ಪುತ್ತೂರು: ಅಭಿವೃದ್ಧಿಗೆ ದೇವರ ತೃಪ್ತಿಯಿದೆ, ಸನ್ನಿದಾನಕ್ಕೆ ಸಂತೋಷವಿದೆ. ಮಾಡುವಂತಹ ಕರ್ತವ್ಯಕ್ಕೆ ದೇವ ಹಿತವಿದೆ. ಇದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.16ರಂದು ನಡೆದ ಒಂದು ದಿನದ ತಾಂಬೂಲ ಪ್ರಶ್ನೆಯಲ್ಲಿ ದೈವಜ್ಞರು ತಿಳಿಸಿದ ವಿಚಾರವಾಗಿದೆ.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಅಭಿವೃದ್ದಿ ಕುರಿತು ಶಾಸಕರ ಸೂಚನೆಯಂತೆ ಫೆ.16ರಂದು ಜ್ಯೋತಿಷಿ ನಿಟ್ಟೆ ಪ್ರಸನ್ನ ಆಚಾರ್ಯರವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು. ಬೆಳಿಗ್ಗೆ ದೇವಳದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಳದ ಅನ್ನಪ್ರಸಾದ ವಿತರಣಾ ಸಭಾಂಗಣದಲ್ಲಿ ತಾಂಬೂಲ ಪ್ರಶ್ನೆ ಆರಂಭಗೊಂಡಿತ್ತು. ಜ್ಯೋತಿಷಿ ನಿಟ್ಟೆ ಪ್ರಸನ್ನ ಆಚಾರ್ಯರವರ ಶಿಷ್ಯ ಶ್ರೀನಿವಾಸ ಗೋಪಾಲಕೃಷ್ಣ ಭಟ್ ಪಡೀಲು ಅವರು ಪ್ರಶ್ನಾ ಚಿಂತನೆಯ ವಿಮರ್ಶೆಯಲ್ಲಿ ಪಾಲ್ಗೊಂಡರು.
ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಶ್ನಾ ಚಿಂತನಾ ವೇದಿಕೆಯಲ್ಲಿದ್ದರು. ಪ್ರಶ್ನಾಚಿಂತನೆಯ ಆರಂಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೀಪ ಪ್ರಜ್ವಲಿಸಿ ಮಾತನಾಡಿ, ದೇವಳದ ಅಭಿವೃದ್ಧಿ, ದೇವಸ್ಥಾನದ ಕಟ್ಟೆ ದುರಸ್ಥಿ, ಕೆರೆ ಅಭಿವೃದ್ದಿ, ಅಶ್ವತ್ಥ ಮರದ ಕುತ್ತಿ ತೆಗೆಯುವುದು ಸಹಿತ ಅನೇಕ ಅಭಿವೃದ್ಧಿ ಕಾರ್ಯದ ಕುರಿತು ಚಿಂತನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳು ದೇವರ ಪ್ರೇರಣೆಯಂತೆ ಶಾಸಕ ಅಶೋಕ್ ರೈಯವರ ಸೂಚನೆಯಂತೆ ಮಾಡಲಾಗುತ್ತಿದೆ ಎಂದರು.
ಬಳಿಕ ದೈವಜ್ಞರು ತಾಂಬೂಲ ಪ್ರಶ್ನಾ ಚಿಂತನೆ ಆರಂಭಿಸಿದರು. ಆರೂಢದಲ್ಲಿ ಮಕರ ರಾಶಿಯೇ ಬಂದಿದೆ. ಕರ್ಕಾಟಕ ರಾಶಿಯಲ್ಲಿ ನಿವೃತ್ತಿ ಕಂಡು ಬಂದಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ನಕ್ಷತ್ರ ಶ್ರಾವಣ, ರಾಶಿ ಮಕರವಾಗಿದೆ. ಆರೂಢದಲ್ಲಿ ಮಕರ ಬಂದಿರುವುದು ವಿಶೇಷವಾಗಿತ್ತಲ್ಲದೆ ದೇವರಿಗೆ ತೃಪ್ತಿ ಕಂಡಿದೆ. 6 ರಾಶಿಗಳಲ್ಲಿ ಪಂಚಮದಲ್ಲಿ ದೈವ ಬಲವಿದ್ದು, 1 ರಾಶಿಗೆ ದೈವ ಬಲ ಕಡಿಮೆ ಇದೆ. ಆದರೆ ಅಭಿವೃದ್ದಿಗೆ ಪೂರಕವಾಗಿ ದೈವಬಲವಿದೆ ಎಂದರು.
ದೇವಸ್ಥಾನದ ಪರಿಸರ ದೇವಸ್ಥಾನದ ಉತ್ಸವಗಳಿಗೆ ಮೀಸಲು:
ದೇವಸ್ಥಾನದ ಪರಿಸರ ದೇವಸ್ಥಾನದ ಉತ್ಸವಗಳಿಗೆ ಬಳಕೆಯಾಗಬೇಕಾಗಿದೆ. ದೇವಸ್ಥಾನದ ಪರಿಸರದಲ್ಲಿ ಉತ್ತಮ ಕಾರ್ಯಗಳೇ ನಡೆಯಬೇಕು. ಅಭಿವೃದ್ಧಿ ದೃಷ್ಟಿಯಿಂದ ದೇವಸ್ಥಾನದ ಜಾಗವನ್ನು ಬಿಡಬೇಕೆಂದು ಮೊದಲಿನಿಂದಲೂ ಕಂಡು ಬಂದಿದೆ. ಈ ಜಾಗವನ್ನು ದೇವರಿಗೆ ಉಚಿತವಾಗಿ ಬಿಟ್ಟುಕೊಡಬೇಕಾಗಿತ್ತು. ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನೇ ಮಾಡಲಾಗುತ್ತಿದೆ. ಸಂಪತ್ತನ್ನು ಬೇರೆಯವರಿಗೆ ನೀಡುವುದಕ್ಕೆ ದೇವರ ಒಪ್ಪಿಗೆಯಿಲ್ಲ. ಆ ಮೊತ್ತವನ್ನು ಬೇರೆ ಅಭಿವೃದ್ಧಿಗೆ ಬಳಸಬಹುದಿತ್ತು. ಯಾರೆಲ್ಲ ಜಾಗದಿಂದ ಹೊರ ಹೋಗಿದ್ದಾರೋ ಅವರೆಲ್ಲರೂ ಮುಂದೆ ನಿವೃತ್ತಿಯ ಸಂದರ್ಭದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಬೇಕು ಎಂದು ದೈವಜ್ಞರು ನುಡಿದರು. ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನಾನು ಅವರ ಮನೆಗೆ ಹೋಗಿ ತಿಳಿಸುತ್ತೇನೆ ಎಂದರು. ನೀವು ದೇವರ ಪ್ರತಿನಿಧಿ ನೀವು ಹೋಗುವಂತಿಲ್ಲ. ಪ್ರಕಟಣೆ ಕೊಟ್ಟರೆ ಸಾಕು ಎಂದು ದೈವಜ್ಞರು ನುಡಿದರು.
ಶಾಸಕ ಅಶೋಕ್ ಕುಮಾರ್ ರೈ, ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿಯವರ ಪುತ್ರ ಗುರುಪ್ರಸಾದ ತಂತ್ರಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ನಳಿನಿ ಪಿ ಶೆಟ್ಟಿ, ಈಶ್ವರ ಬೇಡೆಕರ್, ಕೃಷ್ಣವೇಣಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ರವಿಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ದೇವಳದ ಛತ್ರಿ ಪರಿಚಾರಕ ನಾರಾಯಣ ಶಗ್ರಿತ್ತಾಯ, ಗಣೇಶ್ ಕೆದಿಲಾಯ, ದೇವಳ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಹಿರಿಯರಾದ ಕಿಟ್ಟಣ್ಣ ಗೌಡ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹೆಚ್ ಉದಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸುದೇಶ್ ಚಿಕ್ಕಪುತ್ತೂರು, ರತ್ನಾಕರ ನಾಯ್ಕ್, ರಂಜಿತ್ ಬಂಗೇರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಬೆಳಗ್ಗೆ ಗಂಟೆ 10.50ಕ್ಕೆ ಆರಂಭಗೊಂಡ ಪ್ರಶ್ನಾಚಿಂತನೆಯು ಸಂಜೆ ಗಂಟೆ 5.30ಕ್ಕೆ ಪೂರ್ಣಗೊಂಡಿದೆ.
ತಂತ್ರಿ, ವೈದಿಕರ ಬದಲಾವಣೆ ಪ್ರಶ್ನೆಯೇ ಇಲ್ಲ
ದೇವಸ್ಥಾನದ ತಂತ್ರಿ ಮತ್ತು ವೈದಿಕರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನಮ್ಮದು ಏನಿದ್ದರೂ ಅಭಿವೃದ್ದಿ ಮಾತ್ರ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು. ಪ್ರಶ್ನಾಚಿಂತನೆ ಸಂದರ್ಭದಲ್ಲಿ ಸಭೆಯಲ್ಲಿದ್ದ ಭಕ್ತರೊಬ್ಬರು ತಂತ್ರಿಗಳ ಬದಲಾವಣೆ ಕುರಿತು ಪ್ರಶ್ನಿಸಿದರು. ಈ ವೇಳೆ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ತಂತ್ರಿಗಳ ಮತ್ತು ವೈದಿಕರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
2026ಕ್ಕೆ ಬ್ರಹ್ಮಕಲಶ ಮಹೋತ್ಸವ
ಗರ್ಭಗುಡಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳನ್ನು ಮುಗಿಸಿ 2026ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವನ್ನು ಸರ್ವರ ಜೊತೆಗೂಡಿ ವಿಜ್ರಂಭಣೆ ಯಿಂದ ನಡೆಸಲು ದೇವರ ಪೂರ್ಣ ಅನುಮತಿ ಸಿಕ್ಕಿದೆ. ಶ್ರೀ ಮಹಾಲಿಂಗೇಶ್ವರ ಸ್ವಾಮಿಯನ್ನು ಆರಾಧಿಸುತ್ತಿರುವ ಭಕ್ತಕೋಟಿಗೆ ಇದು ಹರ್ಷದ ಶುಭಸೂಚನೆಯಾಗಿದೆ ಎಂದು ದೈವಜ್ಞರು ಹೇಳಿದರು.
ಶಾಸಕರ ಸೂಚನೆಯಂತೆ ತಾಂಬೂಲ ಪ್ರಶ್ನೆಯನ್ನು ದೇವರ ಇಚ್ಚೆಯಂತೆ ಮಾಡಿದ್ದೇವೆ. ಪ್ರಶ್ನಾಚಿಂತನೆಯಲ್ಲಿ ಅಭಿವೃದ್ಧಿಗೆ ಪೂರ್ಣ ಸಹಮತ ಬಂದಿದೆ. ಸಣ್ಣಪುಟ್ಟ ಲೋಪದೋಷ ಇದೆ. ಅದಕ್ಕೆ ನಿವೃತ್ತಿಯನ್ನೂ ದೈವಜ್ಞರು ಸೂಚಿಸಿದ್ದಾರೆ. ಆದಷ್ಟು ಬೇಗ ನಿವೃತ್ತಿ ಮಾಡಿಕೊಂಡು ಅಭಿವೃದ್ಧಿ ಕೆಲಸ ಆರಂಭಿಸುತ್ತೇವೆ. ಮಹಾಲಿಂಗೇಶ್ವರ ದೇವರು ಊರಿಗೆ ಸನ್ಮಂಗಳ ಉಂಟು ಮಾಡಲಿ.
ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು