೆ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಉಳಿದ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಪ್ರತಿ ಭಾರಿಯೂ ಗ್ರಾಮಸಭೆಗೆ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿತ್ತು. ಈ ಬಾರಿಯೂ ಬಹುತೇಕ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿರುವುದರಿಂದ ಗ್ರಾಮಸ್ಥರು ಗೈರು ಹಾಜರಾಗಿರುವ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಮ್ಯಾತ್ಯೂ ಟಿ.ಎಂ. ಮಾತನಾಡಿ ಇಲಾಖಾ ಅಧಿಕಾರಿಗಳು ಬಾರದೆ ಇದ್ದರೆ ಗ್ರಾಮಸಭೆ ಯಾಕೆ, ತಾಲೂಕು ಕೇಂದ್ರಕ್ಕೆ ಸಮೀಪ ಇರುವ ಗ್ರಾ.ಪಂ.ಗೆ ಅಧಿಕಾರಿಗಳು ಬರುವುದಿಲ್ಲ ಅಂದರೆ ಏನರ್ಥ, ಎಂದು ಪ್ರಶ್ನಿಸಿ, 11.30 ರವರೆಗೆ ಕಾದಿದ್ದೇವೆ, ಇನ್ನೂ ಕಾಯುವುದಿಲ್ಲ ಎಂದು ಹೇಳಿದರು. ಎಲ್ಸಿ ತೋಮಸ್, ರೆಬೆಕಾ, ಸೆಬಾಸ್ಟಿಯನ್ ಸೇರಿದಂತೆ ಹಲವಾರು ಗ್ರಾಮಸ್ಥರು ಗೈರು ಹಾಜರಾಗಿರುವ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಿರ್ಣಯ ಬರೆದು ಗ್ರಾಮಸಭೆಯನ್ನು ಮುಂದೂಡಲಾಯಿತು.


ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಸುರೇಶ್ ನೋಡೆಲ್ ಅಧಿಕಾರಿಯಾಗಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಮನ, ಸದಸ್ಯರಾದ ಮೋಹನ ಕೆರೆಕೋಡಿ, ಮಾಧವಿ, ವಿಜಯ ಡಿ, ವಲ್ಸಮ್ಮ ಎ.ಜೆ. ವಾಣಿ ನಾಗೇಶ್, ಲಕ್ಷ್ಮೀಶ ಬಂಗೇರ, ಮೋಹಿನಿ, ಮಹಮ್ಮದಾಲಿ, ಸುಧೀರ್ ದೇವಾಡಿಗ, ಕಿರಣ್ ಗೋಗಟೆ, ಸಂತೋಷ್ ದೋಳ, ಮೀನಾಕ್ಷಿ ನೆಲ್ಲ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ, ಕಾರ್ಯದರ್ಶಿ ಗೋಪಿನಾಥ್ ಡಿ.ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳಾದ ಜಿತೇಶ್ ನಾಲೂರು, ತಾರಾನಾಥ, ಉಮೇಶ್ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here