ಪುತ್ತೂರು:ಬೆಂಗಳೂರುನಿಂದ ಊರಿಗೆ ಬರುತ್ತಿದ್ದ ಹೊಟೇಲ್ ಉದ್ಯಮಿಯೋರ್ವರ ಕಾರನ್ನು ತಡೆದು ನಗದು,ಮೊಬೈಲ್ ಫೋನ್ ದೋಚಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಬೆಂಗಳೂರುನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಕಾವೂರು ಕುಂಜತ್ತಬೈಲ್ ಮಹಮ್ಮದ್ ಅಜೀಜ್ ಎಂಬವರು 2010ರ ಮೇ 30ರಂದು ಬೆಂಗಳೂರುನಿಂದ ಕಾರಿನಲ್ಲಿ ಬರುತ್ತಿದ್ದಾಗ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಕೆಂಪು ಬಣ್ಣದ ವ್ಯಾಗನರ್ ಕಾರೊಂದನ್ನು ಅವರ ಕಾರಿಗೆ ಅಡ್ಡವಾಗಿ ನಿಲ್ಲಿಸಿ ಕೃತ್ಯ ಎಸಗಲಾಗಿತ್ತು.
ತನ್ನ ಕಾರು ಚಾಲಕ ಖಾದರ್ ಹಾಗೂ ಎದುರಿನಿಂದ ಬಂದಿದ್ದ ವ್ಯಾಗನರ್ ಕಾರಲ್ಲಿದ್ದ ಇತರ ಇಬ್ಬರು ಸೇರಿ ನನ್ನಲ್ಲಿದ್ದ ಎರಡು ಲಕ್ಷ ರೂ.ಹಣ ಮತ್ತು ಬಟ್ಟೆ ಬರೆಗಳನ್ನು ತುಂಬಿದ್ದ ಸೂಟ್‌ಕೇಸ್ ಹಾಗೂ ನನ್ನಲ್ಲಿದ್ದ ಸುಮಾರು 27 ಸಾವಿರ ರೂ.ಬೆಲೆ ಬಾಳುವ ಮೊಬೈಲ್ ಫೋನನ್ನು ಎಳೆದುಕೊಂಡು ಹೋಗಿದ್ದರು.ನನ್ನ ಕಾರಿನ ಚಾಲಕ ಖಾದರ್ ಎಂಬಾತ ಇತರ ಆರೋಪಿಗಳನ್ನು ಸೇರಿಸಿ ಕೃತ್ಯ ಎಸಗಿರುವುದಾಗಿ ಜೂ.17ರಂದು ಮಹಮ್ಮದ್ ಅಜೀಜ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಉಪ್ಪಿನಂಗಡಿ ಪೊಲೀಸರು ಕಲಂ 392 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳಾದ ಕಾರು ಚಾಲಕ ಖಾದರ್ ಹಾಗೂ ಇನ್ನೋರ್ವ ತಲೆಮರೆಸಿಕೊಂಡಿದ್ದು ಎರಡನೇ ಆರೋಪಿ ಅಬ್ದುಲ್ ಲತೀಫ್ ಉರುಸಾಗು ಕನ್ಯಾನ ಮತ್ತು ಮೂರನೇ ಆರೋಪಿ ಎನ್.ಎಂ.ಎ ಸಿದ್ದೀಕ್ ನಂದರಬೆಟ್ಟು ಎಂಬವರ ಮೇಲಿನ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಅವರೀರ್ವರನ್ನೂ ದೋಷಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ಕೆ.ವಾದಿಸಿದ್ದರು.