ಪುತ್ತೂರು: ಐಐಟಿ-ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ನ ಸ್ಟಾರ್ಟ್-ಅಪ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್(ರುದ್ರಮ್), ರಕ್ಷಣಾ ಸಂಸ್ಥೆಗಳಿಗೆ ಅತ್ಯಾಧುನಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ, ಫ್ಯೂಚರಿಸ್ಟಿಕ್ ತಂತ್ರಜ್ಞಾನಗಳು, ಸೇನಾ ಬಳಕೆಯ ಉಪಕರಣಗಳ ತಯಾರಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ಎಂಎಂ ಎಎಸ್ಎಂಐ(ಅಸ್ಮಿ) ಗನ್ ಅಳವಡಿಸಬಹುದಾದ ಏಕ ವ್ಯಕ್ತಿ ಸಾಗಾಟ ಮಾಡಬಲ್ಲಂತಹ(ಒನ್ ಮ್ಯಾನ್ ಪೋರ್ಟೆಬಲ್) ಶಸಸಜ್ಜಿತ ಡ್ರೋನ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ವಿಶೇಷವೆಂದರೆ ಸ್ಥಿರತೆ, ನಿಖರತೆಯ ಈ ವಿಶಿಷ್ಟ, ಅತ್ಯಾಧುನಿಕ ಡ್ರೋನ್ ತಯಾರಿಸಿದವರು ಪುತ್ತೂರು ತಾಲೂಕಿನ ತಿಂಗಳಾಡಿ ಕಜೆಮಾರು ನಿವಾಸಿ ಕೊನಾರ್ಕ್ ರೈಯವರಾಗಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಬಲ:
ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಶಸಸಜ್ಜಿತ ಡ್ರೋನ್ ಭಯೋತ್ಪಾದನೆ ನಿಗ್ರಹ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಈ ತಂತ್ರಜ್ಞಾನವನ್ನು ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಡ್ರೋನ್ ಮೂಲಕ ಶಸ್ತ್ರ ಸಾಗಾಟ ನಡೆಸಲಾಗುತ್ತದೆ. ರುದ್ರಮ್ ಅಭಿವೃದ್ಧಿಪಡಿಸಿರುವ ಡ್ರೋನ್ ಅತ್ಯಧಿಕ ಸಾಮರ್ಥ್ಯದ 9 ಎಂಎಂ ‘ಅಸ್ಮಿ’ ಮೆಷಿನ್ ಗನ್ ಅಳವಡಿಸಬಹುದಾಗಿದ್ದು, ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆಯನ್ನು ಹೊಂದಿದೆ.
ಅಧಿಕ ಸ್ಥಿರತೆಯ ಡ್ರೋನ್:
ರುದ್ರಮ್ ಸುಧಾರಿತ ಡ್ರೋನ್ ಪ್ಲಾಟ್ ಫಾರ್ಮ್ ಮತ್ತು ವಾಯುಗಾಮಿ ಫೈರಿಂಗ್ ಸಮಯದಲ್ಲಿ ಗರಿಷ್ಠ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಹಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 2025ರ ಜ.26 ಮತ್ತು 27ರಂದು ನಡೆದ ಪರೀಕ್ಷಾರ್ಥ ಪ್ರದರ್ಶನದಲ್ಲಿ ಡ್ರೋನ್ ಪ್ಲಾಟ್ ಫಾರ್ಮ್ನಲ್ಲಿ ಅಸ್ಮಿ ಮೆಷಿನ್ ಗನ್ ತಡೆರಹಿತ ಸ್ಥಿರತೆಯೊಂದಿಗೆ ಗುಂಡು ಹಾರಾಟ ಪ್ರದರ್ಶಿಸಿತು. ಡ್ರೋನ್ ಹಾರಾಟದಲ್ಲಿರುವಾಗ ನಿಖರವಾದ ಗುರಿ ನಿಶ್ಚಿತಾರ್ಥವನ್ನು ಸಾಧಿಸಿತು. ಡ್ರೋನ್ ಗಾಳಿಯಲ್ಲಿ ನೇರವಾದ ಗುರಿಯನ್ನು ತಲುಪಿ ಯಶಸ್ವಿ ಪ್ರದರ್ಶನ ನೀಡಿತು. ಜತೆಗೆ ನೆಲದ ಮೇಲೆ ಮತ್ತು ಗಾಳಿಯ ಮಧ್ಯದಲ್ಲಿ ಸ್ಥಿರವಾದ ಹಾರಾಟದ ಉದ್ದಕ್ಕೂ ಹೆಚ್ಚಿನ ಮಟ್ಟದ ಸ್ಥಿರತೆ ಮತ್ತು ನಿಖರತೆಯನ್ನು ನಿರ್ವಹಿಸಿತು. 45ರಿಂದ 60 ನಿಮಿಷಗಳ ಕಾಲ 15ರಿಂದ 30 ಕಿ.ಮೀ. ದೂರದವರೆಗಿನ ಹಾರಾಟ ನಡೆಸುವ ಮೂಲಕ ಈ ವಿಶಿಷ್ಟ ಸಾಮರ್ಥ್ಯದ ಡ್ರೋನ್ ತನ್ನ ಕಾರ್ಯಕ್ಷಮತೆಯನ್ನು ದೃಢಪಡಿಸಿದೆ.
ಒನ್ ಮ್ಯಾನ್ ಪೋರ್ಟಲ್:
ರುದ್ರಮ್ ಶಸಸಜ್ಜಿತ ಡ್ರೋನ್ ವಿವಿಧ ಯುದ್ಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಎಕೆ-203, ಎಸ್ಐಜಿ 716 ಮುಂತಾದ ಇತರ ದೀರ್ಘ ಮತ್ತು ಅತ್ಯಧಿಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಅಳವಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ರುದ್ರಮ್ನ ಒನ್ ಮ್ಯಾನ್ ಪೋರ್ಟೆಬಲ್ ಶಸಸಜ್ಜಿತ ಡ್ರೋನ್ ಸುಸಜ್ಜಿತ ಡ್ರೋನ್ಗಳ ವಿಭಾಗದಲ್ಲಿ ನಾವೀನ್ಯತೆಯ ಮುಂಚೂಣಿಯಲ್ಲಿದೆ ಮತ್ತು ವಿಶಿಷ್ಟ ಅಭಿವೃದ್ಧಿಯೊಂದಿಗೆ ದೇಶೀಯ ರಕ್ಷಣಾ ತಂತ್ರಜ್ಞಾನದ ಗಡಿಗಳನ್ನು ದಾಟಿ ‘ಆತ್ಮ ರಕ್ಷಿತ್’ ಆಗಲು ಭಾರತದ ಬದ್ಧತೆಯನ್ನು ಬಲಪಡಿಸಲು ಇದು ಬಹಳಷ್ಟು ಸಹಕಾರಿಯಾಗಲಿದೆ. ಸುಮಾರು 10 ಕೆ.ಜಿ. ಭಾರವಿರುವ ಈ ಡ್ರೋನನ್ನು ಸೈನಿಕರು ಹಿಡಿದುಕೊಂಡು ಕಡಿದಾದ ಬೆಟ್ಟ ಗುಡ್ಡ, ಪರ್ವತ ಶ್ರೇಣಿಗಳಲ್ಲಿ ಸಾಗಲು ಸುಲಭಸಾಧ್ಯವಾಗಲಿದೆ. ರುದ್ರಮ್ ಕಂಪೆನಿ ಈ ವಿಶಿಷ್ಟ ಡ್ರೋನ್ ತಯಾರಿಸಿ ಸೇನೆಗೆ ಪೂರೈಸಲಿದೆ.
ಕೊನಾರ್ಕ್ ರೈಯವರ ‘ರುದ್ರಮ್ ಡೈನಾಮಿಕ್ಸ್’
ಪುತ್ತೂರಿನ ತಿಂಗಳಾಡಿ ಕಜೆಮಾರು ನಿವಾಸಿಯಾಗಿರುವ ಕೋನಾರ್ಕ್ ರೈಯವರು ಬೆಂಗಳೂರಿನ ಬಿಷಪ್ ಕಾಟನ್ಸ್ ಬಾಲಕರ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿ ನಂತರ ಅಳಿಕೆಯ ಶ್ರೀ ಸತ್ಯಸಾಯಿ ಲೋಕ ಸೇವಾ ಶಾಲೆ, ಬೆಂಗಳೂರಿನ ಸೈಂಟ್ ವಿಕ್ಟರ್ ಶಾಲೆಯಲ್ಲಿ ಶಿಕ್ಷಣ ಪಡೆದು ಗುಜರಾತ್ ರಾಷ್ಟ್ರೀಯ ಕಾನೂನು ವಿ.ವಿ.ಯಿಂದ ಪದವಿ ಪಡೆದರು. ಬಳಿಕ 5 ವರ್ಷಗಳ ಕಾಲ ವಿಶ್ವ ಸಂಸ್ಥೆಯಲ್ಲಿ ರಾಜಕೀಯ ಮತ್ತು ನೀತಿ ವಿಶ್ಲೇಷಕರಾಗಿ ಕೆಲಸ ಮಾಡಿದರು. ತುಳುನಾಡಿನ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ‘ಕ್ಯಾಂಪ್ಕೋ’ದ ಆಡಳಿತ ನಿರ್ದೇಶಕರಾಗಿದ್ದ ಕೆ. ಪ್ರಮೋದ್ ಕುಮಾರ್ ರೈ ಮತ್ತು ಶೋಭಾ ರೈ ದಂಪತಿಯ ಪುತ್ರ ಕೋನಾರ್ಕ್ ರೈ ಅವರು ಸ್ಥಾಪಿಸಿರುವ ಕಂಪೆನಿಯೇ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್. ಇನ್ನೊಂದು ವಿಶೇಷವೆಂದರೆ ಅವರು ಕಾಲೇಜಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರು.
‘ಆತ್ಮರಕ್ಷಿತ್ ಭಾರತ್’
ಡಿಆರ್ಡಿಒದಲ್ಲಿ ಇಂತಹ ಒಂದು ಡ್ರೋನ್ ಇದ್ದರೂ ಒಬ್ಬ ಸೈನಿಕ ಹೊತ್ತುಕೊಂಡು ಹೋಗುವಂತಹ ಡ್ರೋನ್ ಇದುವರೆಗೂ ರಕ್ಷಣಾ ಇಲಾಖೆಯ ಬತ್ತಳಿಕೆಯಲ್ಲಿ ಇರಲಿಲ್ಲ. ಇದಕ್ಕೆ ಸೇನೆಯಲ್ಲಿ ಲಭ್ಯವಿರುವ ಗನ್ ಅಳವಡಿಸಬಹುದಾಗಿದೆ. ಕಾಶ್ಮೀರದಲ್ಲಿ ಮುಂದಿನ ಮಾರ್ಚ್ ತಿಂಗಳು ರಾಷ್ಟ್ರೀಯ ರೈಫಲ್ಸ್ ವಿಭಾಗದ ಜತೆ ಇದರ ಪ್ರದರ್ಶನ-ಪರೀಕ್ಷೆ ನಡೆಯಲಿದೆ. ಬಳಿಕ ಈ ಡ್ರೋನ್ ಉತ್ಪಾದನೆ ಮಾಡಿ ಸೇನೆಗೆ ಪೂರೈಸಲಾಗುವುದು. ಈ ಪ್ರಥಮ ಪ್ರೋಟೋಟೈಪ್ ಡ್ರೋನ್ ಸೇನೆ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆ ಸಂದರ್ಭ ಇದರ ಬಳಕೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ನಾನು ಆತ್ಮನಿರ್ಭರ್ ಭಾರತಕ್ಕಾಗಿ ಮಾತ್ರವಲ್ಲದೆ ‘ಆತ್ಮರಕ್ಷಿತ್ ಭಾರತ್’ಗಾಗಿ ಕಾರ್ಯತತ್ಪರನಾಗಿದ್ದೇನೆ.
ಕೋನಾರ್ಕ್ ರೈ ಕಜೆಮಾರು,
ಆಡಳಿತ ನಿರ್ದೇಶಕರು,
ರುದ್ರಮ್ ಡೈನಾಮಿಕ್ಸ್ ಕಂಪೆನಿ