ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ‘ದೀಪ ಪ್ರದಾನ’ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕೃಷ್ಣಮೂರ್ತಿಕೆದಿಲ, ‘ಭವಿಷ್ಯದ ಸವಾಲುಗಳು’ ಎಂಬ ವಿಷಯದ ಕುರಿತು ಸಂವಾದ ನಡೆಸಿ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ತಲುಪುವ ಬಗೆ ಹೇಗೆ ಎಂಬುದನ್ನು ತಿಳಿಸಿದರಲ್ಲದೆ, ಮುಂಬರುವ ವಾರ್ಷಿಕ ಪರೀಕ್ಷೆಗಳನ್ನು ಬರೆಯಲು ಬೇಕಾದ ಆತ್ಮಸ್ಥೈರ್ಯದ ನುಡಿಗಳನ್ನಾಡಿ ಶುಭಹಾರೈಸಿದರು.
ಪತ್ರಕರ್ತ ರಾಜೇಶ್ ನರಿಂಗಾನ ಮಾತನಾಡಿ, ವಿದ್ಯಾರ್ಥಿ ಜೀವನದ ಮಹತ್ವವನ್ನು ತಿಳಿಸಿದರು. ಶಾಲಾ ಸಂಚಾಲಕ ಸುಬ್ರಹ್ಮಣ್ಯ ಭಟ್ ಕೆದಿಲ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅತಿಥಿಗಳು ದೀಪವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರಸುವರ್ಣ, ಸದಸ್ಯರಾದ ಡಾ. ಸ್ವಾತಿ , ಸುಧಾಕರ್ ಶೆಟ್ಟಿ, ರವಿ ಇಳಂತಿಲ ಹಾಗೂ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸ್ವಾತಿ ಬಿ.ಎಸ್. ಸ್ವಾಗತಿಸಿದರು. ಶ್ರೀಮತಿ ಸುಂದರಿ ವಂದಿಸಿದರು.ಯಶಸ್ವಿನಿ ಎಂ. ಕಾರ್ಯಕ್ರಮ ನಿರೂಪಿಸಿದರು.