ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಮತ್ತು ದೈವಜ್ಞರ ಸೂಚನೆಯಂತೆ ದೇವಳದ ಒಳಾಂಗಣದ ಗಣಪತಿ ಗುಡಿಯ ಬಳಿ ನೈರುತ್ಯ ಭಾಗದಲ್ಲಿ ಮತ್ತೆ ದೀಪ ಪ್ರಜ್ವಲನೆಗೆ ಫೆ.26ರ ಶಿವರಾತ್ರಿಯಂದು ಸಂಜೆ ಚಾಲನೆ ನೀಡಲಾಯಿತು.
ಅನಾದಿಕಾಲದಿಂದಲೂ ದೇವಳದ ಒಳಾಂಗಣದ ನೈರುತ್ಯ ಭಾಗದಲ್ಲಿ ರಕ್ತೇಶ್ವರಿದೇವಿಗೆ ಶಿಲೆ ಕಲ್ಲಿನ ದೀಪದಲ್ಲಿ ದೀಪ ಬೆಳಗಿಸಲಾಗುತ್ತಿತ್ತು. ಕಾಲಕ್ರಮೇಣ ರಕ್ತೇಶ್ವರಿ ದೇವಿಗೆ ಹೊರಾಂಗಣದಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಿ ಅಲ್ಲಿ ಆರಾಧಿಸಲಾಗುತ್ತಿದ್ದರೂ ನೈರುತ್ಯ ಭಾಗದಲ್ಲಿ ದೀಪ ಸದಾ ಬೆಳಗಬೇಕೆಂದು ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವಜ್ಞರು ದೀಪ ಬೆಳಗಿಸುವುದನ್ನು ಮತ್ತೆ ಪುನರಾಂಭಿಸುವಂತೆ ಸಲಹೆ ನೀಡಿದ್ದರು. ಅದರಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಶಿವರಾತ್ರಿಯ ದಿನದಂದು ದೀಪ ಪ್ರಜ್ವಲನೆಯನ್ನು ಆರಂಭಿಸುವ ಕುರಿತು ಶ್ರೀದೇವರಲ್ಲಿ ಪ್ರಾರ್ಥನೆ ಮಾಡಿದಂತೆ ಶಿವರಾತ್ರಿಯ ದಿನ ಸಂಜೆ ಕಲ್ಲಿನ ಶಿಲೆಯಲ್ಲೇ ದೀಪ ಪ್ರಜ್ವಲನೆ ಮಾಡಲಾಯಿತು. ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ದೀಪ ಪ್ರಜ್ವಲಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೇಡೆಕರ್, ದಿನೇಶ್ ಪಿ.ವಿ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಾಸ್ತು ಇಂಜಿನಿಯರ್ ಆಗಮಪ್ರವೀಣರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಅರ್ಚಕ ಉದಯ ಭಟ್, ಹರೀಶ್ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪೂರ್ವಿಕವಾಗಿ ಮಾಡಿರುವ ಸಂಕಲ್ಪ ವೈವಿಧ್ಯವಾಗಿ ಮುಂದುವರಿಯಲು ದೀವಿಯ ಕೋಪಕ್ಕೆ ಕಾರಣವಾಗಿರುವುದು ಪ್ರಶ್ನೆಯ ಮೂಲಕ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಶಿವರಾತ್ರಿಯ ದಿನ ದೇವಳದ ನೈರುತ್ಯ ಭಾಗದಲ್ಲಿ ದೇವಿಗೆ ದೀಪವನ್ನು ಇರಿಸುವ ಮೂಲಕ ದೇವಿಯ ಅನುಗ್ರಹ, ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ನಾವು ಮಾಡಿರುವ ಸಂಕಲ್ಪಗಳನ್ನು ಪೂರ್ತಿಗೊಳಿಸಲು ಕರ್ಮಯೋಗ್ಯತೆಯನ್ನು ಒದಗಿಸಿಕೊಡಬೇಕೆಂದು ಪ್ರಾರ್ಥಿಸುವ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ದೀಪ ಪ್ರಜ್ವಲನೆ ಮಾಡಿದರು.