ಬಿಳಿನೆಲೆ: ಬಿಳಿನೆಲೆ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ, ದೂರದೃಷ್ಠಿ ಯೋಜನೆ ತಯಾರಿ ಕುರಿತ ವಿಶೇಷ ಗ್ರಾಮಸಭೆ ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ಶಾರದ ದಿನೇಶ್‌ರವರು ವಿಶೇಷ ಚೇತನರ ಗುರುತಿಸುವಿಕೆ ಹಾಗೂ ನ್ಯೂನತೆ ತಡೆಗಟ್ಟುವಿಕೆ ಬಗ್ಗೆ ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ವಿಶೇಷ ಚೇತನರ ಶ್ರೇಯಾಭಿವೃದ್ಧಿ ಗ್ರಾಮ ಮಟ್ಟದ ಪುನರ್ವಸತಿ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ. ಗ್ರಾಮ ಪಂಚಾಯತ್‌ಗೆ ಬರುವ 15ನೇ ಹಣಕಾಸು ಮತ್ತು ಗ್ರಾಮ ಪಂಚಾಯತ್‌ನ ಸ್ವಂತ ನಿಧಿಯಿಂದ ಬೇಡಿಕೆ ಅನುಸಾರ ಫಲಾನುಭವಿಗಳನ್ನು ಗುರುತಿಸಿ ಅನುದಾನ ನೀಡಲಾಗಿದೆ. ಶೇ.5ರ ಅನುದಾನದಿಂದ ವಿಶೇಷ ಚೇತನರಿಗೆ ಮೂಲಸೌಕರ್ಯ ಮತ್ತು ವೈಯಕ್ತಿಕ ಸೌಲಭ್ಯವನ್ನು ನೀಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ನೀಡಲಾಗುವುದು ಎಂದರು.
ವಿಶೇಷ ಚೇತನರ ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ವಿಶೇಷಚೇತನರ ಗ್ರಾಮಿಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಗೌಡ ಪೆರಾಬೆ ಅವರು ಮಾಹಿತಿ ನೀಡಿ, ವಿಶೇಷ ಚೇತನರ ಕ್ಷೇಮಾಭಿವೃದಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಇಲಾಖೆಯಿಂದ ಸೌಲಭ್ಯ ನೀಡುತ್ತಿದ್ದು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ. ವಿಕಲಚೇತನರಿಗೆ ಶಿಕ್ಷಣ, ಆರೋಗ್ಯ, ಪುನರ್ವಸತಿ, ಸಾಮಾಜಿಕ ಭದ್ರತೆ, ಸ್ವಉದ್ಯೋಗಗಳಿಗೆ ಅವಕಾಶಗಳಿವೆ ಎಂದರು.
ಆರ್ಥಿಕ ಹಿತರಕ್ಷಣೆ ಯೋಜನಾಧಿಕಾರಿ ಗೀತಾವಿಜಯ, ತರಬೇತಿ ಸಂಯೋಜಕ ಸಂಶುದ್ದೀನ್ ಸಂಪ್ಯ, ಗ್ರಾಮ ಆರೋಗ್ಯ ಸಹಾಯಕಿ ಮಾಲತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಆರೋಗ್ಯ ಇಲಾಖೆ ಎನ್‌ಜಿಒ ಪ್ರಜ್ಞಾ, ಗ್ರಾ.ಪಂ.ಉಪಾಧ್ಯಕ್ಷ ಶಿವಶಂಕರ್, ಸದಸ್ಯರಾದ ಸತೀಶ್ ಕಳಿಗೆ, ಮುರಳಿಧರ ಎರ್ಮಾಯಿಲ್, ಭವ್ಯ ಕೈಕಂಬ, ಬೇಬಿ ಸಣ್ಣಾರ ಉಪಸ್ಥಿತರಿದ್ದರು. ಪಿಡಿಒ ಚಂದ್ರಾವತಿ ಸ್ವಾಗತಿಸಿದರು. ಪ್ರಿಯವಿಜೇಶ್ ವಂದಿಸಿದರು. ಗ್ರಾ.ಪಂ.ಪುನರ್ವಸತಿ ಕಾರ್ಯಕರ್ತ ವಿಜಯಕುಮಾರ್ ಸಹಕರಿಸಿದರು.