ಕುಂಬ್ರ ಆಶಾದೀಪ ಸಹಾಯಹಸ್ತ ಟ್ರಸ್ಟ್‌ನಿಂದ ನಾಮ ಫಲಕಗಳ ಕೊಡುಗೆ, ಉದ್ಘಾಟನೆ

0

ಸಮಾಜಮುಖಿ ಚಿಂತನೆಯುಳ್ಳ ಒಂದು ಉತ್ತಮ ಸಂಘಟನೆಯಾಗಿದೆ: ಕಾವು ಹೇಮನಾಥ ಶೆಟ್ಟಿ
ಬಡ ಜನರ ಸೇವೆಯಿಂದ ಭಗವಂತನ ಅನುಗ್ರಹ ಸಾಧ್ಯ : ತ್ರಿವೇಣಿ ಪಲ್ಲತ್ತಾರು

ಪುತ್ತೂರು: ಸಮಾಜದಲ್ಲಿ ಅನಾರೋಗ್ಯ ಪೀಡಿತರಿಗೆ ಬಹಳಷ್ಟು ಅವಶ್ಯಕತೆಗಳಿರುತ್ತವೆ ಇಂತಹ ಅವಶ್ಯಕತೆಗಳನ್ನು ತಿಳಿದುಕೊಂಡು ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿರುವ ಆಶಾದೀಪ ಸಹಾಯಹಸ್ತದಂತಹ ಸಂಘಟನೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ, ಸಮಾಜಮುಖಿ ಚಿಂತನೆಯೊಂದಿಗೆ ನೇರವಾಗಿ ಸಹಾಯ ಮಾಡುವ ಈ ಸಂಘಟನೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅವರು ಆಶಾದೀಪ ಸಹಾಯ ಹಸ್ತ ಟ್ರಸ್ಟ್ ಕುಂಬ್ರ ಮತ್ತು ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಕುಂಬ್ರದ ಜಂಕ್ಷನ್‌ನಲ್ಲಿ ಅಳವಡಿಡಿಸಿರುವ ನಾಮಫಲಕಗಳನ್ನು ಫೆ.5 ರಂದು ಉದ್ಘಾಟನೆ ಮಾಡಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಜನ ಸೇವೆಯೇ ದೇವರ ಸೇವೆಯಾಗಿದ್ದು ಬಡ ಜನರ ಸೇವೆ ಮಾಡುವುದರಿಂದ ಭಗವಂತನ ಅನುಗ್ರಹ ಪಡೆಯಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಆಶಾದೀಪ ಸಹಾಯಹಸ್ತ ಟ್ರಸ್ಟ್ ಹುಟ್ಟಿಕೊಂಡ ರೀತಿ ಸ್ಪೂರ್ತಿದಾಯಕವಾಗಿದೆ. ಟ್ರಸ್ಟ್ ವತಿಯಿಂದ ಬಡ ರೋಗಿಗಳಿಗೆ ಒಂದಷ್ಟು ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲು ಹೊರಟಿರುವುದು ಶ್ಲಾಘನೀಯ ಎಂದ ಅವರು ಗ್ರಾಪಂ ವ್ಯಾಪ್ತಿಯಲ್ಲಿ ನಾಮಫಲಕಗಳನ್ನು ಅಳವಡಿಸುವ ಮೂಲಕ ಒಳ್ಳೆಯ ಕೆಲಸ ಮಾಡಲಾಗಿದೆ ಎಂದು ಅಭಿನಂದನೆ ಸಲ್ಲಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಒಂದು ಸಂಘಟನೆ ಬಲಗೊಳ್ಳಲು ಸಾಧ್ಯವಿದೆ. ಬಡ ರೋಗಿಗಳ ಹಿತರಕ್ಷಣೆಯೊಂದಿಗೆ ಹುಟ್ಟಿಕೊಂಡ ಆಶಾದೀಪ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್, ಕಾರ್ಯದರ್ಶಿ ಭವ್ಯ ರೈ, ಪುರಂದರ ರೈ ಕೋರಿಕ್ಕಾರು, ರಾಜೇಶ್ ರೈ ಪರ್ಪುಂಜ, ನಿತೀಶ್ ಕುಮಾರ್ ಶಾಂತಿವನ, ಉದಯ ಆಚಾರ್ಯ ಕೃಷ್ಣನಗರ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ, ನೌಶಾದ್ ತಿಂಗಳಾಡಿ,ಪಂಚಾಯತ್ ಸಿಬ್ಬಂದಿಗಳು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.


ಆಶಾದೀಪ ಸಹಾಯಹಸ್ತ ಟ್ರಸ್ಟ್‌ನ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟ್‌ನ ಉಪಾಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿದರು. ಟ್ರಸ್ಟ್‌ನ ಸದಸ್ಯರುಗಳಾದ ಪ್ರೇಮ್‌ರಾಜ್ ರೈ ಪರ್ಪುಂಜ, ಮೋಹನದಾಸ ರೈ ಕುಂಬ್ರ, ದಿವಾಕರ ಶೆಟ್ಟಿ, ರೇಷ್ಮಾ ಮೆಲ್ವಿನ್, ಆಶಿಕ್ ಎ.ಆರ್, ಹನೀಫ್, ಸಮತಾ ರೈ ಕೊಪ್ಪಳ ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಮೊಂತೆರೋ ವಂದಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಎ.ಆರ್. ಕಾರ್ಯಕ್ರಮ ನಿರೂಪಿಸಿದರು.


ಹೀಗೆ ಹುಟ್ಟಿಕೊಂಡಿತ್ತು ಆಶಾದೀಪ ಸಹಾಯಹಸ್ತ
ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳರವರು ಮಾತನಾಡಿ, ನನ್ನ ತಂದೆ ಒಮ್ಮೆ ಬಿದ್ದು ಗಾಯಗೊಂಡಿದ್ದರು ಅವರಿಗೆ ನಡೆಯಲು ಒಂದು ವಾಕರ್ ತೆಗೆದುಕೊಂಡಿದ್ದೆ ಅವರು ಗುಣವಾದ ಬಳಿಕ ಯಾರೋ ಒಬ್ಬರ ನನ್ನಲ್ಲಿ ಬಂದು ವಾಕರ್ ಇದೆಯಾ ನಮಗೆ ಒಮ್ಮೆ ಕೊಡಬಹುದಾ ಎಂದು ಕೇಳಿದ್ದರು ಆಗ ನನಗೆ ಈ ಯೋಚನೆ ಬಂತು. ಎಷ್ಟೋ ಬಡ ರೋಗಿಗಳಿಗೆ ಇದು ಉಪಯೋಗವಾಗುತ್ತದೆ ಎಂಬ ನಿಟ್ಟಿನಲ್ಲಿ ಆಶಾದೀಪ ಸಹಾಯಹಸ್ತ ಟ್ರಸ್ಟ್ ಹುಟ್ಟಿಕೊಂಡಿದೆ. ನಮ್ಮಲ್ಲಿ ಬಡ ರೋಗಿಗಳಿಗೆ ಬೇಕಾದ ಆಕ್ಸಿಜನ್ ಸಿಲಿಂಡರ್‌ನಿಂದ ಹಿಡಿದು ಹಲವು ಉಪಕರಣಗಳು ಲಭ್ಯವಿದೆ. ಬೇಕಾದವರು ಇದನ್ನು ತೆಗೆದುಕೊಂಡು ಹೋಗಬಹುದು ಮತ್ತು ಅವರ ಅವಶ್ಯಕತೆ ಮುಗಿದ ಬಳಿಕ ಹಿಂತಿರುಗಿಸಬಹುದು ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ ಆದರೆ ಸಲಕರಣೆಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


ನಾಮಫಲಕ ಅಳವಡಿಕೆ
ಟ್ರಸ್ಟ್ ವತಿಯಿಂದ ಒಳಮೊಗ್ರು ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಸರಕಾರ ಕಛೇರಿಗಳಿಗೆ ಹೋಗುವ ದಾರಿ ಸೂಚನೆ, ಕುಂಬ್ರ ಜಂಕ್ಷನ್‌ನಲ್ಲಿ ಮಡಿಕೇರಿ, ಮೈಸೂರು, ಸುಬ್ರಹ್ಮಣ್ಯ ಇತ್ಯಾದಿ ಕಡೆಗಳಿಗೆ ಹೋಗುವ ದಾರಿ ಸೂಚನೆ ಮತ್ತು ಕುಂಬ್ರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ದಾರಿಗೆ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಟ್ರಸ್ಟ್‌ನ ಸಮಾಜಮುಖಿ ಕೆಲಸಕ್ಕೆ ಗ್ರಾಮ ಪಂಚಾಯತ್‌ನಿಂದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಟ್ರಸ್ಟ್‌ನ ಅಧ್ಯಕ್ಷರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಇದಲ್ಲದೆ ಸ್ವಚ್ಚತೆಗೆ ಗ್ರಾಪಂನೊಂದಿಗೆ ಕೈಜೋಡಿಸಿದ ಕುಂಬ್ರ ವರ್ತಕರ ಸಂಘಕ್ಕೆ ಸಂಘದ ಅಧ್ಯಕ್ಷರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು.


ಆಂಬುಲೆನ್ಸ್, ಮೆಡಿಕಲ್ ಕಾಟ್
ಕುಂಬ್ರ, ಮಾಡಾವು, ಈಶ್ವರಮಂಗಲ, ಬೆಳ್ಳಾರೆ, ಸಂಪ್ಯ ಈ ಭಾಗಗಳಲ್ಲಿ ಆಂಬುಲೆನ್ಸ್ ಸೇವೆ ಇಲ್ಲದೆ ಇರುವುದರಿಂದ ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಟ್ರಸ್ಟ್‌ನಿಂದ ಕುಂಬ್ರಕ್ಕೆ ಒಂದು ಆಂಬುಲೆನ್ಸ್ ಸೇವೆಯನ್ನು ಮಾಡುವ ಯೋಜನೆ ಇದೆ. ಅದರಂತೆ ಮೆಡಿಕಲ್ ಕಾಟ್‌ನ ಬೇಡಿಕೆಯು ಬರುತ್ತಿದ್ದು ಈ ಬಗ್ಗೆಯೂ ಟ್ರಸ್ಟ್‌ನ ವತಿಯಿಂದ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ತಿಳಿಸಿದರು.

LEAVE A REPLY

Please enter your comment!
Please enter your name here