ತ್ರಿಶೂಲ್ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟ ಯಶಸ್ವಿ ಸಂಪನ್ನ

0

ಕೆಜಿಎಫ್ ಕೈಕಂಬ ಚಾಂಪಿಯನ್, ಇಚ್ಛಾ ಲಯನ್ಸ್ ಬಪ್ಪಳಿಗೆ ರನ್ನರ‍್ಸ್

ವರದಿ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಇದರ ಸಹಯೋಗದಲ್ಲಿ ಪುತ್ತೂರು ತಾಲೂಕಿನ ಎಂಟು ಬಲಿಷ್ಟ ತಂಡಗಳು ಜೊತೆಗೆ ಮುಕ್ತ ಎಂಟು ತಂಡಗಳ ನಿಗದಿತ ಓವರ್‌ಗಳ, ನಾಕೌಟ್ ಮಾದರಿಯ ಅಹರ್ನಿಶಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಫೆ.22 ರಂದು ಕಿಲ್ಲೆ ಮೈದಾನದಲ್ಲಿ ನಡೆದಿದ್ದು ಯಶಸ್ವಿ ಸಂಪನ್ನ ಕಂಡಿದೆ.


ದಿಗ್ಗಜರ ತಂಡವೆನಿಸಿದ ಬಲಿಷ್ಟ ಕೆಜಿಎಫ್ ಕೈಕಂಬ ಹಾಗೂ ಇಚ್ಛಾ ಲಯನ್ಸ್ ಬಪ್ಪಳಿಗೆ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಕೆಜಿಎಫ್ ಕೈಕಂಬ ತಂಡವು ಚಾಂಪಿಯನ್(ರೂ.50 ಸಾವಿರ ನಗದು ಹಾಗೂ ತ್ರಿಶೂಲ್ ಟ್ರೋಫಿ) ಆಗಿ ಮೂಡಿ ಬಂದಿದ್ದು, ಇಚ್ಛಾ ಲಯನ್ಸ್ ಬಪ್ಪಳಿಗೆ ತಂಡವು ರನ್ನರ‍್ಸ್ ಪ್ರಶಸ್ತಿ(ರೂ.25 ಸಾವಿರ ನಗದು ಹಾಗೂ ತ್ರಿಶೂಲ್ ಟ್ರೋಫಿ)ಯನ್ನು ಪಡೆದುಕೊಂಡಿತು. ಮೂರನೇ ಸ್ಥಾನಿಯಾಗಿ ಝಮಾನ್ ಬಾಯ್ಸ್ ಕಲ್ಲಡ್ಕ, ಚತುರ್ಥ ಸ್ಥಾನಿಯಾಗಿ ಎನ್‌ಎಫ್‌ಸಿ ಕುಂಬ್ರ ತಂಡಗಳು ಗುರುತಿಸಿಕೊಂಡವು. ಇಚ್ಛಾ ಲಯನ್ಸ್ ಬಪ್ಪಳಿಗೆ ತಂಡವು ಮೂರನೇ ಬಾರಿ ಫೈನಲ್ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್, ಎರಡು ಬಾರಿ ರನ್ನರ‍್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.


ಮುಕ್ತ ಪೂಲ್‌ನಲ್ಲಿದ್ದ ಕೆಜಿಎಫ್ ಕೈಕಂಬ ತಂಡವು ಝಮಾನ್ ಬಾಯ್ಸ್ ಕಲ್ಲಡ್ಕ ತಂಡವನ್ನು ಹಾಗೂ ಲೋಕಲ್ ಪೂಲ್‌ನಲ್ಲಿದ್ದ ಇಚ್ಛಾ ಲಯನ್ಸ್ ಬಪ್ಪಳಿಗೆ ತಂಡವು ಎನ್‌ಎಫ್‌ಸಿ ಕುಂಬ್ರ ತಂಡವನ್ನು ಮಣಿಸಿ ಫೈನಲಿಗೆ ಅರ್ಹತೆ ಗಿಟ್ಟಿಸಿತ್ತು. ಮುಕ್ತ ಪೂಲ್‌ನಲ್ಲಿ ಮಹಾಲಿಂಗೇಶ್ವರ ಕಾರ್ಕಳ, ಜೆಡಿ ಬಾಯ್ಸ್ ಬಂಟ್ವಾಳ, ಇಚ್ಛಾ ಲಯನ್ಸ್ ಬಪ್ಪಳಿಗೆ, ಎಸ್‌ಎಂಡಿ ಅರ್ಕ, ಬ್ರದರ್ಸ್ ಕೂರ್ನಡ್ಕ, ಲೋಕಲ್ ಪೂಲ್‌ನಲ್ಲಿ ಬಿಶಾರಾ ಕೋಲ್ಫೆ, ಸ್ವಾತಿ ಪಡೀಲು, ಪಟ್ಲ ಫ್ರೆಂಡ್ಸ್ ಕಲ್ಲೇಗ, ಟಿಪಿಸಿ ಮುಕ್ವೆ, ಎಸ್೨ಎನ್‌ಎನ್ ಉರ್ಲಾಂಡಿ, ಪರ್ಲ್ ಸಿಟಿ ಪುತ್ತೂರು ತಂಡಗಳು ನಾಕೌಟ್ ಹಂತದಲ್ಲಿಯೇ ನಿರ್ಗಮಿಸಿದ್ದವು.


ಉತ್ತಮ ಬ್ಯಾಟರ್ ಆಗಿ ಝಮಾನ್ ಬಾಯ್ಸ್ ಕಲ್ಲಡ್ಕ ತಂಡದ ರಶೀದ್, ಉತ್ತಮ ಬೌಲರ್ ಆಗಿ ಇಚ್ಛಾ ಲಯನ್ಸ್ ಬಪ್ಪಳಿಗೆಯ ಎಳೆಯ ಪ್ರತಿಭೆ ಫಾಝಿಲ್, ಫೈನಲ್ ಪಂದ್ಯದ ಪಂದ್ಯಶ್ರೇಷ್ಟರಾಗಿ ಹ್ಯಾಟ್ರಿಕ್ ವಿಕೆಟ್‌ನೊಂದಿಗೆ ಐದು ವಿಕೆಟ್ ಗೊಂಚಲು ಪಡೆದ ಕೆಜಿಎಫ್ ಕೈಕಂಬ ತಂಡದ ಪ್ರಸಾದ್, ಸರಣಿ ಪುರುಷೋತ್ತಮರಾಗಿ ಕೆಜಿಎಫ್ ಕೈಕಂಬ ತಂಡದ ಆಸಿಫ್ ಎನ್.ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.


ಸಮಾರೋಪ:
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತ್ರಿಶೂಲ್ ಫ್ರೆಂಡ್ಸ್‌ರವರು ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಅರ್ಥವಿರುತ್ತದೆ. ಕೇವಲ ಕ್ರೀಡೆ ಮಾತ್ರವಲ್ಲ ಸಾಮಾಜಿಕ ಚಟುವಟಿಕೆಗಳಿಗೂ ತ್ರಿಶೂಲ್ ಫ್ರೆಂಡ್ಸ್ ಸೈ ಎನಿಸಿಕೊಂಡಿದ್ದು ಸಮಾಜದಲ್ಲಿ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಕ್ಕೆ ಶಕ್ತಿ, ಗೌರವ ಕೊಡುವಂತಹ ತ್ರಿಶೂಲ್ ಫ್ರೆಂಡ್ಸ್‌ರವರ ಕಾರ್ಯಗಳಿಗೆ ಸಹಕಾರ ನೀಡೋಣ ಎಂದರು.

ದರ್ಬೆ ಆರ್‌ಇಬಿ ಎಂಕ್ಲೇವ್ ಜಂಕ್ಷನ್‌ನ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಯಾವುದೇ ಕಾರ್ಯಕ್ರಮವಿರಲಿ ಆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ತ್ರಿಶೂಲ್ ಫ್ರೆಂಡ್ಸ್‌ರವರು ಸಾಕ್ಷೀಭೂತರಾಗಿದ್ದಾರೆ ಎಂದರು. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು, ಯುವಸಮೂಹಕ್ಕೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಈ ಭಾಗದ ಕ್ರೀಡಾಪಟುಗಳಿಗೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ತ್ರಿಶೂಲ್ ಫ್ರೆಂಡ್ಸ್‌ರವರು ಪ್ರೋತ್ಸಾಹ ನೀಡುತ್ತಿದೆ ಎಂದರು.


ಶುಭ ಹಾರೈಕೆ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಬಿಜೆಪಿ ನಗರ ವಲಯ ಪ್ರಧಾನ ಕಾರ್ಯದರ್ಶಿ ಅನಿಲ್ ಗೌಡ ತೆಂಕಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸಂಚಾಲಕ ಎ.ವಿ ನಾರಾಯಣ, ಪಿಪಿಎಲ್ ಆಯೋಜಕ ಭಾನುಪ್ರಕಾಶ್, ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಸ್ಥಾಪಕ ರಝಾಕ್ ಬಿ.ಎಚ್ ಬಪ್ಪಳಿಗೆ, ಎಎಫ್‌ಸಿ ಫ್ರೆಂಡ್ಸ್ ಕ್ಲಬ್‌ನ ಶರತ್ ಕೇಪುಳು, ಶಿವಕೃಪಾ ಜನರಲ್ ಸ್ಟೋರ್ ಮಾಲಕ ನಾಗೇಶ್ ರಾವ್, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸಿಝ್ಲರ್ ಪುತ್ತೂರ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಯುವ ಉದ್ಯಮಿ ರಂಜಿತ್ ಬಂಗೇರ, ಪುತ್ತೂರು ನಗರ ಠಾಣೆಯ ಸ್ಕರಿಯರವರ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.


ಆಟಗಾರರ ಹಸ್ತಾಕ್ಷರ:
ಅಂತರ್ರಾಷ್ಟ್ರೀಯ ಕ್ರಿಕೆಟ್‌ನಂತೆ ಇಲ್ಲಿಯೂ ಆಡುವ ಇತ್ತಂಡಗಳ ಹನ್ನೊಂದು ಮಂದಿ ಆಟಗಾರರ ‘ಹಸ್ತಾಕ್ಷರ’ ಪಡೆಯುವುದು ಕಡ್ಡಾಯವಾಗಿತ್ತು. ಅದರಂತೆ ಪರ್ವಿಜ್ ಸಾಲ್ಮರರವರ ಮುಂದಾಳತ್ವದಲ್ಲಿ ಇತ್ತಂಡಗಳ ಆಟಗಾರರ ಹಸ್ತಾಕ್ಷರವನ್ನು ಪಡೆಯಲಾಗಿರುವುದು ಪಂದ್ಯಾಟದ ವಿಶೇಷತೆಯಾಗಿದೆ.


ಪಂದ್ಯಾಕೂಟದಲ್ಲಿ ವೀಕ್ಷಕ ವಿವರಣೆಗಾರರಾಗಿ ರಝಾಕ್ ಸಾಲ್ಮರ, ಗೋಪಿ ಮಂಗಳೂರು, ಸತೀಶ್ ಸಾಲಿಯಾನ್ ಮಂಗಳೂರು, ಅಂಪಾಯರ‍್ಸ್‌ಗಳಾಗಿ ಇಮ್ರಾನ್ ಇಮ್ಮಿ ಉಪ್ಪಿನಂಗಡಿ, ಸಿರಾಜ್ ಮೋನು ಕೂರ್ನಡ್ಕ, ಸಲೀಂ ಬಪ್ಪಳಿಗೆ, ಪುರುಷೋತ್ತಮ ಕುಂಡಡ್ಕ ಬೆಳ್ಳಾರೆ, ಸ್ಕೋರರ್ ಆಗಿ ಗೌತಮ್ ಬಲ್ಲಾಳ್, ಇರ್ಶಾದ್ ಬನ್ನೂರುರವರು ಸಹಕರಿಸಿದರು. ವಿಜೇತ್ ಸೇಜಿಗೆರೆ ಕಾರ್ಯಕ್ರಮ ನಿರೂಪಿಸಿದರು. ತ್ರಿಶೂಲ್ ಫ್ರೆಂಡ್ಸ್‌ನ ಧರೇಶ್ ಹೊಳ್ಳರವರ ಮುಂದಾಳತ್ವದಲ್ಲಿ ತ್ರಿಶೂಲ್ ಫ್ರೆಂಡ್ಸ್ ಸದಸ್ಯರು ಪಂದ್ಯಾಟವನ್ನು ಯಶಸ್ವಿಯಾಗಿಸುವಲ್ಲಿ ಸಹಕರಿಸಿದರು.


ಯುವಕರ ಸಮಾಜಸೇವೆಯ ಬೆನ್ನ ಹಿಂದೆ ನಾನಿದ್ದೇನೆ..
ಅಂತರರಾಷ್ಟ್ರೀಯ ಮಟ್ಟದಲ್ಲಿ ತ್ರಿಶೂಲ್ ಫ್ರೆಂಡ್ಸ್ ಬಳಗ ಕಿಲ್ಲೆ ಮೈದಾನವನ್ನು ಸಜ್ಜುಗೊಳಿಸಿರುವುದು ಪ್ರಶಂಸೆಗೆ ಒಳಗಾಗಿದೆ. ಕ್ರೀಡೆ ಎಂಬುದು ಬಾಂಧವ್ಯದ ಸಂಕೇತ. ಇಲ್ಲಿ ಎಲ್ಲಾ ಜಾತಿ-ಧರ್ಮದವರು ಭಾಗವಹಿಸಿ ಸೌಹಾರ್ದತೆಯನ್ನು ಮೆರೆಯುತ್ತಾರೆ. ತ್ರಿಶೂಲ್ ಫ್ರೆಂಡ್ಸ್ ಕ್ರೀಡೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ ಎನ್ನುವುದು ಸಂತೋಷದ ವಿಷಯವಾಗಿದ್ದು ನಿಮ್ಮ ಸಮಾಜಮುಖಿ ಕಾರ್ಯಗಳ ಬೆನ್ನ ಹಿಂದೆ ಅಶೋಕ್ ರೈ ಸದಾ ಇದ್ದಾರೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ನಿರಂಜನ್ ರೈ ಮಠಂತಬೆಟ್ಟುರವರಿಗೆ ‘ತುಳುನಾಡಿನ ಕಂಬಳದ ಸ್ವರ’ ಬಿರುದು..
ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಸಾಮಾಜಿಕ, ಧಾರ್ಮಿಕ, ಸಹಕಾರ, ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿರಂಜನ್ ರೈ ಮಠಂತಬೆಟ್ಟುರವರಿಗೆ “ತುಳುನಾಡಿನ ಕಂಬಳದ ಸ್ವರ” ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರಂಜನ್ ರೈ ಮಠಂತಬೆಟ್ಟುರವರು, ಇಂದು ತ್ರಿಶೂಲ್ ಫ್ರೆಂಡ್ಸ್‌ರವರು ನೀಡಿದ ಬಿರುದನ್ನು ಶ್ರೀ ಮಹಾಲಿಂಗೇಶ್ವರ ದೇವರ ಪಾದಕ್ಕೆ ಸಮರ್ಪಿಸುತ್ತಿದ್ದೇನೆ ಜೊತೆಗೆ ಕಂಬಳಕ್ಕೆ ಕೊಡುವ ಪ್ರೀತಿಯ ತುಡಿತವಾಗಿದೆ ಎಂದರು.

ಸನ್ಮಾನ..
ಅರಿಯಡ್ಕ ಪರಿಸರದ ಒಳಮೊಗ್ರು ಗ್ರಾಮದ ಹೆಸರಾಂತ ಕ್ರಿಕೆಟ್ ಪಟು, ಕೋವಿಡ್ ಸಂದರ್ಭದಲ್ಲಿ ಫಲಾನುಭವಿಗಳಿಗೆ ಕಿಟ್ ನೀಡುವ ಮೂಲಕ ನೆರವಾದ ಮುಕ್ತಾರ್ ಕುಂಬ್ರ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಝಾಕ್ ಬಿ.ಎಚ್ ಬಪ್ಪಳಿಗೆ, ಪಂದ್ಯಾಟವನ್ನು ಉತ್ತಮವಾಗಿ ಸಂಘಟಿಸಿದ ತ್ರಿಶೂಲ್ ಫ್ರೆಂಡ್ಸ್‌ನ ಧರೇಶ್ ಹೊಳ್ಳರವರುಗಳನ್ನು ಸನ್ಮಾನಿಸಲಾಯಿತು.

ಸಮಾಜ ಸೇವೆ..
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಆಗಿರುವ 90 ಮಂದಿ ರೋಗಿಗಳಿಗೆ ದಿನನಿತ್ಯ ಬಳಕೆಯ ವಸ್ತುಗಳನ್ನು ಹಾಗೂ ಅಪಘಾತದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಅರೆನಗ್ನ ಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ತ್ರಿಶೂಲ್ ಫ್ರೆಂಡ್ಸ್‌ರವರು ಪ್ರತಿ ತಿಂಗಳು ಹಸ್ತಾಂತರಿಸಲಿದ್ದು, ಇದನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿರವರು ಉದ್ಘಾಟಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here