ಯುವಶಕ್ತಿಯಂತಹ ಸಂಘಟನೆಯ ಅವಶ್ಯಕತೆ ಪ್ರತೀ ಗ್ರಾಮಕ್ಕಿದೆ: ಕ್ಯಾ|ಬ್ರಿಜೇಶ್ ಚೌಟ
ಪುತ್ತೂರು: ಯುವಜನತೆಗೆ ಇರುವ ಶಕ್ತಿಯನ್ನು ರಾಷ್ಟ್ರನಿರ್ಮಾಣದ ಕೆಲಸದಲ್ಲಿ ಜೋಡಿಸಿಕೊಳ್ಳಬೇಕಿದ್ದರೆ ‘ಯುವಶಕ್ತಿಯ’ಯಂತಹ ಸಂಘಟನೆಗಳ ಅಗತ್ಯವಿದೆ. ಸಮಾಜದಲ್ಲಿ ಅವಶ್ಯಕತೆ ಇರುವವರನ್ನು ಗುರಿಯನ್ನಾಗಿಸಿಕೊಂಡು ಸೇವೆ ನೀಡಬೇಕು. ಯುವಶಕ್ತಿ ಸಂಘಟನೆಯು ಅಂತಹುದೇ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ’ ಎಂದು ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಅವರು ಫೆ.15ರಂದು ಯುವಶಕ್ತಿ ಕಡೇಶಿವಾಲಯ ಇದರ ವತಿಯಿಂದ ಕಡೇಶಿವಾಲಯದ ಪೆರ್ಲಾಪು ಸರಕಾರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ನಡೆದ ನೂತನ ಶಾಲಾ ಕೊಠಡಿಗಳ ಲೋಕಾರ್ಪಣೆ, ರಕ್ತದಾನ ಶಿಬಿರ, YSK ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸನ್ಮಾನ ಸಮಾರಂಭ ‘ಸಂತೃಪ್ತಿ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಯುವಶಕ್ತಿಯಂತಹ ಸಂಘಟನೆಯ ಅವಶ್ಯಕತೆ ಪ್ರತೀ ಗ್ರಾಮಕ್ಕೂ ಇದೆ. ಯುವಶಕ್ತಿಯ ಪ್ರತೀ ಸದಸ್ಯರೂ ಈ ವರ್ಷ ಪ್ರಧಾನಮಂತ್ರಿಗಳ ಯೋಜನೆಯನ್ನು ಕಡೇಶಿವಾಲಯ ಗ್ರಾಮದ ಪ್ರತಿಯೋರ್ವ ಫಲಾನುಭವಿಗೂ ಮುಟ್ಟಿಸುತ್ತೇವೆ ಎನ್ನುವ ಸಂಕಲ್ಪ ಮಾಡಬೇಕು. ಯುವಕರ ತಂಡ ಮಾಡುತ್ತಿರುವ ಸಮಾಜಮುಖಿ ಕೆಲಸಗಳಿಗೆ ತಾಯಂದಿರ ಆಶೀರ್ವಾದ ಇರಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಖ್ಯಾತ ಮನಃಶಾಸಜ್ಞರಾದ ದಿಶಾರಾಘ್ ಶೆಟ್ಟಿ ಮಾತನಾಡಿ, ನಿಸ್ವಾರ್ಥ ಮನೋಭಾವದಿಂದ ಯುವಶಕ್ತಿ ಸಂಘಟನೆಯು ಅನೇಕ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಮನುಷ್ಯನ ಜೀವನದಲ್ಲಿ ಹುಟ್ಟು ಸಾವು ಸಹಜ. ಜೀವನದಲ್ಲಿ ಪುಣ್ಯಫಲದ ಕೆಲಸ ಮಾಡಿದರೆ ಬದುಕು ಹಸನಾಗುತ್ತದೆ. ಯುವಶಕ್ತಿಯ ಕಾರ್ಯಕರ್ತರು ಸಾರ್ಥಕತೆಯ ಕೆಲಸ ಮಾಡುತ್ತಾ ಬಂದಿದ್ದಾರೆ. ಮುಂದಕ್ಕೆ ಇನ್ನಷ್ಟು ಕೆಲಸಗಳು ಇವರ ಮೂಲಕ ನಡೆಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ದಾಯ್ಜಿವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ, ನಮ್ಮ ದೇಶ ಯುವದೇಶ. ದೇಶದ 65% ಜನಸಂಖ್ಯೆ 35 ವರ್ಷ ವಯಸ್ಸಿನ ಕೆಳಗಿನವರು. ಮನುಷ್ಯ ಜೀವನದಲ್ಲಿ ಅತ್ಯಂತ ಖುಷಿಯಲ್ಲಿ ಬದುಕಲು ಬೇಕಿರುವುದು ಕೇವಲ ಎರಡು ವಿಷಯಗಳು. ಒಂದು ಸಂತೃಪ್ತಿ. ಇನ್ನೊಂದು ಮಾನವೀಯತೆ. ಯುವಶಕ್ತಿಯ 14 ವರ್ಷಗಳ ಪಯಣದಲ್ಲಿ ಇವೆರಡೂ ಇದೆ. ತಂಡದ ಪ್ರತೀ ಸದಸ್ಯರ ಮುಖದಲ್ಲೂ ಸಂತೃಪ್ತಿಯಿದೆ, ಮಾನವೀಯತೆಯಿದೆ. ಇಡೀ ತುಳುನಾಡಿನ ಯುವಕರಿಗೆ ಕಡೇಶಿವಾಲಯದ ಯುವಶಕ್ತಿ ಮಾದರಿ ಎಂದು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅಭ್ಯಾಗತರಾದ ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು ಮಾತನಾಡಿ, ಯುವಶಕ್ತಿ ಕಡೇಶಿವಾಲಯ ಸಂಘಟನೆ ೧೪ ವರ್ಷಗಳ ಸಮಾಜಸೇವೆಯ ಮೂಲಕ ಸಾರ್ಥಕ ಸಂತೃಪ್ತಿ ಕಂಡಿದೆ. ಬದುಕನ್ನು ಹೇಗೆ ಸಾರ್ಥಕಗೊಳಿಸಬಹುದು ಎನ್ನುವುದನ್ನು ಈ ಯುವಕರ ಮೂಲಕ ನಾವು ಅರ್ಥಮಾಡಿಕೊಳ್ಳಬಹುದು. ಯುವಕರ ಬೆನ್ನಿಗೆ ನಾನು ಸದಾ ಇದ್ದೇನೆ ಎಂದು ಹೇಳಿದರು. ಸಂಜೆ ವೇಳೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು ಮಾತನಾಡಿ, ಯುವಶಕ್ತಿ ಸಂಘಟನೆಯ ಯುವಕರು ಊರಿನ ಬಗ್ಗೆ ಬಹಳಷ್ಟು ಕಾಳಜಿ ವಹಿಸಿ ಸಮಾಜಸೇವೆ ಮಾಡುತ್ತಿದ್ದಾರೆ. ನಾವು ಸರಕಾರದಿಂದ ಮಾಡಬೇಕಾದ ಕೆಲಸವನ್ನು ಯುವಶಕ್ತಿ ಮಾಡುತ್ತಿದೆ. ಶಾಲೆಯನ್ನು ದತ್ತು ತೆಗೆದುಕೊಳ್ಳುವ ಕೆಲಸ ಮಾಡಿ. ಈ ಕಾರ್ಯಕ್ಕೆ ನನ್ನದೂ ಸಹಕಾರ ಇದೆ. ಇನ್ನಷ್ಟು ಸಮಾಜಮುಖಿ ಕೆಲಸಗಳು ಯುವಕರ ಮೂಲಕ ನಡೆಯಲಿ ಎಂದು ಹಾರೈಸಿದರು. ಜೊತೆಗೆ ಕಡೇಶಿವಾಲಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ನಡ್ಯೇಲು ಜೊತೆಗಿದ್ದರು.
ಸಂಜೆಯ ಸಭಾವೇದಿಕೆಯಲ್ಲಿ ಬೆಂಗಳೂರು ಕೆನರಾ ಗ್ರೂಪ್ಸ್‌ನ ಉತ್ತಮ್ ಶೆಟ್ಟಿ ಬೇಂಗೆದಡಿ, ಮುಂಬೈ ಉದ್ಯಮಿ ನಾರಾಯಣ ನಾಯ್ಕ ಪಿಲಿಂಗಾಲ, ಯುವಶಕ್ತಿ ಕಡೇಶಿವಾಲಯ ಸಂಘಟನೆಯ ಗೌರವಾಧ್ಯಕ್ಷ ವಿದ್ಯಾಧರ ರೈ ಅಮೈ, ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್, ಪ್ರಗತಿಪರ ಕೃಷಿಕ ಸಾಂತಪ್ಪ ಪೂಜಾರಿ ನಚ್ಚಡಿಬೈಲು, ಕಡೇಶಿವಾಲಯ ಶಾಲಾ ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ., ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ರಾವ್ ನೆಕ್ಕಿಲಾಡಿ, ಎಲ್‌ಐಸಿ ಇಂಡಿಯಾ ಬಂಟ್ವಾಳದ ಅಭಿವೃದ್ಧಿ ಅಽಕಾರಿ ಮಧ್ವರಾಜ್ ಕಲ್ಮಾಡಿ, ನಿವೃತ್ತ ಎಂಸಿಎಫ್ ಉದ್ಯೋಗಿ ಸತೀಶ್ ಭಂಡಾರಿ ಅಮೈ ಉಪಸ್ಥಿತರಿದ್ದರು.
ಯುವಶಕ್ತಿ ಕಡೇಶಿವಾಲಯ ಸಂಘಟನೆಯ ಅಧ್ಯಕ್ಷ ದೇವಿಪ್ರಸಾದ್ ಬಿ., ಕಾರ್ಯದರ್ಶಿ ಸುರೇಶ್ ಬನಾರಿ, ಉಪಾಧ್ಯಕ್ಷ ಗೋಪಾಲಕೃಷ್ಣ ನಾಯಕ್, ಕೋಶಾಽಕಾರಿ ಅಶೋಕ್ ಪ್ರತಾಪನಗರ, ಜೊತೆ ಕಾರ್ಯದರ್ಶಿ ತಿಲಕ್ ಮುಂಡಾಲ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಸಹಕರಿಸಿದರು. ಗಂಗಾಧರ ಮಾಣಿ ಪ್ರಾರ್ಥಿಸಿದರು. ಯುವಶಕ್ತಿ ಕಡೇಶಿವಾಲಯ ಸಂಘಟನೆಯ ಕಾರ್ಯಕರ್ತ ದಿನೇಶ್ ಬಡೆಕೊಟ್ಟು ಸ್ವಾಗತಿಸಿದರು. ಸಂಚಾಲಕ ವಿಜಿತ್ ಸಂಪೋಳಿ ವಂದಿಸಿದರು. ಅವಿನಾಶ್ ಕಡೇಶಿವಾಲಯ ಮತ್ತು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
14 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಯನ್ನು ನಡೆಸುತ್ತಾ ಬಂದಿರುವ ಯುವಶಕ್ತಿ ಕಡೇಶಿವಾಲಯ ಸಂಘಟನೆಯು ಯುವಶಕ್ತಿ ಸೇವಾಪಥದ ಮೂಲಕ 75,72,502ರೂ.ಗಳನ್ನು ಸಮಾಜಕ್ಕೆ ಅರ್ಪಿಸಿದೆ. ಯುವಶಕ್ತಿ ಕಡೇಶಿವಾಲಯದಿಂದ 38,19,500 ರೂ.ಗಳನ್ನು ಸಮಾಜಕ್ಕೆ ಅರ್ಪಿಸಲಾಗಿದೆ. ಯುವಶಕ್ತಿ ರಕ್ತನಿಧಿಯ ಮೂಲಕ ರಾಜ್ಯದ ವಿವಿಧ ಭಾಗಗಳ ಆಸ್ಪತ್ರೆಗಳಿಗೆ ಒಟ್ಟು 14,520 ಯೂನಿಟ್ ರಕ್ತವನ್ನು ಪೂರೈಸಲಾಗಿದೆ. ಹೀಗೆ ಒಟ್ಟು 1,13,92,002 ರೂ.ಗಳ ಬೃಹತ್ ಮೊತ್ತವನ್ನು ಸಮಾಜಕ್ಕೆ ನೀಡಿ ಸಾರ್ಥಕ ಸಂತೃಪ್ತಿಯನ್ನು ಅನುಭವಿಸಿದೆ.
ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಯುವರತ್ನ ಗೌರವ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆದಿದ್ದು, ನಟ, ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಅವರಿಗೆ ಯುವ ಕಲಾರತ್ನ, ಪ್ರಸಿದ್ಧ ದೈವನರ್ತಕ ಲೋಕಯ್ಯ ಶೇರಾ ಅವರಿಗೆ ಧರ್ಮರತ್ನ, ಖ್ಯಾತ ಕಬಡ್ಡಿ ಪಟು ರೋಹಿತ್ ಮಾರ್ಲರಿಗೆ ಯುವ ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜಸೇವಕ ರವಿ ಕಟಪಾಡಿಯವರನ್ನು ಯುವ ಸೇವಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ವಿಟಿ ಪ್ರದರ್ಶಿಸಲಾಯಿತು. ಶಾಲೆ ತರಗತಿ ಕೊಠಡಿ ಗುತ್ತಿಗೆದಾರ ಯುವಶಕ್ತಿಯ ಪ್ರಮುಖರಾದ ಕಿರಣ್ ಶೆಟ್ಟಿ ನಡ್ಯೇಲು ರವರನ್ನು ಗೌರವಿಸಿ ಅಭಿನಂದಿಸಲಾಯಿತು.