ರಸ್ತೆ ಮಾಡುವ ಜಾಗ ಖಾಸಗಿಯವರದ್ದಾದರೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವೆ: ಶಾಸಕ ಅಶೋಕ್ ರೈ
ಪುತ್ತೂರು: ಕಳೆದ 40 ವರ್ಷಗಳಿಂದ ಇತ್ಯರ್ಥವಾಗದೆ ವಿವಾದದಲ್ಲಿದ್ದ ಮಂಜಲ್ಪಡ್ಪು ತೋಟಗಾರಿಕಾ ಇಲಾಖಾ ಬಳಿಯಿಂದ ಪೆರಿಯತ್ತೋಡಿ ಆಶ್ರಯ ಕಾಲನಿಗೆ ತೆರಳುವ ಸಂಪರ್ಕ ರಸ್ತೆಯ ವಿವಾದ ಪರಿಹಾರವಾಗಿದ್ದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸುಖಾಂತ್ಯ ಕಂಡಿದೆ.
ಪೆರಿಯತ್ತೋಡಿ ಆಶ್ರಯ ಕಾಲನಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣವಾಗಿರಲಿಲ್ಲ. ಈ ಭಾಗದ ಜನರು ಸುಮಾರು 40 ವರ್ಷಗಳಿಂದ ಸರಿಯಾದ ರಸ್ತೆ ಇಲ್ಲದೆ ವ್ಯಥೆ ಪಡುವಂತಾಗಿದ್ದು, ಎರಡು ತಿಂಗಳ ಹಿಂದೆ ಕಾಲನಿಗೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ ಅವರು ಈ ಭಾಗದ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಸಕರು ಇಲ್ಲಿನ ರಸ್ತೆ ಅಭಿವೃದ್ದಿಗೆ 36.5 ಲಕ್ಷ ಅನುದಾನವನ್ನು ನೀಡಿದ್ದು ಅದರ ಗುದ್ದಲಿ ಪೂಜೆ ಶುಕ್ರವಾರ ನೆರವೇರಿಸಿದರು.
ವಿವಾದ ಏನು?
ಈ ರಸ್ತೆ ಹಾದು ಹೋಗುವಾಗ ಮಧ್ಯದಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಾಗದ ಬದಿಯಲ್ಲಿ ತೆರಳಬೇಕಾಗಿದ್ದು, ಖಾಸಗಿ ವ್ಯಕ್ತಿಯೋರ್ವರು ಇದು ತನ್ನ ವರ್ಗ ಜಾಗವಾಗಿದ್ದು ಇಲ್ಲಿಂದ ರಸ್ತೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕಾರಣಕ್ಕೆ ಕಳೆದ 40 ವರ್ಷಗಳಿಂದ ಇದು ವಿವಾದವಾಗಿಯೇ ಉಳಿದಿತ್ತು. ಈ ಭಾಗದಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದ್ದು ಸರಿಯಾದ ರಸ್ತೆ ಸಂಪರ್ಕ ಇರಲಿಲ್ಲ. ತೋಟಗಾರಿಕಾ ಇಲಾಖಾ ಕಚೇರಿಯಿಂದ ಸ್ವಲ್ಪ ಮುಂದಕ್ಕೆ ಮಾತ್ರ ಕಾಂಕ್ರೀಟ್ ಮಾಡಲಾಗಿತ್ತು. 40 ವರ್ಷಗಳಿಂದ ಈ ಭಾಗದ ಜನರು ಸರಿಯಾದ ರಸ್ತೆಯಿಲ್ಲದೆ ತೊಂದರೆಗೀಡಾಗಿದ್ದು ಶಾಸಕರಾದ ಅಶೋಕ್ ರೈ ಅವರ ಗಮನಕ್ಕೆ ತಂದಿದ್ದರು.
ಸರ್ವೆ ಮಾಡಿ ಸೂಕ್ತ ಕ್ರಮ
ಇಲ್ಲಿನ ವಿವಾದಿತ ಜಾಗವನ್ನು ಸರ್ವೆ ಮಾಡಿ ಅದು ಖಾಸಗಿ ಒಡೆತನದ ಜಾಗವೋ ಅಥವಾ ಸರಕಾರಿ ಜಾಗವೋ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಶಾಸಕರು ಸರ್ವೆ ಇಲಾಖೆಗೆ ಮತ್ತು ನಗರಸಭೆ ಅಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ. ಶಾಸಕರ ಸೂಚನೆಯಂತೆ ವಿವಾದಿತ ಜಾಗವನ್ನು ಸರ್ವೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಜಾಗ ಕಳೆದುಕೊಂಡರೆ ಸೂಕ್ತ ಪರಿಹಾರ
ಇದೇ ಸಂದರ್ಭದಲ್ಲಿ ರಸ್ತೆ ವೀಕ್ಷಣೆ ಮಾಡಿದ ಶಾಸಕರು ಈಗ ಇರುವ ರಸ್ತೆಯನ್ನು ಅಗಲೀಕರಣ ಮಾಡಿ ಅದಕ್ಕೆ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು. ರಸ್ತೆ ಮತ್ತು ಚರಂಡಿ ನಿರ್ಮಾಣದ ವೇಳೆ ಖಾಸಗಿ ಜಮೀನು ಬಳಕೆಯಾದರೆ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು. ಸರಕಾರಿ ಭೂಮಿಯಾದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ವೆ ಮಾಹಿತಿ ಆಧಾರದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಷ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಪುತ್ತೂರು ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಬೂತ್ ಅಧ್ಯಕ್ಷರಾದ ನವಾಝ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶ್ ಪಡ್ಡಾಯೂರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ನಗರಸಭಾ ಸದಸ್ಯರಾದ ದಿನೇಶ್ ಶೇವಿರೆ, ಕಾಂಗ್ರೆಸ್ ಮುಖಂಡರಾದ ವಿಕ್ಟರ್ ಪಾಯಸ್, ಅಶೋಕ್‌ಗ ಪಾಯಸ್, ಶರೂಣ್ ಸಿಕ್ವೆರಾ, ಪ್ರಶಾಂತ್ ಮುರ, ಜಾನಕಿ ಮುರ, ಕೃಷ್ಣಪ್ಪ ಕಲವಿದ, ಅಜಿತ್‌ಕುಮಾರ್ ಜೈನ್, ಪ್ರತೀಕ ಮೊದಲಾದವರು ಉಪಸ್ಥಿತರಿದ್ದರು.
ಪೆರಿಯತ್ತೋಡಿ ಆಶ್ರಯ ಕಾಲನಿಯ ಸುಮಾರು 200 ಕುಟುಂಬಗಳು ರಸ್ತೆಯಿಲ್ಲದೆ ಕಳೆದ 40 ವರ್ಷಗಳಿಂದ ತೊಂದರೆಗೀಡಾಗಿದ್ದಾರೆ. ರಸ್ತೆ ಪ್ರಮುಖ ಮೂಲಭೂತ ಸೌಕರ್ಯಗಳಲ್ಲಿ ಸೇರಿದ್ದಾಗಿದೆ. ಖಾಸಗಿ ವ್ಯಕ್ತಿಯೋರ್ವರ ಜಾಗದ ಬದಿ ರಸ್ತೆ ಹಾದು ಹೋಗುತ್ತಿರುವ ಕಾರಣ ಇಲ್ಲಿ ವಿವಾದ ಉಂಟಾಗಿದೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ರಸ್ತೆ ಹಾದು ಹೋಗುವ ಜಾಗವನ್ನು ಸರ್ವೆ ಮಾಡಲು ಇಲಾಖೆಗೆ ಸೂಚನೆಯನ್ನು ನೀಡಿದ್ದೇನೆ. ಖಾಸಗಿ ಜಾಗವಾದಲ್ಲಿ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ. ರಸ್ತೆ ಅಭಿವೃದ್ದಿ ಕೆಲಸ ನಿರಾತಂಕವಾಗಿ ನಡೆದೇ ನಡೆಯುತ್ತದೆ. ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗುತ್ತದೆ.
ಅಶೋಕ್ ರೈ ಶಾಸಕರು, ಪುತ್ತೂರು
ಹಲವು ವರ್ಷಗಳ ಬೇಡಿಕೆ ಈ ಬಾರಿ ಈಡೇರಿದೆ: ಮಹಮ್ಮದಾಲಿ
ಪೆರಿಯತ್ತೋಡಿ ಆಶ್ರಯ ಕಾಲನಿ ನಿವಾಸಿಗಳ ಸಮಸ್ಯೆಯನ್ನು ಇದುವರೆಗೂ ಯಾರೂ ಆಲಿಸಿಲ್ಲ, ಅಲ್ಲಿ ನೂರಾರು ಮನೆಗಳಿವೆ ಎಂದು ಗೊತ್ತಿದ್ದರೂ ಸಣ್ಣ ಪುಟ್ಟ ವಿಚಾರಗಳಿಗಾಗಿ ರಸ್ತೆ ಅಭಿವೃದ್ದಿ ಕಾರ್ಯವನ್ನು ಮಾಡಿಲ್ಲ. ಶಾಸಕರು ಇಲ್ಲಿಗೆ 36.5 ಲಕ್ಷ ಅನುದಾನವನ್ನು ಇಟ್ಟಿದ್ದಾರೆ. ವಿವಾದವನ್ನು ಇತ್ಯರ್ಥಪಡಿಸಿ ರಸ್ತೆ ಅಭಿವೃದ್ದಿಗೆ ಚಾಲನೆಯನ್ನು ನೀಡಿದ್ದಾರೆ. ಇಷ್ಟು ವರ್ಷದಲ್ಲಿ ಆಗದ ಕೆಲಸವನ್ನು ಶಾಸಕರು ಮಾಡಿದ್ದಾರೆ. ಜನ ಈ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂಬ ಪೂರ್ಣ ನಂಬಿಕೆ ಇದೆ.
ಎಚ್ ಮಹಮ್ಮದಾಲಿ, ನಗರ ಕಾಂಗ್ರೆಸ್ ಅಧ್ಯಕ್ಷರು, ಪುತ್ತೂರು