ನಿಡ್ಪಳ್ಳಿ: ಪುತ್ತೂರಿನಿಂದ ಪರ್ಲಡ್ಕ ದೇವಸ್ಯ ಮಾರ್ಗವಾಗಿ ಗುಮ್ಮಟೆಗದ್ದೆವರೆಗೆ ಬಂದು ಹಿಂತಿರುಗಿ ಪುತ್ತೂರಿಗೆ ಹೋಗುತ್ತಿದ್ದ ಕೆ.ಎಸ್.ಅರ್.ಟಿ.ಸಿ ಬಸ್ ಕಳೆದ ಒಂದು ತಿಂಗಳಿಂದ ಬಂದಿಲ್ಲ. ಮತ್ತೆ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಶಿಥಿಲಗೊಂಡ ಚೆಲ್ಯಡ್ಕ ಸೇತುವೆ ಮೇಲೆ ಕಳೆದ ಮಳೆಗಾಲದಲ್ಲಿ ಘನ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ನೀಡಿತ್ತು. ಆ ಕಾರಣ ಪಾಣಾಜೆ ಚೆಲ್ಯಡ್ಕ ಗುಮ್ಮಟೆಗದ್ದೆ ದೇವಸ್ಯ ಪುತ್ತೂರು ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳ ಸಂಚಾರ ನಿಂತು ಹೋಯಿತು. ಈ ಕಾರಣದಿಂದ ಗುಮ್ಮಟೆಗದ್ದೆ ಅಜ್ಜಿಕಲ್ಲು ಭಾಗದ ಜನರ ಅನುಕೂಲತೆಗಾಗಿ ಶಾಸಕ ಅಶೋಕ್ ಕುಮಾರ್ ರೈಯವರ ಪ್ರಯತ್ನದ ಫಲವಾಗಿ ಕಳೆದ ಜುಲೈ ತಿಂಗಳಲ್ಲಿ ಸರಕಾರಿ ಬಸ್ಸು ಸೌಲಭ್ಯ ಒದಗಿಸಿದ್ದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು.ಇದರಿಂದ ಉಚಿತ ಬಸ್ ಪ್ರಯಾಣದಿಂದ ವಂಚಿತರಾಗಿದ್ದ ಈ ಭಾಗದ ಮಹಿಳೆಯರಿಗೂ ಕೂಡ ಇದು ವರದಾನವಾಗಿತ್ತು.ಸಾರ್ವಜನಿಕರು ತಮ್ಮ ಊರಿಗೆ ಸರಕಾರಿ ಬಸ್ಸು ಬಂದ ಬಗ್ಗೆ ಸಂತಸವನ್ನೂ ವ್ಯಕ್ತ ಪಡಿಸಿದ್ದರು.
ಆದರೆ ಆ ಸಂತಸ ತುಂಬಾ ಸಮಯ ಇಲ್ಲದಾಗಿದ್ದು ಈಗ ಒಂದು ತಿಂಗಳಿಂದ ಬಸ್ಸು ಬಾರದೆ ಇದ್ದು ವಿದ್ಯಾರ್ಥಿಗಳಿಗೆ ಮತ್ತು ದಿನಂಪ್ರತಿ ದುಡಿಮೆಗೆ ಹೋಗುವವರಿಗೆ ಸಮಸ್ಯೆಯಾಗಿದೆ. ಬೆಳಿಗ್ಗೆ ಸಂಜೆ ಯಾವುದಾದರೂ ಖಾಸಗಿ ವಾಹನ, ಆಟೋಗಳನ್ನು ಅವಲಂಬಿಸಬೇಕಾಗಿದ್ದು ದುಪ್ಪಟ್ಟು ವ್ಯಯ ಮಾಡಬೇಕಾಗಿದೆ ಎಂದು ಜನರು ಹೇಳುತ್ತಿದ್ದಾರೆ.ಈ ನರಕ ಯಾತನೆಯಿಂದ ಒಮ್ಮೆ ಪಾರು ಮಾಡುವರೇ ಎಂದು ಜನ ಕಾದು ನೋಡುತ್ತಿದ್ದಾರೆ.
ಬಸ್ಸು ಇಲ್ಲದೆ ಸಮಸ್ಯೆಯಾಗಿದೆ;
ಕಳೆದ ಆರು ತಿಂಗಳಿಂದ ಬರುತ್ತಿದ್ದ ಸರಕಾರಿ ಬಸ್ಸು ಒಂದು ತಿಂಗಳಿಂದ ಏಕಾಏಕಿ ಬಾರದೆ ನಿಂತ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗಿದೆ. ಅಲ್ಲದೆ ಉಚಿತ ಬಸ್ ಸೌಲಭ್ಯದಿಂದ ಮಹಿಳೆಯರು ವಂಚಿತರಾಗಿದ್ದಾರೆ.ಆದುದರಿಂದ ಮತ್ತೆ ಬಸ್ಸು ಬರುವ ಹಾಗೆ ಸಂಬಂಧಿಸಿದವರು ಕ್ರಮವಹಿಸಬೇಕು.
ಸಾರ್ವಜನಿಕರು.
ಚಾಲಕರ ಕೊರತೆಯಿಂದ ಸಮಸ್ಯೆಯಾಗಿದೆ;
ಇಲಾಖೆಯಲ್ಲಿ ಬಸ್ಸು ಕೊರತೆ ಇಲ್ಲ. ಚಾಲಕರ ಕೊರತೆಯಿಂದ ಇಲ್ಲಿ ಬಸ್ಸ್ ಬರುತ್ತಿಲ್ಲ.ಬಸ್ಸ್ ಸಂಚಾರ ಮುಂದುವರಿಸಲು ಕೆ.ಎಸ್.ಅರ್.ಟಿ.ಸಿ ಡಿಪೊ ಮ್ಯಾನೇಜರ್ ಬಳಿ ಒತ್ತಡ ಹಾಕುತ್ತಾ ಇದ್ದೇವೆ. ಮಾನ್ಯ ಶಾಸಕರು ಕೂಡ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಇದ್ದಾರೆ.ಏನೋ ಕೆಲವು ಸಮಯದಲ್ಲಿ ಎಲ್ಲಾ ಸರಿಯಾಗುತ್ತದೆ ಎಂಬ ಭರವಸೆ ಇದೆ. ಚೆಲ್ಯಡ್ಕ ಸೇತುವೆ ನಿರ್ಮಾಣ ಆದ ಮೇಲೆ ಈ ರಸ್ತೆಯಲ್ಲಿ ಖಾಯಂ ನೆಲೆಯಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸು ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ.
ಸಂತೋಷ್ ಭಂಡಾರಿ ಚಿಲ್ಮೆತ್ತಾರು
ಸರಕಾರದ ಗ್ಯಾರಂಟಿ ಸಮಿತಿ ಸದಸ್ಯರು.
ಪರಿಶೀಲನೆ ನಡೆಸಿ ಸೂಕ್ತ ಕ್ರಮ
ಪುತ್ತೂರಿನಿಂದ ದೇವಸ್ಯ ಚಿಲ್ಮೆತ್ತಾರು ಮಾರ್ಗವಾಗಿ ಗುಮ್ಮಟಗದ್ದೆ ರಸ್ತೆಯಲ್ಲಿ ಯಾವುದೇ ಬಸ್ ಸಂಚಾರ ಇಲ್ಲದೇ ಇರುವುದರಿಂದ ಸರಕಾರಿ ಬಸ್ ತಾತ್ಕಾಲಿಕವಾಗಿ ಸಂಚರಿಸುತ್ತಿತ್ತು.ಇದೀಗ ಸಂಚಾರ ಸ್ಥಗಿತಗೊಳ್ಳಲು ಇರುವ ಕಾರಣದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ವಾಸು ಪೂಜಾರಿ
ಕೆ. ಎಸ್. ಆರ್. ಟಿ. ಸಿ, ಡಿ.ಸಿ, ಮಂಗಳೂರು.