ಪುತ್ತೂರು: ಮನೆ ಬಿಟ್ಟು ಹೋಗಿ ಹಲವು ವರ್ಷಗಳಿಂದ ಮಾಹಿತಿಯೇ ಇಲ್ಲದೆ ಮನೆಯವರ ಆತಂಕಕ್ಕೆ ಕಾರಣರಾಗಿದ್ದ ಕೆಯ್ಯೂರು ಗ್ರಾಮದ ದೇರ್ಲ ಮೂಲದ ನಿವಾಸಿಯೋರ್ವರು ಇದೀಗ ಮತ್ತೆ ಮನೆ ಸೇರಿದ ಅಪರೂಪದ ಘಟನೆ ವರದಿಯಾಗಿದೆ.
ದೇರ್ಲ ಹೊಸಮನೆ ರಾಮಣ್ಣ ರೈ ಮತ್ತು ಬೊಳಿಕ್ಕಲ ಪರಮೇಶ್ವರಿ ದಂಪತಿಯ ಪುತ್ರ ರಾಮಚಂದ್ರ ರೈ ಇದೀಗ ಮರಳಿ ಮನೆ ಸೇರಿದವರು. ಸುಮಾರು 45 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಮನೆ ಬಿಟ್ಟು ಹೋಗಿ ಊರೂರು ತಿರುಗಾಡಿಕೊಂಡಿದ್ದ, ಅವಿವಾಹಿತರಾಗಿರುವ ರಾಮಚಂದ್ರ ರೈ(66ವ.)ಯವರು ತಿಪಟೂರು ಬಸ್ ನಿಲ್ದಾಣದ ಬಳಿ ಅನಾಥ ಸ್ಥಿತಿಯಲ್ಲಿದ್ದರು. ಅವರನ್ನು ‘ಆಸರೆ’ ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಅವರನ್ನು ‘ಆಸರೆ’ ಆಶ್ರಮಕ್ಕೆ ಕರೆದೊಯ್ದ ಸಂದರ್ಭ ಲೈವ್ ವೀಡಿಯೋ ಮಾಡಲಾಗಿತ್ತು. ಈ ಸಂದರ್ಭ ತನ್ನ ಪರಿಚಯ ಹೇಳಿಕೊಂಡಿದ್ದ ರಾಮಚಂದ್ರ ರೈಯವರು, ‘ತಾನು ಪುತ್ತೂರಿನವ ಎಂದು ಹೇಳಿ ಬೊಳಿಕ್ಕಳ, ಮಾಡಾವು, ದೇರ್ಲ ಎಂಬಿತ್ಯಾದಿ ಹೆಸರುಗಳನ್ನು ಉಲ್ಲೇಖಿಸಿದ್ದರು. ತನ್ನ ತಂದೆಯ ಹೆಸರನ್ನೂ ತಿಳಿಸಿದ್ದ ಅವರು, ಪರಮೇಶ್ವರಿ(ತಾಯಿ), ಹರೀಶ(ತಮ್ಮ)ಎಂಬವರ ಹೆಸರನ್ನೂ ಉಲ್ಲೇಖಿಸಿದ್ದರು. ಲೈವ್ ವೀಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕ್ಯಾಂಪ್ಕೋ ಉದ್ಯೋಗಿ ಸಣಂಗಲ ರಾಧಾಕೃಷ್ಣ ರೈ ಎಂಬವರು ರಾಮಚಂದ್ರರವರ ಅಣ್ಣ, ನೌಕಾ ಪಡೆಯ ನಿವೃತ್ತ ಅಽಕಾರಿ ಬೊಳಿಕ್ಕಲ ದಿವಾಕರ ರೈ ಅವರಿಗೆ ಮಾಹಿತಿ ನೀಡಿದ್ದರು.
ವೀಡಿಯೋದಲ್ಲಿದ್ದುದು ತನ್ನ ಸಹೋದರ ಎಂದು ತಿಳಿಯುತ್ತಲೇ ದಿವಾಕರ ರೈ ಅವರು ಫೆ.6ರಂದು ‘ಆಸರೆ’ ಆಶ್ರಮಕ್ಕೆ ತೆರಳಿ ಸಹೋದರನ ಬಗ್ಗೆ ವಿಚಾರಿಸಿದ್ದರು. ಅಲ್ಲಿ ರಾಮಚಂದ್ರ ಅವರು ಸಹೋದರ ದಿವಾಕರ ರೈ ಅವರನ್ನು ಗುರುತಿಸಿದರು. ಆ ಸಂದರ್ಭ ದಿವಾಕರ ರೈಯವರು ಆಶ್ರಮದ ಮುಖ್ಯಸ್ಥರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ, ರಾಮಚಂದ್ರ ಅವರು ತನ್ನ ತಮ್ಮ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದರಲ್ಲದೆ, ಊರಿಗೆ ಕರೆದುಕೊಂಡು ಹೋಗುವುದಾಗಿಯೂ ತಿಳಿಸಿದರು.ಪೊಲೀಸ್ ಠಾಣೆಯಿಂದ ಈ ಕುರಿತು ಪತ್ರವೊಂದನ್ನು ಪಡೆದುಕೊಂಡು ಬನ್ನಿ ಎಂದು ಆಶ್ರಮದ ಮುಖ್ಯಸ್ಥರು ತಿಳಿಸಿದ್ದರು. ಬಳಿಕ ಊರಿಗೆ ಬಂದ ದಿವಾಕರ ರೈಯವರು ಮನೆಯವರ ಜತೆ ಚರ್ಚಿಸಿ ರಾಮಚಂದ್ರರನ್ನು ಮನೆಗೆ ಕರೆ ತರಲು ನಿರ್ಧರಿಸಿದರು.ಆಶ್ರಮದಲ್ಲಿರುವ ರಾಮಚಂದ್ರ ತನ್ನ ಸಹೋದರ ಎನ್ನುವುದನ್ನು ಸಾಬೀತುಪಡಿಸುವುದಕ್ಕೆ ಪೂರಕವಾದ ದಾಖಲೆ ಪತ್ರವನ್ನು ಸಿದ್ದಪಡಿಸಿ, ಪುತ್ತೂರು ಠಾಣೆ ಮೂಲಕ ತಿಪಟೂರು ಠಾಣೆಯನ್ನು ಸಂಪರ್ಕಿಸಿ ಅಲ್ಲಿಂದಲೂ ದಾಖಲೆ ಪತ್ರ ಪಡೆದು, ನಿವೃತ್ತ ಪ್ರಾಧ್ಯಾಪಕ ಚಂದ್ರಹಾಸ ರೈ ಬೊಳಿಕ್ಕಲ ಅವರನ್ನೂ ಜೊತೆಗೆ ಕರೆದುಕೊಂಡು ಫೆ.12ರಂದು ‘ಆಸರೆ’ ಆಶ್ರಮಕ್ಕೆ ತೆರಳಿದ್ದರು.ಅಲ್ಲಿ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ರಾಮಚಂದ್ರ ರೈ ಅವರನ್ನು ಮನೆಮಂದಿ ಊರಿಗೆ ಕರೆ ತಂದಿದ್ದಾರೆ.ಇದೀಗ ಅವರು ಬೊಳಿಕ್ಕಲದಲ್ಲಿರುವ ಅಣ್ಣ ದಿವಾಕರ ರೈ ಅವರ ಮನೆಯಲ್ಲಿದ್ದಾರೆ.
15 ವರ್ಷಗಳಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ:
ಸುಮಾರು 45 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಊರು ಬಿಟ್ಟಿದ್ದ ರಾಮಚಂದ್ರ ಹೊಟೇಲ್, ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದ.ಈ ಹಿಂದೆ ಮೂರ್ನಾಲ್ಕು ಸಲ ಆತನನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಒಂದೆರಡು ದಿನ ಮನೆಯಲ್ಲಿರುತ್ತಿದ್ದ ಬಳಿಕ ಮತ್ತೆ ಕೆಲಸಕ್ಕೆಂದು ಹೋಗುತ್ತಿದ್ದ. ಹದಿನೈದು ವರ್ಷಗಳ ಹಿಂದೆ ನನ್ನ ಬಾವ ಕೆಎಸ್ಆರ್ಟಿಸಿ ಬಸ್ ಚಾಲಕ ಸದಾಶಿವ ರೈಯವರು ಬೆಂಗಳೂರು ಬಸ್ಸಲ್ಲಿ ಹೋಗುತ್ತಿದ್ದ ಸಂದರ್ಭ, ಸಕಲೇಶಪುರದ ಹೊಟೇಲೊಂದರಲ್ಲಿ ರಾಮಚಂದ್ರ ಕೆಲಸ ಮಾಡಿಕೊಂಡಿರುವುದನ್ನು ಗಮನಿಸಿ, ನಾಳೆ ನಾವು ಊರಿಗೆ ಹೋಗೋಣ ಎಂದು ತಿಳಿಸಿದ್ದರು. ಅದಕ್ಕೆ ರಾಮಚಂದ್ರ ಒಪ್ಪಿಗೆ ಸೂಚಿಸಿದ್ದ. ಆದರೆ ಮರು ದಿನ ಬಾವ ಅಲ್ಲಿಗೆ ಬರುವಾಗ ಆತ ಅಲ್ಲಿರಲಿಲ್ಲ. ಆ ಬಳಿಕ ಆತನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ತಿಪಟೂರಲ್ಲಿದ್ದ ವಿಚಾರ ತಿಳಿದು ನಾವು ಅಲ್ಲಿಗೆ ಹೋಗಿ ಕರೆದುಕೊಂಡು ಬಂದಿದ್ದೇವೆ. ಆತನ ಆರೋಗ್ಯದಲ್ಲಿ ತುಸು ವ್ಯತ್ಯಾಸವಾಗಿದ್ದು, ನಾಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೇವೆ ಎಂದು ರಾಮಚಂದ್ರ ರೈಯವರ ಅಣ್ಣ ದಿವಾಕರ ರೈ ‘ಸುದ್ದಿ’ಗೆ ಮಾಹಿತಿ ನೀಡಿದ್ದಾರೆ.
ಮನೆಯವರ ಕಾಳಜಿಗೆ ಎಲ್ಲೆಡೆ ಶ್ಲಾಘನೆ
ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿಯೇ ಇಂದಿನ ಕಾಲದಲ್ಲಿ ಅಧಿಕವಾಗುತ್ತಿರುವ ಹೊತ್ತಲ್ಲಿ, ಒಡ ಹುಟ್ಟಿದ ಸಹೋದರ ಹಲವು ವರ್ಷಗಳಿಂದ ತಮ್ಮಿಂದ ದೂರವಾಗಿ ಎಲ್ಲೋ ಇದ್ದುದನ್ನು ಸಾಮಾಜಿಕ ಜಾಲತಾಣದ ಮೂಲಕ ಗುರುತಿಸಿ ಊರಿಗೆ ಕರೆ ತರುವಲ್ಲಿ ಸಹೋದರರು ಮತ್ತು ಮನೆಯವರು ತೋರಿದ ಕಾಳಜಿ, ಪ್ರೀತಿಗೆ ಗ್ರಾಮದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.ರಾಮಚಂದ್ರ ನಮ್ಮ ಒಡಹುಟ್ಟಿದವರು. ಆತನನ್ನು ಮನೆಗೆ ಕರೆದೊಯ್ಯುವುದು ನಮ್ಮ ಧರ್ಮವಾಗಿದೆ ಎಂದು ದಿವಾಕರ ರೈ ಹೇಳಿದ್ದಾರೆ.