ಡಿಎಚ್‌ಒ, ಟಿಎಚ್‌ಒ ಆಗಮನ-ನೆಲ್ಯಾಡಿ, ಶಿರಾಡಿ ವೈದ್ಯರ ನಿಯೋಜನೆ ಭರವಸೆ | ಪ್ರತಿಭಟನೆ ಹಿಂತೆಗೆತ
ರಾಮಕುಂಜ: ಕಳೆದ ಹಲವು ವರ್ಷಗಳಿಂದ ಖಾಲಿ ಇರುವ ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಗೊಳಿಸುವಂತೆ ಒತ್ತಾಯಿಸಿ ಕೊೖಲ,ರಾಮಕುಂಜ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಫೆ.14ರಂದು ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಖಾಯಂ ವೈದ್ಯಾಧಿಕಾರಿ ನೇಮಕದ ತನಕ ನೆಲ್ಯಾಡಿ, ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿಯೋಜನೆ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಆರಂಭದಲ್ಲಿ ಪ್ರತಿಭಟನಾಕಾರರು ಖಾಯಂ ವೈದ್ಯರ ನೇಮಕಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜನಪರ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು ಮಾತನಾಡಿ, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ಜನರಿಗೆ ತೊಂದರೆಯಾಗಿದೆ. ಇಲ್ಲಿ ವೈದ್ಯರ ಸಹಿತ ಹಲವು ಹುದ್ದೆ ಖಾಲಿ ಇದೆ. ನಿವೃತ್ತಿಯಾದವರ ಸ್ಥಳಕ್ಕೆ ಹೊಸ ಸಿಬ್ಬಂದಿಗಳ ನೇಮಕ ಆಗುತ್ತಿಲ್ಲ. ರಾಜಕಾರಣಿಗಳಿಗೆ ನೀಡುವ ಸವಲತ್ತುಗಳಲ್ಲಿ ಯಾವುದೇ ಕೊರತೆ ಆಗಿಲ್ಲ. ಆದರೆ ಬಡವರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಶೀಘ್ರದಲ್ಲೇ ಸರಕಾರ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕದ ಜೊತೆಗೆ ಖಾಲಿ ಇರುವ ಹುದ್ದೆಯನ್ನೂ ಭರ್ತಿಗೊಳಿಸಬೇಕೆಂದು ಒತ್ತಾಯಿಸಿದರು. ಕೊಲದಲ್ಲಿ ಕೋಟ್ಯಾಂತರ ರೂ.ಖರ್ಚು ಮಾಡಿ ಪಶುವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಕಾಲೇಜು ಆರಂಭಗೊಂಡಿಲ್ಲ. ಶಾಲೆಯ ಮಕ್ಕಳಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆಯೂ ಇಲ್ಲ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಲಕ್ಷ್ಮೀನಾರಾಯಣ ರಾವ್ ಹೇಳಿದರು.

ಜನಪರ ಹೋರಾಟ ಸಮಿತಿ ಕಾರ್ಯದರ್ಶಿ ಜುನೈದ್ ಕೆಮ್ಮಾರ ಮಾತನಾಡಿ, ಸುಸಜ್ಜಿತ ಕಟ್ಟಡವಿದ್ದರೂ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರವು ಬಿಪಿ,ಶುಗರ್, ಜ್ವರದ ಮಾತ್ರೆ ನೀಡಲು ಮಾತ್ರ ಸೀಮಿತವಾಗುತ್ತಿದೆ. ಇಲ್ಲಿಗೆ ಖಾಯಂ ವೈದ್ಯರ ನೇಮಕ ಮಾಡುವಂತೆ ಮನವಿ ಮಾಡಿ ನಾವೇ ಸುಸ್ತಾಗಿ ಹೋಗಿದ್ದೇವೆ. ಇದೀಗ ಎಲ್ಲರನ್ನೂ ಸೇರಿಸಿಕೊಂಡು ಜನಪರ ಹೋರಾಟ ಸಮಿತಿ ಮಾಡಿಕೊಂಡು ಹೋರಾಟ ಆರಂಭಿಸಿದ್ದೇವೆ. ತಾತ್ಕಾಲಿಕ ವೈದ್ಯರು ಬೇಡ. ಖಾಯಂ ವೈದ್ಯರ ನೇಮಕ ಆಗುವ ತನಕ ಹೋರಾಟ ನಡೆಸುವ ಎಂದರು.
ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಮಾತನಾಡಿ, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಹಲವು ಗ್ರಾಮಸಭೆಗಳಲ್ಲಿ ಆಗ್ರಹ ಮಾಡಲಾಗುತ್ತಿದೆ. ನಿರ್ಣಯ ಬರೆದು ಇಲಾಖೆ, ಸರಕಾರಕ್ಕೆ ಕಳಿಸಿಕೊಟ್ಟರೂ ಖಾಯಂ ವೈದ್ಯರ ನೇಮಕ ಆಗುತ್ತಿಲ್ಲ. ಇಲ್ಲಿನ ಆಸ್ಪತ್ರೆಯು ಹಿರೆಬಂಡಾಡಿಯಿಂದ ಕುಂತೂರಿನ ತನಕ ವ್ಯಾಪ್ತಿ ಹೊಂದಿದೆ. ಸಾಕಷ್ಟು ರೋಗಿಗಳು ಇಲ್ಲಿಗೆ ಬರುತ್ತಾರೆ. ಆದ್ದರಿಂದ ನಮ್ಮ ಹೋರಾಟ ಖಾಯಂ ವೈದ್ಯರ ನೇಮಕ ಆಗುವ ತನಕ ನಡೆಯಬೇಕು. ಇದಕ್ಕಾಗಿ ರಚನೆಗೊಂಡಿರುವ ಜನಪರ ಹೋರಾಟ ಸಮಿತಿಯಲ್ಲಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಸೇವಾ ಮನೋಭಾವದಿಂದ ಕೈಜೋಡಿಸುವ ಎಂದರು.
ಕೊೖಲ ಗ್ರಾ.ಪಂ.ಮಾಜಿ ಅಧ್ಯಕ್ಷ ಫಲೂಲುದ್ದೀನ್ ಹೇಂತಾರು ಮಾತನಾಡಿ, ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಮ್ಮ ಹಿರಿಯರು ಉಚಿತವಾಗಿ ಜಾಗ ನೀಡಿದ್ದಾರೆ. ಬಹಳ ವರ್ಷಗಳ ಹಿಂದೆ ಇಲ್ಲಿ ಹಗಲು-ರಾತ್ರಿ ವೈದ್ಯರು ಇರುತ್ತಿದ್ದರು. ಜನಸಂಖ್ಯೆ ಹೆಚ್ಚುತ್ತಿದ್ದಂತೆ ಇಲ್ಲಿ ಖಾಯಂ ವೈದ್ಯರು ಇಲ್ಲದೇ ಜನರಿಗೆ ತೊಂದರೆಯಾಗಿದೆ. ಖಾಯಂ ವೈದ್ಯರ ನೇಮಕಕ್ಕೆ ಒತ್ತಾಯಿಸಿ ತಾಲೂಕು, ಜಿಲ್ಲಾ ಹಂತಕ್ಕೂ ಹೋರಾಟ ನಡೆಸುವ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶ್ ಕೆಮ್ಮಾರ ಅವರು, ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಈ ಹೋರಾಟ ನಡೆಯಲಿದೆ. ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹಿರೆಬಂಡಾಡಿ, ಕೊೖಲ, ರಾಮಕುಂಜ, ಆಲಂಕಾರು ಹಾಗೂ ಪೆರಾಬೆ ಗ್ರಾಮ ಪಂಚಾಯತ್ ಬರುತ್ತಿದೆ. ಆಸ್ಪತ್ರೆಯ ವ್ಯಾಪ್ತಿಯಲ್ಲಿ ೩೨ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ೪೧ ಅಂಗನವಾಡಿ, ೨೮ ಶಾಲೆಗಳೂ ಇವೆ. ಅಲ್ಲದೇ ಕಟ್ಟಡ ಕಾರ್ಮಿಕರು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ೮ ವರ್ಷಗಳಿಂದ ಖಾಯಂ ವೈದ್ಯರು ಇಲ್ಲ. ಜೊತೆಗೆ ವಿವಿಧ ಹುದ್ದೆಗಳೂ ಖಾಲಿ ಇವೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಹೆದ್ದಾರಿ ಬದಿಯಲ್ಲಿಯೇ ಆಸ್ಪತ್ರೆ ಇದ್ದರೂ ಇಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರವೂ ಗಮನ ಹರಿಸುತ್ತಿಲ್ಲ. ಆದ್ದರಿಂದ ಎಲ್ಲರೂ ಒಂದೇ ಧ್ವನಿಯಾಗಿ ಹೋರಾಟ ಮಾಡುವ. ಮುಂದೆ ತಾಲೂಕು ಮಟ್ಟಕ್ಕೆ ಹೋರಾಟ ವಿಸ್ತರಿಸಲಾಗುವುದು ಎಂದರು.
ಡಿಎಚ್‌ಒ ಆಗಮನ:
ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಪ್ರತಿಭಟನೆ ನಿರತರ ಜೊತೆ ಮಾತುಕತೆ ನಡೆಸಿದರು. ವೈದ್ಯರ ನೇಮಕಾತಿ ಸರಕಾರದ ಮಟ್ಟದಲ್ಲಿ ಆಗಬೇಕಿದೆ. ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ. ತಾತ್ಕಾಲಿಕವಾಗಿ ಇಲ್ಲಿಗೆ ವಾರದಲ್ಲಿ ಎರಡು ದಿನ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರನ್ನು ಹಾಗೂ ಇನ್ನೆರಡು ದಿನ ಶಿರಾಡಿ ಪ್ರಾಥಮಿಕ ಆರೋಗ್ಯಕೇಂದ್ರ ವೈದ್ಯಾಧಿಕಾರಿಯವರನ್ನು ನಿಯೋಜನೆ ಮಾಡಲಾಗುವುದು. ಉಳಿದ ಎರಡು ದಿನ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಪೋಸ್ಟ್ ಗ್ರಾಜುವೇಟ್ಸ್‌ಗಳನ್ನು ಕರೆಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಕೊೖಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ, ಉಪಾಧ್ಯಕ್ಷ ಯತೀಶ್ ಕುಮಾರ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂದಿಪೇಟೆ, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಎಪಿಎಂಸಿ ಮಾಜಿ ನಿರ್ದೇಶಕ ಶೀನಪ್ಪ ಗೌಡ ವಳಕಡಮ, ಆತೂರು ಮೂಹಿದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಗಫರ್, ಮದರಸ ಮ್ಯಾನೇಜ್ಮೆಂಟ್ ಆತೂರು ರೇಂಜ್ ಪ್ರಧಾನ ಕಾರ್ಯದರ್ಶಿ ರಫೀಕ್ ಜಿ., ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಆರ್.ಕೆ., ಕೊಲ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬೇಂಗದಪಡ್ಪು, ಹೇಮಾ ಮೋಹನ್‌ದಾಸ್ ಶೆಟ್ಟಿ, ಎಸ್‌ಕೆಎಸ್‌ಎಸ್‌ಎಫ್ ಆತೂರು ಶಾಖೆ ಖಜಾಂಜಿ ಬಿ.ಆರ್.ಅಬ್ದುಲ್ ಖಾದರ್, ಪ್ರಮುಖರಾದ ಬಶೀರ್ ಆತೂರು, ದೇವಿಪ್ರಸಾದ್ ನೀರಾಜೆ, ಬಾಲಕೃಷ್ಣ ಭಟ್, ಪುರುಷೋತ್ತಮ ಕೊಲ, ಬಾಲಾಜಿ ಶೆಟ್ಟಿ ಕುಂಡಾಜೆ, ಭವಾನಿಶಂಕರ ಗೌಡ ಪರಂಗಾಜೆ, ಮೋಹನದಾಸ್ ಶೆಟ್ಟಿ ಕೆಮ್ಮಾರ, ಆಝೀಝ್ ಬಿ.ಕೆ.ಕೆಮ್ಮಾರ. ಹಾರೀಶ್ ಹಳೆನೇರೆಂಕಿ, ಸೌಕತ್ ಆಲಿ ಹಿರೆಬಂಡಾಡಿ, ಸೆಲೀಕತ್ ಕೆಮ್ಮಾರ, ಎಸ್.ಪಿ.ಖಲಂದರ್, ಮುನೀರ್ ಆತೂರು, ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಡಾ.ಆಕಾಶ್ ಅವರನ್ನು ನೇಮಿಸಿ:
ಡಿಎಚ್‌ಒ ಆಗಮನಕ್ಕೆ ಮೊದಲು ಪ್ರತಿಭಟನಾಕಾರರ ಜೊತೆ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೋವಿಡ್ ಸಂದರ್ಭದಲ್ಲಿ ಆಲಂಕಾರಿನ ಡಾ.ಆಕಾಶ್ ಅವರು ಇಲ್ಲಿ ವೈದ್ಯಾಧಿಕಾರಿಯಾಗಿ ಉತ್ತಮ ಸೇವೆ ನೀಡಿದ್ದಾರೆ. ಅವರನ್ನೇ ಇಲ್ಲಿಗೆ ನೇಮಿಸಿ ಅವರ ಹುದ್ದೆಯನ್ನು ಖಾಯಂಗೊಳಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ದೀಪಕ್ ರೈ ಅವರು ಡಾ.ಆಕಾಶ್ ಅವರು ಬರಲು ಒಪ್ಪುವುದಾದರೆ ಗುತ್ತಿಗೆ ಆಧಾರದಲ್ಲಿ ಇಲಾಖೆ ನೇಮಕ ಮಾಡಿಕೊಳ್ಳಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಅವರನ್ನು ಗುತ್ತಿಗೆ ಆಧಾರದ ಬದಲು ಇಲ್ಲಿಗೆ ಖಾಯಂ ವೈದ್ಯರಾಗಿ ನೇಮಕಗೊಳಿಸಬೇಕೆಂದು ಒತ್ತಾಯಿಸಿದರು. ಡಾ.ದೀಪಕ್ ರೈ ಅವರು ಡಾ.ಆಕಾಶ್ ಅವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದರು. ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಡಾ.ಆಕಾಶ್ ಅವರು ಡಾ.ದೀಪಕ್ ರೈಯವರಲ್ಲಿ ಹೇಳಿದರು.
ವೈದ್ಯರ ಜೊತೆ ಇತರೇ ಸಿಬ್ಬಂದಿ ನೇಮಕ್ಕೂ ಆಗ್ರಹ:
ಖಾಯಂ ವೈದ್ಯರ ಜೊತೆಗೆ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಆರೋಗ್ಯ ನಿರೀಕ್ಷಣಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಔಷಧ ವಿತರಕ, ಗುಮಾಸ್ತ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಗ್ರೂಪ್ ಡಿ. ಸಿಬ್ಬಂದಿಗಳ ನೇಮಕ ಮಾಡುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿ ಮನವಿ ಸಲ್ಲಿಸಿದರು.