ಶ್ರೇಷ್ಠ ತತ್ವದ ಆಚರಣೆಯಿಂದ ಸಮಾಜದಲ್ಲಿ ಸಮತೋಲನ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ
ವಿಟ್ಲ: ಇಬ್ಬರು ಯುವಕರ ನಿಸ್ವಾರ್ಥ ಸೇವೆಯಿಂದಾಗಿ ಊಹೆಗೂ ನಿಲುಕದ ಕೆಲಸ ಇಲ್ಲಿ ನಡೆದಿದೆ. ಕೃತಿಯ ಮೂಲಕ ಪರಿಶ್ರಮ ಸಾಕಾರಗೊಂಡಿದೆ. ವಿಟ್ಲದ ಹಳೆಯ ಬಸದಿ ಸಾಂಪ್ರದಾಯಿಕವಾಗಿದ್ದರೆ, ಆಧುನಿಕ ಶೈಲಿಯ ಛಾಯೆಯಿದೆ. ಸೌಂದರ್ಯ ಯಾವತ್ತೂ ಶಾಶ್ವತ. ಹೊಸ ಕಲ್ಪನೆಯ ಜೊತೆಗೆ ಸುಂದರ ಬಸದಿ ನಿರ್ಮಾಣವಾಗಿದೆ. ಮಾನವ ಜೀವನದ ತತ್ವ, ಸಿದ್ಧಾಂತಗಳನ್ನು ಜಿನ ಮಂದಿರದ ಸುತ್ತ ಕೆತ್ತಲಾಗಿದೆ. ಆಸೆ, ದುರಾಸೆಗಳಿಗೆ ಬಲಿಯಾಗದಿರಿ ಎಂಬುದೇ ಜೈನ ಧರ್ಮದ ಸಿದ್ಧಾಂತ. ಶ್ರೇಷ್ಟ ತತ್ವದ ಆಚರಣೆಯಿಂದ ಸಮಾಜದಲ್ಲಿ ಸಮತೋಲನ ಸಾಧ್ಯ. ಧರ್ಮ ಲಾಂಛನದಿಂದ ಹುಟ್ಟುವುದಿಲ್ಲ ಆಚರಣೆಯಿಂದ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ವಿಟ್ಲದ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯುತ್ತಿರುವ ನೂತನ ಬಿಂಬ ಪ್ರತಿಷ್ಠೆ ಮತ್ತು ಪಂಚಕಲ್ಯಾಣ ಮಹೋತ್ಸವದ ಪ್ರಥಮ ದಿನವಾದ ಫೆ.13ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಎಲ್ಲಾ ಪರಿಣಾಮಗಳನ್ನು ಮೀರಿ ನಿಲ್ಲಬೇಕಾಗಿದೆ. ದುರಾಸೆ ಬಿಟ್ಟ ಜೀವನ ಹಸನಾಗುತ್ತದೆ. ತಾಳ್ಮೆ – ಸಹನೆ ನಮ್ಮಲ್ಲಿರಬೇಕು. ವ್ಯಕ್ತಿಗೆ ವ್ಯಕ್ತಿತ್ವದ ಜೊತೆಗೆ ದಾನ ಗುಣ ಅತೀ ಮುಖ್ಯ. ದೇವತಾ ಮಂದಿರದ ಉದ್ದಾರದಿಂದ ಊರು ಬೆಳೆಯಲು ಸಾಧ್ಯ. ಶ್ರಾವಕರು ಶ್ರೇಷ್ಠ ತತ್ವದಿಂದ ನಡೆಯಬೇಕು. ಆದರ್ಶಗಳನ್ನು ಪಾಲಿಸಿಕೊಂಡು ಬರುವುದೇ ನಿಜವಾದ ಧರ್ಮ. ಎಲ್ಲರೂ ಬಂದು ನೋಡಬೇಕಾದ ಕ್ಷೇತ್ರವಿದು. ಅಧರ್ಮ ಅವನತಿಯಾಗಿ ಧರ್ಮದ ಉನ್ನತಿಯಾಗಬೇಕು. ಕ್ಷೇತ್ರ ಇನ್ನಷ್ಟು ಬೆಳಗಲಿ ಈ ಊರಿಗೆ ದೊಡ್ಡ ರಕ್ಷಣೆಯಾಗಲಿ ಎಂದು ಡಾ| ವೀರೇಂದ್ರ ಹೆಗ್ಗಡೆ ಅವರು ಹಾರೈಸಿದರು.
ಕಾರ್ಕಳ ಜೈನಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿರವರು ಆಶೀರ್ವಚನ ನೀಡಿ ಭಗವಂತನ ಶಕ್ತಿ ಇದೀಗ ಎಲ್ಲೆಡೆ ಪಸರಿಸಿದೆ. ಜಿನಾಲಯಕ್ಕೆ ಪ್ರತೀ ದಿನ ಹೋಗುವ ರೂಢಿಯಾದಾಗ ಮಾತ್ರ ಜಿನಾಲಯದಲ್ಲಿ ಶಕ್ತಿ ವೃದ್ಧಿಸಲು ಸಾಧ್ಯ. ಮಕ್ಕಳಿಗೆ ಸಂಸ್ಕೃತಿ ಕಲಿಸುವ ಕೆಲಸವಾಗಬೇಕು. ನಾವು ಮಾಡಿದ ಕಾರ್ಯಗಳು ಪುಣ್ಯದ ರೂಪದಲ್ಲಿ ಮರಳಿ ಸಿಗುತ್ತದೆ. ಇದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ಮೂಡಬಿದಿರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರು ಆಶೀರ್ವಚನ ನೀಡಿ ಧರ್ಮ ಜಾಗೃತಿ ಮಾಡುವ ಕೆಲಸವಾಗಬೇಕು. ಬಸದಿ ಎಂದರೆ ಸರ್ವೋದಯ ಧರ್ಮ ತೀರ್ಥ. ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಕೆಲಸವಾಗಬೇಕು. ಈ ಬಸದಿ ಅಹಿಂಸೆಯ ನಿಲಯವಾಗಲಿ. ರಾಷ್ಟ್ರ ಧರ್ಮ ಆತ್ಮ ಧರ್ಮವನ್ನು ಗೌರವಿಸುವವರು ನಿಜವಾದ ರಾಷ್ಟ್ರ ಭಕ್ತರು ಎಂದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ವಿಟ್ಲದ ಜನರಿಗೆ ಒಂದು ಸುದಿನವಾಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವಾಸ್ತು ಯೋಗ್ಯ ಜಿನ ಚೈತ್ಯಾಲಯ ಇಂದಿಲ್ಲಿ ನಿರ್ಮಾಣವಾಗಿದೆ. ನಾವು ಧಾರ್ಮಿಕ ಚಿಂತನೆಯಲ್ಲಿ ಮುಂದುವರಿದಿದ್ದೇವೆ. ನಾವೆಲ್ಲರೂ ಆಚಾರ್ಯ ಜೈನರಾಗಬೇಕು. ವಿಟ್ಲದ ಜನತೆ ನಮಗೆ ಗೌರವಕೊಟ್ಟಿದ್ದಾರೆ. ಎಲ್ಲರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್‌ರವರು ಮಾತನಾಡಿ ಇದೊಂದು ವಿಶೇಷ ಕ್ಷಣವಾಗಿದೆ. ನಮ್ಮ ಬದುಕು ಕಟ್ಟುವ ಕೆಲಸ ಯುವಕರಿಂದ ಆಯಿತು. ಇತಿಹಾಸದ ಪುಟದಲ್ಲಿ ಬರೆದಿಡಬೇಕಾದ ಕೆಲಸ ಇಂದಿಲ್ಲಿ ಆಗಿದೆ. ಪರರಿಗೆ ಉಪಕಾರಿಯಾಗಿ ಬದುಕುವ ಸಮಾಜ ನಮ್ಮದು ಎಂದರು.
ಡಿ. ಸುರೇಂದ್ರ ಕುಮಾರ್, ವಿಟ್ಲ ಅರಮನೆಯ ಬಂಗಾರು ಅರಸರು, ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಡಿ. ವಿನಯ ಕುಮಾರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರಳ ರಾಜೇಂದ್ರ ಶೆಟ್ಟಿ, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಜಿತೇಶ್ ಎಮ್., ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಸಮಿತಿ ಕಾರ್ಯದರ್ಶಿ ದರ್ಶನ್ ಜೈನ್, ಅನಿತಾ ಸುರೇಂದ್ರ ಕುಮಾರ್, ರತ್ನಾಕರ ಜೈನ್ ಮಂಗಳೂರು, ಶ್ರುತಾ ಜಿತೇಶ್, ಶಿಲ್ಪಾ, ಪುಷ್ಪರಾಜ ಹೆಗ್ಡೆ ಮಡಂತ್ಯಾರು, ರಮ್ಯಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಅಂದರ್ಭದಲ್ಲಿ ವಾಸ್ತು ತಜ್ಞರಾದ ಸುದರ್ಶನ್ ಇಂದ್ರ, ಇಂಜಿನಿಯರ್ ಪಾರ್ಶ್ವನಾಥ ಮಂಗಳೂರುರವರನ್ನು ಗೌರವಿಸಲಾಯಿತು. ನೇತೃತ್ವ ವಹಿಸಿ ಸುಂದರ ಜಿನಾಲಯ ನಿರ್ಮಾಣ ಮಾಡಿರುವ ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಜಿತೇಶ್ ಎಮ್. ಮತ್ತು ಕಾರ್ಯದರ್ಶಿ ದರ್ಶನ್ ಜೈನ್‌ರವರನ್ನು ಜೈನ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ಸೌಜನ್ಯ ಹಾಗೂ ಅನನ್ಯ ಜೈನ್ ವಿಟ್ಲ ಪ್ರಾರ್ಥಿಸಿದರು. ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಜಿತೇಶ್ ಎಮ್. ಸ್ವಾಗತಿಸಿದರು. ನೇಮಿರಾಜ ಅರಿಗ ಕಾರ್ಕಳ ವಂದಿಸಿದರು. ಡಾ|ಶ್ರೀಮಂದಾರ ಜೈನ್ ವಿಟ್ಲ ವಂದಿಸಿದರು.

ಧಾರ್ಮಿಕ ವಿಧಿ ವಿಧಾನ:
ಬೆಳಿಗ್ಗೆ ಗಂಟೆ 6.55ರಿಂದ ಇಂದ್ರ ಪ್ರತಿಷ್ಠೆ, ಗಂಟೆ 7.55ರ ಕುಂಭ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 12.15ರ ಅಭಿಜಿನ್ ಲಗ್ನದಲ್ಲಿ ಮುಖವಸ ಉದ್ಘಾಟನೆ, ಅಪರಾಹ್ನ ಗಂಟೆ 2.00 ರಿಂದ ನಾಂದಿ ಮಂಗಲ ಪೂಜಾ ವಿಧಾನ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ ವಿಧಾನ, ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಸಂಜೆ ಗಂಟೆ 5.05ರ ಕರ್ಕಾಟಕ ಲಗ್ನದಲ್ಲಿ ಪಂಚಕಲ್ಯಾಣ ಮಂಟಪ ಪ್ರವೇಶ, ಸಂಜೆ ಗಂಟೆ 6.45ರ ಸಿಂಹ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ, ಸಂಜೆ ಗಂಟೆ 4.30ಕ್ಕೆ ಅಗ್ರೋದಕ ಮೆರವಣಿಗೆ, ಅಭಿಷೇಕ ಪೂಜೆ, ಮಹಾಮಂಗಳಾರತಿ ನಡೆಯಿತು.