ಪುತ್ತೂರು: ಮನುಷ್ಯನ ಜೀವನದಲ್ಲಿ ಕ್ರೀಡೆ ಅತ್ಯಂತ ಮುಖ್ಯವಾದದ್ದು ಆಗಿದೆ ಏಕೆಂದರೆ ಕ್ರೀಡೆ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯೊಂದಿಗೆ ಆರೋಗ್ಯವನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ಅಜ್ಜಿಕಲ್ಲು ಒಕ್ಕೂಟದ ಸದಸ್ಯರಿಗೆ ನಡೆದ ಕುಸಾಲ್ದ ಗೊಬ್ಬುಲು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ತಾಲೂಕು ಯೋಜನಾಧಿಕಾರಿ ಶಶಿಧರ್ ಎಸ್.ರವರು ಹೇಳಿದರು.
ಅವರು ಫೆ.23ರಂದು ಅಜ್ಜಿಕಲ್ಲು ಶಾಲಾ ವಠಾರದಲ್ಲಿ ನಡೆದ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯದ ಅಜ್ಜಿಕಲ್ಲು ಒಕ್ಕೂಟದ ಸದಸ್ಯರ ಕುಸಾಲ್ದ ಗೊಬ್ಬುಲು-2025 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಧರ್ಮಸ್ಥಳ ಸಂಘವು ಎಂದಿದೂ ಬಡವರ ಪರ ಇದ್ದು ಈ ಬಗ್ಗೆ ಯಾವುದೇ ಆತಂಕ ಬೇಡ. ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಕಾಲವೇ ಉತ್ತರ ನೀಡಲಿದೆ ಎಂದು ಶಶಿಧರ್ರವರು, ಅಜ್ಜಿಕಲ್ಲು ಒಕ್ಕೂಟವು ಒಂದು ಉತ್ತಮ ಒಕ್ಕೂಟವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷ ಸರೋಜ ಅಜ್ಜಿಕಲ್ಲುರವರು ಮಾತನಾಡಿ, ಧರ್ಮಸ್ಥಳ ಸಂಘವು ನಮಗೆ ಬದುಕು ಕಟ್ಟಿಕೊಟ್ಟಿದೆ. ಸಂಘದಿಂದ ನಾವೆಲ್ಲರೂ ಉತ್ತಮ ಜೀವನ ನಡೆಸುವಂತಾಗಿದೆ. ಎಂದಿಗೂ ನಾವು ಸಂಘಕ್ಕೆ ಚಿರಋಣಿಯಾಗಿರುತ್ತೇವೆ. ಈ ಕುಸಾಲ್ದ ಗೊಬ್ಬುಲು ಆಯೋಜನೆಯ ಹಿಂದೆ ಬಹಳಷ್ಟು ಜನರ ಶ್ರಮ ಇದ್ದು ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ಅತಿಥಿಗಳಾಗಿದ್ದ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಮಾತನಾಡಿ, ಒಂದು ಅತ್ಯುತ್ತಮ ಒಕ್ಕೂಟ ಇದ್ದರೆ ಅದು ಅಜ್ಜಿಕಲ್ಲು ಒಕ್ಕೂಟ ಎಂದು ಹೇಳಲು ಸಂತೋಷವಾಗುತ್ತಿದೆ. ಧರ್ಮಸ್ಥಳ ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರು ಯಾರೂ ಕೂಡ ಸಂಘದಲ್ಲಿ ಇದ್ದವರು ಅಲ್ಲ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ರೈ ಮೊಡಪ್ಪಾಡಿರವರು ಮಾತನಾಡಿ, ಕುಸಾಲ್ದ ಗೊಬ್ಬುಲು ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾದ ಕಾರ್ಯಕ್ರಮವಾಗಿದೆ ಎಂದರು. ಪತ್ರಕರ್ತ ಸಿಶೇ ಕಜೆಮಾರ್ ಮಾತನಾಡಿ, ನಮ್ಮಲ್ಲಿ ಹುದುಗಿರುವ ಶಕ್ತಿ,ಸಾಮರ್ಥ್ಯ, ಪ್ರತಿಭೆಯನ್ನು ತೋರಿಸಲು ಇಂತಹ ಕ್ರೀಡಾ ಚಟುವಟಿಕೆಗಳು ಬಹಳ ಅಗತ್ಯ ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ನಾಯ್ಕ ಮುಂಡೋವುಮೂಲೆರವರು ಕ್ರೀಡಾಕೂಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯ ಮೇಲ್ವಿಚಾರಕರಾದ ಸೋಹಾನ್ ಗೌಡ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್, ಮುಂಡೋವುಮೂಲೆ ಭಜನಾ ಮಂದಿರದ ಅರ್ಚಕ ಮೋಹನ್ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯ ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಒಕ್ಕೂಟದ ಸುಶಾಂತ್ ಅಜ್ಜಿಕಲ್ಲು ವಂದಿಸಿದರು. ಆನಂದ ಕಲೆಂಜಿಲಾ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಪ್ರಶಂಸನಾ ಪತ್ರದ ಪ್ರಾಯೋಜಕರಾಗಿ ಈಶ್ವರ ನಾಯ್ಕ ಅಜ್ಜಿಕಲ್ಲು ಸಹಕರಿಸಿದ್ದರು. ಒಕ್ಕೂಟದ ಮಾಜಿ ಅಧ್ಯಕ್ಷ ವಾಸು ನಾಯ್ಕ, ಒಕ್ಕೂಟದ ಉಪಾಧ್ಯಕ್ಷ ಮೋಹನ್ಚಂದ್ರ, ಕಾರ್ಯದರ್ಶಿ ಶಿಲ್ಪಾ ಮಹೇಶ್ ರೈ, ಜತೆ ಕಾರ್ಯದರ್ಶಿ ಉಷಾ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸಹಕರಿಸಿದ್ದರು. ಬೆಳಿಗ್ಗೆ ಕ್ರೀಡಾಕೂಟ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷೆ ಸರೋಜ ಅಜ್ಜಿಕಲ್ಲುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸೋಹಾನ್ ಗೌಡ, ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಹಾಗೂ ಅಜ್ಜಿಕಲ್ಲು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಅರ್ಥಪೂರ್ಣವಾಗಿ ನಡೆದ ಕ್ರೀಡಾಕೂಟ
ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆದ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಬಕೆಟ್ಗೆ ಬಾಲ್ ಹಾಕುವುದು, ತೆಂಗಿನ ಕಾಯಿಗೆ ಗುರಿ ಇಡುವುದು ಇತ್ಯಾದಿ ಕುಸಾಲ್ದ ಗೊಬ್ಬುಲು ನಡೆಯಿತು. ಗ್ರಾಮೀಣ ಭಾಗದ ಮಹಿಳೆಯರು, ಪುರುಷರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಯೋಜನೆಯ ವಲಯದಲ್ಲಿ ಗ್ರಾಮೀಣ ಭಾಗದಲ್ಲಿ ಅಜ್ಜಿಕಲ್ಲು ಒಕ್ಕೂಟದಿಂದ ನಡೆದ ಪ್ರಥಮ ಕ್ರೀಡಾಕೂಟ ಎಂಬ ಶ್ಲಾಘನೆಗೆ ಪಾತ್ರವಾಯಿತು.