ಬಜತ್ತೂರು ಗ್ರಾಮಸಭೆ

0

ಜಾಗ ಮಂಜೂರಾದರೂ ಆರಂಭವಾಗದ ಅಂಬೇಡ್ಕರ್ ವಸತಿ ಶಾಲೆ-ಗ್ರಾಮಸ್ಥರ ಆಕ್ರೋಶ

ನೆಲ್ಯಾಡಿ: ಬಿದಿರಾಡಿ ಎಂಬಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗ ಮಂಜೂರುಗೊಂಡು ವರ್ಷಗಳೇ ಕಳೆದರೂ ಶಾಲೆ ಆರಂಭವಾಗದೇ ಇರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಜತ್ತೂರು ಗ್ರಾಮಸಭೆಯಲ್ಲಿ ನಡೆದಿದೆ.ಸಭೆ ಜ.31ರಂದು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ನೆಕ್ಕರಾಜೆ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಅವರು ನೋಡೆಲ್ ಅಧಿಕಾರಿಯಾಗಿದ್ದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲೋಕೇಶ್ ಅವರು ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪ್ರಶಾಂತ್ ಬಿದಿರಾಡಿ ಅವರು, ಬಿದಿರಾಡಿಯಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗ ಮಂಜೂರುಗೊಂಡು ವರ್ಷ ಕಳೆದಿದೆ. ಅಲ್ಲಿ ಬೋರ್ಡ್ ಸಹ ಹಾಕಲಾಗಿದೆ. ಆದರೆ ಶಾಲೆ ಇನ್ನೂ ಆರಂಭಗೊಂಡಿಲ್ಲ. ಇಲ್ಲಿಗೆ ಮಂಜೂರುಗೊಂಡಿರುವ ಶಾಲೆ ಬೇರೆ ಕಡೆಗೆ ಸ್ಥಳಾಂತರ ಆಗುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸಂತೋಷ್ ಪಂರ್ದಾಜೆ, ಉಮೇಶ್ ಒಡ್ರಪಾಲು, ಮಾಧವ ಪೂಜಾರಿ ಅವರು, ಪಡ್ಡಾಯೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಈಗ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದೆ. ಬಿದಿರಾಡಿಯಲ್ಲಿ 6.20 ಎಕ್ರೆ ಜಾಗ ಅಂಬೇಡ್ಕರ್ ವಸತಿ ಶಾಲೆಗೆ ಮಂಜೂರು ಆಗಿದೆ. ಈ ಹಿಂದಿನ ಶಾಸಕ ಸಂಜೀವ ಮಠಂದೂರು ಅವರು ಅವರ ಅವಧಿಯ ಕೊನೆಗೆ 25 ಕೋಟಿ ರೂ.ಅನುದಾನ ಕಾದಿರಿಸಿದ್ದರು. ಆದರೆ ನಂತರ ಸರಕಾರ ಬದಲಾಗಿರುವುದರಿಂದ ಅನುದಾನ ಬಂದಿಲ್ಲ, ಬಿದಿರಾಡಿಯಲ್ಲಿ ಮೊರಾರ್ಜಿ ವಸತಿ ಶಾಲೆಗೂ 17 ಎಕ್ರೆ ಜಾಗ ಕಾದಿರಿಸಲಾಗಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಪಿ.ಎನ್.ಅವರು, ಇಲಾಖೆಯಿಂದ ಪಂಚಾಯತ್‌ಗೆ ಪತ್ರ ಬಂದಿರುವುದರಿಂದ ಬಿದಿರಾಡಿಯಲ್ಲಿ ಜಾಗ ಗುರುತಿಸಿಕೊಡಲಾಗಿದೆ. ಅಲ್ಲಿ ಕಟ್ಟಡ ನಿರ್ಮಿಸಿ ಶಾಲೆ ಆರಂಭಿಸಲು ಸರಕಾರ ಮತ್ತು ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪಂಚಾಯತ್‌ನಿಂದಲೂ ಪತ್ರ ಬರೆಯಲಾಗಿದೆ ಎಂದರು. ಗ್ರಾಮಸ್ಥರಾದ ಜಗದೀಶ್, ಪುನೀತ್, ವಿಲ್ಪ್ರೆಡ್, ಗೋಪಾಲ ದಡ್ಡು ಮತ್ತಿತರರು ವಸತಿ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದರು. ಬಳಿಕ ಈ ವಿಚಾರವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲೋಕೇಶ್ ಅವರು ದೂರವಾಣಿ ಮೂಲಕ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಜಾಗ ಮಂಜೂರಾತಿ ಆಗಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಮುಂದಿನ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇರುವುದಾಗಿ ಮೇಲಾಧಿಕಾರಿಗಳು ಮಾಹಿತಿ ನೀಡಿರುವುದಾಗಿ ಬಳಿಕ ಅವರು ಸಭೆಗೆ ತಿಳಿಸಿದರು. ಈ ಬಗ್ಗೆ ಗ್ರಾಮ ಪಂಚಾಯತ್‌ನಿಂದಲೂ ಪತ್ರ ಬರೆಯುತ್ತೇವೆ ಎಂದು ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ತಿಳಿಸಿ ಚರ್ಚೆಗೆ ತೆರೆ ಎಳೆದರು.

ಮೇಲೂರು ಕೆರೆ ಅಭಿವೃದ್ಧಿ ವಿಚಾರ-ಚರ್ಚೆ:
ಮೇಲೂರು ಎಂಬಲ್ಲಿ 60 ಸೆಂಟ್ಸ್ ಸರಕಾರಿ ಜಾಗ, 40 ಸೆಂಟ್ಸ್ ಖಾಸಗಿ ಜಾಗ ಸೇರಿ 1 ಎಕ್ರೆಯಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ 82 ಲಕ್ಷ ರೂ.ಖರ್ಚು ಮಾಡಲಾಗಿದೆ. ಖಾಸಗಿಯವರಿಂದ ಜಾಗ ಪಡೆದು ಇಷ್ಟೊಂದು ಖರ್ಚು ಮಾಡಿ ಕೆರೆ ಅಭಿವೃದ್ಧಿ ಪಡಿಸುವ ಬದಲು ಸರಕಾರಿ ಜಾಗದಲ್ಲೇ ಇದ್ದ ಕೆರೆ ಅಭಿವೃದ್ಧಿ ಪಡಿಸಬಹುದಿತ್ತಲ್ವಾ ಎಂದು ಗ್ರಾಮಸ್ಥ ಮಹೇಂದ್ರ ವರ್ಮ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಪಿ.ಎನ್.ಅವರು, ಖಾಸಗಿ ಜಾಗದವರು ದಾನ ಪತ್ರದ ಮೂಲಕ 40 ಸೆಂಟ್ಸ್ ಜಾಗವನ್ನು ಪಂಚಾಯತ್‌ಗೆ ಕೊಟ್ಟಿದ್ದಾರೆ ಎಂದರು. ದಾನಪತ್ರದ ಮೂಲಕ ಜಾಗ ಕೊಟ್ಟಿದ್ದಲ್ಲಿ ಅವರಿಗೆ ಪರಿಹಾರ ಕೊಡಬೇಕಾಗುತ್ತದೆ ಎಂದು ಮಹೇಂದ್ರ ವರ್ಮ ಹೇಳಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ವಾರ್ಡ್‌ನ ಸದಸ್ಯ ಗಂಗಾಧರ ಕೆ.ಎಸ್.ಅವರು ಮಾತನಾಡಿ, ಜನರ ಬೇಡಿಕೆ ಇದ್ದ ಕಾರಣ ಮೊದಲು ಇದ್ದ ಕೆರೆಯನ್ನೇ ಅಭಿವೃದ್ಧಿ ಪಡಿಸಲಾಗಿದೆ. ಖಾಸಗಿ ವ್ಯಕ್ತಿ ಸ್ವ ಇಚ್ಛೆಯಿಂದಲೇ ಜಾಗ ಬಿಟ್ಟುಕೊಡುವುದಾಗಿ ಹೇಳಿದ್ದರು ಎಂದರು. ಬಳಿಕ ಮಾತನಾಡಿದ ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ಜಿಲ್ಲಾ ಪಂಚಾಯತ್‌ನ ಅನುದಾನದಲ್ಲಿ ಕೆರೆ ಅಭಿವೃದ್ಧಿ ಆಗಿದ್ದು ಪಂಚಾಯತ್‌ಗೆ ಹಸ್ತಾಂತರವೂ ಆಗಿದೆ. ನಿರ್ವಹಣೆಗೆ ಸಮಿತಿ ರಚನೆ ಆಗಿಲ್ಲ. ಸಮಿತಿ ರಚನೆ ಮಾಡುವುದಾಗಿ ಹೇಳಿದರು.

ವಿದ್ಯುತ್ ತಂತಿ ಬದಲಾಯಿಸಿ:
ಎಂಜಿರಡ್ಕ, ಪಡ್ಪು ಭಾಗದಲ್ಲಿ ವಿದ್ಯುತ್ ತಂತಿಗಳು ಬಹಳ ಹಳೆಯದಾಗಿದ್ದು ತುಂಡಾಗಿ ಬೀಳುತ್ತಿವೆ. ತಂತಿ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರೂ ಬದಲಾವಣೆ ಮಾಡಿಲ್ಲ ಎಂದು ಗ್ರಾಮಸ್ಥ ಮಹೇಂದ್ರ ವರ್ಮ, ಸದಸ್ಯ ಉಮೇಶ್ ಒಡ್ರಪಾಲು ಹಾಗೂ ಇತರರು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಅವರು, ತಂತಿ ಬದಲಾವಣೆಗೆ ಅನುದಾನ ಕೋರಿ ಪತ್ರ ಬರೆದಿದ್ದೇವೆ. ಅನುದಾನ ಬಂದ ಕೂಡಲೇ ಮೊದಲ ಆದ್ಯತೆಯಲ್ಲಿ ಎಂಜಿರಡ್ಕ, ಪಡ್ಪು ಭಾಗದ ವಿದ್ಯುತ್ ತಂತಿ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅರಣ್ಯ ಇಲಾಖೆ ಜಾಗ ಅತಿಕ್ರಮಣ:
ಬಿದಿರಾಡಿಯಲ್ಲಿ ಅರಣ್ಯ ಇಲಾಖೆ ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಜಾಗ ಅವರಿಗೆ ಮಂಜೂರು ಆಗಿದೆ ಎಂದು ಪ್ರಶಾಂತ್ ಬಿದಿರಾಡಿ ಹಾಗೂ ಇತರರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖಾಧಿಕಾರಿ ಕಾಂತರಾಜು ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಜಾಗ ಮಂಜೂರುಗೊಳಿಸಿದಲ್ಲಿ ರದ್ದು ಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ ಅವರು, ನಾಲ್ಕು ವರ್ಷದ ಹಿಂದೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಆಗಿದೆ. ರದ್ದುಗೊಳಿಸಲು ಅವಕಾಶವಿದೆ ಎಂದರು. ಬಿದಿರಾಡಿಯಲ್ಲಿ 1 ಎಕ್ರೆ ಜಾಗದಲ್ಲಿ ಸುಮಾರು 20 ಮನೆಯವರು ಇದ್ದೇವೆ. ನಮಗೂ ಜಾಗದ ಕೊರತೆ ಇದೆ. ನಾವೂ ಅತಿಕ್ರಮಣ ಮಾಡಿಕೊಳ್ಳುತ್ತೇವೆ ಎಂದು ಆ ಭಾಗದ ಗ್ರಾಮಸ್ಥರು ಸಭೆಯಲ್ಲಿ ಹೇಳಿದರು.

ಬೆದ್ರೋಡಿ-ರೆಂಜಾಳ ರಸ್ತೆ ಸಮಸ್ಯೆ:
ಬೆದ್ರೋಡಿ-ರೆಂಜಾಳ ರಸ್ತೆಯ ಬೆದ್ರೋಡಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ದುರಸ್ತಿಗೆ ಅಡ್ಡಿಪಡಿಸುತ್ತಿರುವ ವಿಚಾರವನ್ನು ರಸ್ತೆ ಬಳಕೆದಾರರೂ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಪಿ.ಎನ್.ಅವರು, ಸದ್ರಿ ರಸ್ತೆ ವಿವಾದ ಸುಪ್ರೀಂ ಕೋರ‍್ಟ್ ತನಕವೂ ಹೋಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಅನುದಾನ ಇಡಲಾಗಿದೆ. ಮುಂದಿನ ಎಪ್ರಿಲ್, ಮೇ ತಿಂಗಳಿನಲ್ಲಿ ಕಂದಾಯ, ಪೊಲೀಸ್ ಇಲಾಖೆ ಸಹಕಾರ ಪಡೆದು ಕಾಮಗಾರಿ ನಡೆಸುತ್ತೇವೆ ಎಂದು ಹೇಳಿದರು.

ಶಾಲೆಗೆ ಕಟ್ಟಡ ಕೊಡಿ:
ವಳಾಲು ಸರಕಾರಿ ಶಾಲೆಯಲ್ಲಿ ಹಳೆಯ ಕಟ್ಟಡವಿದ್ದು ಇದನ್ನು ತೆರವುಗೊಳಿಸಿ ಹೊಸ ಕಟ್ಟಡ ರಚನೆ ಮಾಡಬೇಕೆಂದು ಮಹೇಂದ್ರ ವರ್ಮ ಪಡ್ಪು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ತಾಲೂಕಿನಲ್ಲಿ ಸುಮಾರು 200 ರಿಂದ 300 ಶಾಲಾ ಕೊಠಡಿಗಳಿಗೆ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಮಂಜೂರು ಆದ ತಕ್ಷಣ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ನಾದುರಸ್ತಿಯಲ್ಲಿರುವ ಉಪಯೋಗವಿಲ್ಲದ ಕೊಠಡಿಗಳ ನೆಲಸಮಕ್ಕೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಜೆಜೆಎಂ ಕಾಮಗಾರಿ ಸಮರ್ಪಕವಾಗಿಲ್ಲ:
ಜಲಜೀವನ್ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಇದ್ದ ನಳ್ಳಿಗಳಿಗೆ ಬೋರ್ಡ್ ಹಾಕಿ ಹೋಗಿದ್ದಾರೆ. ಪೈಪ್‌ಲೈನ್ ಸಹ ಮಾಡಿಲ್ಲ ಎಂದು ಅಹ್ಮದ್ ಬಾವಾ ನೀರಕಟ್ಟೆ ಆರೋಪಿಸಿದರು.


ಪಶುಸಂಗೋಪನೆ ಇಲಾಖೆಯ ನಾಗಶರ್ಮ ರಾವ್, ವಿಕಲಚೇತನ ಇಲಾಖೆಯ ನವೀನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಜಾತ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್ ಎಂ., ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಆರೋಗ್ಯ ಇಲಾಖೆಯ ಅನ್ನಮ್ಮ ಕೆ.ಸಿ., ಪೊಲೀಸ್ ಇಲಾಖೆಯ ದೇವಿಕಾ, ಅರಣ್ಯ ಇಲಾಖೆಯ ಕಾಂತರಾಜು, ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ, ಶಿಕ್ಷಣ ಇಲಾಖೆಯ ಸಿಆರ್‌ಪಿ ಮಂಜುನಾಥ್ ಕೆ.ವಿ., ತೋಟಗಾರಿಕೆ ಇಲಾಖೆಯವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ಸಂತೋಷ್‌ಕುಮಾರ್, ಮಾಧವ ಪೂಜಾರಿ, ಉಮೇಶ ಓಡ್ರಪಾಲು, ಗಂಗಾಧರ ಕೆ.ಎಸ್., ಸ್ಮಿತಾ, ಭಾಗೀರಥಿ, ಪ್ರೆಸಿಲ್ಲಾ ಡಿ.ಸೋಜ, ಯಶೋಧ, ಅರ್ಪಿತಾ, ಪ್ರೇಮಾ ಬಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಕೆ.ಸ್ವಾಗತಿಸಿದರು. ಕಾರ್ಯದರ್ಶಿ ಕೊರಗಪ್ಪ ಕೆ.,ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here