ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತರಾಗಿರಿ: ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್
ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆ ಕುಂತೂರು ಇದರ ಸಿಲ್ವರ್ ಜುಬಿಲಿ ಹಾಗೂ ಸ್ವಲಾತ್ ವಾರ್ಷಿಕ ಮಹಾಸಂಗಮದ ಪ್ರಯುಕ್ತ ಏಕದಿನ ಧಾರ್ಮಿಕ ಮತ ಪ್ರವಚನ ಫೆ.2ರಂದು ಮಗ್ರಿಬ್ ನಮಾಜ್ನ ಬಳಿಕ ಕೋಚಕಟ್ಟೆ ಮದ್ರಸದ ವಠಾರದಲ್ಲಿ ನಡೆಯಿತು.
ದು:ಆಶೀರ್ವಚನ ನೀಡಿದ ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕ್ಕಲ್ ಅವರು, ಮಕ್ಕಳು, ಯುವ ಸಮುದಾಯ ನಾನಾ ರೀತಿಯ ದುಶ್ಚಟಗಳಿಗೆ ಬಲಿಯಾಗಿ ರಕ್ಷಕರ ಕೈ ತಪ್ಪುತ್ತಿದ್ದು ಇದರ ಬಗ್ಗೆ ಎಚ್ಚೆತ್ತು ಅವರಲ್ಲಿ ಧಾರ್ಮಿಕ ಚಿಂತನೆಗಳನ್ನು ಬಿತ್ತಿ ಅವರನ್ನು ದುಶ್ಚಟಗಳಿಂದ ಹಿಂದೆ ಸರಿಯುವ ಕೆಲಸ ಮಾಡಬೇಕಾಗಿದೆ ಎಂದರು. ಕೇರಳ ವೆಳಾಯಿಕೋಡ್ ಉಮೈರ್ ದಾರಿಮಿ ಮುಖ್ಯಪ್ರಭಾಷಣ ಮಾಡಿದರು.
ಮದ್ರಸ ಅಧ್ಯಕ್ಷರಾದ ಹಮೀದ್ ಅಜ್ಮಿರ್ ಅಧ್ಯಕ್ಷತೆ ವಹಿಸಿದ್ದರು. ಕುಂತೂರು ಮುದರ್ರೀಸ್ ಹಾಜಿ ಮೊಯಿದು ಫೈಝಿ ಎಡಪ್ಪಾಲ್ ಉದ್ಘಾಟಿಸಿದರು. ಹೆಚ್.ಐ.ಮದ್ರಸ ಕುಂತೂರು ಇದರ ಸದರ್ ಮುಅಲ್ಲಿಂ ಬಹು| ಹಾಸೀಂ ರಹ್ಮಾನಿ ಸಾಲ್ಮರ ಶುಭಹಾರೈಸಿದರು.
ಸನ್ಮಾನ:
ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಕೋಚಕಟ್ಟೆ ಮದ್ರಸದ ಮಾಜಿ ಅಧ್ಯಕ್ಷರಾದ ಅಬ್ಬಾಸ್ ಕಟ್ಲೇರಿ ಹಾಗೂ ಕುಂತೂರು ಎ ಮತ್ತು ಬಿ ಜುಮಾ ಮಸೀದಿ ಕಾರ್ಯದರ್ಶಿ ಯಾಕೂಬ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಗಲಯ ಕಲೋತ್ಸವ-2024ರಲ್ಲಿ ಭಾಗವಹಿಸಿ ಉರ್ದು ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮದ್ರಸದ ಹಳೆವಿದ್ಯಾರ್ಥಿ ಮಾ| ಆಶೀಕ್ರವರಿಗೆ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಸುಮಾರು 7 ವರ್ಷ ಹಾಜಿ ಮೊಯಿದು ಫೈಝಿ ಉಸ್ತಾದರ ದರ್ಸಿನಲ್ಲಿ ಕಲಿತು ಇದೀಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೇರಳಕ್ಕೆ ತೆರಳುತ್ತಿರುವ ಬಹು| ಸಫ್ವಾನ್ ಎಮ್ಮೆಮಾಡು ಹಾಗೂ ಬಹು| ಅಬ್ದುಲ್ ರವೂಫ್ ಪುತ್ತೂರು ಅವರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಿ ಬೀಳ್ಕೊಡಲಾಯಿತು.
ಕೋಚಕಟ್ಟೆ ಮದ್ರಸ ಪ್ರಧಾನ ಅಧ್ಯಾಪಕರಾದ ಫಾರೂಕ್ ದಾರಿಮಿ ರೆಂಜ ಸ್ವಾಗತಿಸಿದರು. ಇಮ್ತಿಯಾಝ್ ಝೆಡ್ಬಿ ವಂದಿಸಿದರು. ಮದ್ರಸದ ಹಳೆವಿದ್ಯಾರ್ಥಿ ಹಾಪೀಲ್ ಸಫ್ವಾನ್ ಕಿರಾಅತ್ ಪಾರಾಯಣ ಮಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಪಂಡಿತ ನೇತಾರರು, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಕೊನೆಯಲ್ಲಿ ಅನ್ನದಾನ ಮಾಡಲಾಯಿತು.