ನೆಲ್ಯಾಡಿ: ವಕ್ಫ್ ಆಸ್ತಿ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆ

0

ನೆಲ್ಯಾಡಿ: ವಕ್ಫ್ ಆಸ್ತಿ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಯು ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಫೆ.21ರಂದು ಮಧ್ಯಾಹ್ನ ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬಳಿ ನಡೆಯಿತು.

ಜಾಫರ್ ಸಾದಿಕ್ ಪೈಝಿ ಮಾತನಾಡಿ, ವಕ್ಫ್ ಮಸೂದೆಗೆ 1955 ಹಾಗೂ 2013ರಲ್ಲೂ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿ ವಕ್ಫ್ ಸಂಸ್ಥೆಯ ಸಂರಕ್ಷಣೆಗೆ ಪೂರಕವಾಗಿತ್ತು. ಈಗಿನ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿರುವ ತಿದ್ದುಪಡಿಯು ವಕ್ಫ್ ಸಂಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವ, ಆಸ್ತಿ ಕಬಳಿಸುವ ಹುನ್ನಾರದಿಂದ ಕೂಡಿದೆ. ಈ ತಿದ್ದುಪಡಿ ಮಸೂದೆ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ವಕ್ಫ್ ಆಸ್ತಿಯ ಒಡೆಯ ಅಲ್ಲಾಹು. ಅಲ್ಲಾಹುವಿನ ಹೆಸರಿನಲ್ಲಿ ಪೂರ್ವಜರು ದಾನವಾಗಿ ಕೊಟ್ಟಿರುವ ಭೂಮಿ. ಇದರಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು, ಕಬಳಿಸಲು ಮುಂದಾಗುವುದನ್ನು ನೋಡಿ ಭಾರತೀಯ ಮುಸ್ಲಿಮರು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಇದು ಮುಸ್ಲಿಮರ ಬದುಕಿನ, ಅಸ್ತಿತ್ವದ ವಿಚಾರವಾಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಅಂಬೇಡ್ಕರ್ ಸಂವಿಧಾನದ ಮೇಲೆ ಗೌರವವಿರುವ ಎಲ್ಲಾ ಭಾರತೀಯರು ಸಂವಿಧಾನ ವಿರೋಧಿ, ದೇಶ ವಿರೋಧಿ ಮಸೂದೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕೆಂದು ಹೇಳಿದರು.


ಅಮರ್ ಮೊಯಿನಿ ನೀರಕಟ್ಟೆ ಮಾತನಾಡಿ, ವಕ್ಫ್ ಮಸೂದೆ ತಿದ್ದುಪಡಿಗೊಳಿಸುವ ಮೂಲಕ ಮುಸ್ಲಿಮರಿಗೆ ಬಳುವಳಿಯಾಗಿ ಬಂದಿರುವ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ದ ಸಂವಿಧಾನ ಬದ್ಧ ಹೋರಾಟ ನಡೆಸಲಾಗುವುದು. ಪೂರ್ವಜರಿಂದ ದೊರೆತ ಆಸ್ತಿಯ ರಕ್ಷಣೆಗೆ ಯಾವುದೇ ರೀತಿಯ ಹೋರಾಟ ನಡೆಸಲು ಬದ್ಧರಾಗಿದ್ದೇವೆ ಎಂದರು.


ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಕೋಶಾಧಿಕಾರಿ, ನೋಟರಿ ಮತ್ತು ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರಕಾರ ತಿದ್ದುಪಡಿ ಮಾಡಲು ಮುಂದಾಗಿರುವ ವಕ್ಫ್ ಮಸೂದೆಯು ಮುಸ್ಲಿಮರಿಗೆ ಕರಾಳ ಮಸೂದೆಯಾಗಲಿದೆ. ಈ ಹಿಂದೆ ವಕ್ಫ್ ಮಸೂದೆ ಎರಡು ಬಾರಿ ತಿದ್ದುಪಡಿಯಾಗಿತ್ತು. ಆದರೆ ಈ ಬಾರಿ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರವು ವಕ್ಫ್ ಆಸ್ತಿಗೆ ಮಾರಕವಾಗುವ ರೀತಿಯಲ್ಲಿ ಜಾರಿಗೊಳಿಸುವ ಹುನ್ನಾರ ನಡೆಸುತ್ತಿದೆ. ಮುಸ್ಲಿಂ ಪೂರ್ವಜರಿಂದ ದಾನವಾಗಿ ದೊರೆತ ವಕ್ಫ್ ಆಸ್ತಿಯಲ್ಲಿ ಮದರಸ, ಮಸೀದಿ, ದರ್ಗಾ, ದಫನ ಭೂಮಿಗಳಿವೆ. ಯಾವುದೇ ಆಕ್ಷೇಪಣೆ, ಸಲಹೆ ಪಡೆಯದೇ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದೆ. ಈ ಮಸೂದೆ ಜಾರಿಗೊಳಿಸುವುದರ ವಿರುದ್ಧ ಈಗ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.


ನೆಲ್ಯಾಡಿ ಬದ್ರಿಯಾ ಜುಮಾಮಸೀದಿ ಅಧ್ಯಕ್ಷ ಎನ್.ಎಸ್.ಸುಲೈಮಾನ್, ಉಪಾಧ್ಯಕ್ಷ ಎಂ.ಹನೀಫ್ ಕರಾವಳಿ, ಕಾರ್ಯದರ್ಶಿ ಇಲ್ಯಾಸ್ ನೆಲ್ಯಾಡಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಪ್ರಮುಖರಾದ ರಫೀಕ್ ಸೀಗಲ್, ನಾಝೀಂ ಸಾಹೇಬ್ ನೆಲ್ಯಾಡಿ, ಇಸ್ಮಾಯಿಲ್ ಮೊರಂಕಳ, ಮಹಮ್ಮದ್ ಹನೀಫ್ ಸಿಟಿ, ಮೊರಂಕಳ ನೂರುಲ್ ಹುದಾ ಮದರಸ ಸಮಿತಿ, ಉಸ್ತಾನುಲ್ ಹುಳುಂ ಮದರಸ ಪಟ್ಟೆ, ಶರಿಹತ್ ಕಾಲೇಜು ಸಮಿತಿ, ಯಂಗ್‌ಮೆನ್ಸ್ ಸಮಿತಿ ಪದಾಧಿಕಾರಿಗಳು, ಜಮಾಅತ್‌ರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here