*ಏಕಕಾಲದಲ್ಲಿ ಮೂರು ಕಡೆ ಭಜನೆ, ನೃತ್ಯಭಜನೆ
*ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ
*ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತ ಸಾಗರ
*ಸಾಮೂಹಿಕ ಯೋಗ ಶಿವ ನಮಸ್ಕಾರ ವಿಶೇಷ
ಪುತ್ತೂರು: ನಾಡಿನ ಕಾರಣಿಕ ಶಿವಕ್ಷೇತ್ರಗಳಲ್ಲಿ ಒಂದಾದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇಗುಲದಲ್ಲಿ ಫೆ.26ರಂದು ಮಹಾಶಿವರಾತ್ರಿ ಉತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ದೇವಳದಲ್ಲಿ ಜಾಗರಣೆಯೂ ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ಮಹಾರುದ್ರಯಾಗ, ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು. ದೇವಳದ ಒಳಗಾಂಣ, ಹೊರಾಂಗಣ, ಗದ್ದೆಯಲ್ಲಿ ಭಜನೆ, ನೃತ್ಯ ಭಜನೆ, ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ ನಡೆಯಿತು.

ಬೆಳಗ್ಗಿನಿಂದಲೇ ದೇವಳದಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಬಹುತೇಕ ಮಂದಿ ಭಕ್ತರು ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಪ್ರದಕ್ಷಿಣೆ ಬರುತ್ತಿದ್ದರು. ಪ್ರಾತಃ ಕಾಲ ಗಣಪತಿ ಹೋಮದ ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತ್ತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಭಜನಾ ಕಾರ್ಯಕ್ರಮ ಮತ್ತು ನಟರಾಜ ವೇದಿಕೆಯಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಮಧ್ಯಾಹ್ನ ಹವನ ಅಭಿಷೇಕ ಪೂಜಾಧಿಗಳು ಜರಗಿ ರಾತ್ರಿಯ ವೇಳೆ ಶ್ರೀ ದೇವರ ಬಲಿ ಉತ್ಸವ ಹೊರಟು ಉಡುಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು. ಇದೆ ಸಂದರ್ಭ ಅಷ್ಟಾವಧಾನ ಸೇವೆ, ಪಲ್ಲಕ್ಕಿ ಉತ್ಸವ, ಸ್ಯಾಕ್ಸೋಪೋನ್ ವಾದನ, ಬ್ಯಾಂಡ್, ಭಜನೆ ಸುತ್ತು ನಡೆದು ಚಂದ್ರಮಂಡಲ ರಥೋತ್ಸವ ನಡೆಯಿತು. ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ಬಳಿಕ ದೇವರಿಗೆ ಏಕಾದಶ ರುದ್ರಾಭಿಷೇಕ, ರಾತ್ರಿ ಪೂಜೆ, ದೇವರ ಭೂತಬಲಿ ಉತ್ಸವ ತಡರಾತ್ರಿಯಲ್ಲಿ ಮಹಾಮಹಿಮಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಉತ್ಸವ ಬಲಿ ನಡೆಯಿತು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಹಿರಿಯರಾದ ಕಿಟ್ಟಣ್ಣ ಗೌಡ, ವಾಸ್ತು ಇಂಜಿನಿಯರ್ ಆಗಮ ಪ್ರವೀಣರಾಗಿರುವ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ತುಳಸಿ ಕಟ್ಟೆಯ ಬಳಿ ಬಿಲ್ವಾರ್ಚಣೆ ಸೇವೆ:
ದೇವಳದ ತುಳಸಿ ಕಟ್ಟೆ ಬಳಿ ಶ್ರೀ ದೇವರ ಬೆಳ್ಳಿಯ ಮುಖ ಕವಚವನ್ನಿಟ್ಟು ಭಕ್ತರಿಗೆ ಏಕ ಬಿಲ್ವಾ ಶಿವಾರ್ಪಣಂ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಶ್ರೀ ದೇವರಿಗೆ ಬಿಲ್ಚಾರ್ಚಣೆ ಸಂಕಲ್ಪ ಕೈಗೊಂಡರು. ಅರ್ಚಕರು ಸಂಕಲ್ಪ ನೆರವೇರಿಸಿಕೊಟ್ಟರು.

ರುದ್ರ ಯಾಗ,ಬೆಳಿಗ್ಗೆ ದೇವಳದ ಗೋಪುರದಲ್ಲಿ ರುದ್ರಹೋಮ:
ಬೆಳಿಗ್ಗೆ ದೇವಳದ ಗೋಪುರದಲ್ಲಿ ವೇ ಮೂ ಜಯರಾಮ ಜೋಯಿಷ ಅವರ ನೇತೃತ್ವದಲ್ಲಿ ರುದ್ರ ಹೋಮಾದಿ ಸೇವೆ ನಡೆಯಿತು. ಮಧ್ಯಾಹ್ನ ಗಂಟೆ 11ಕ್ಕೆ ರುದ್ರ ಹೋಮದ ಪೂರ್ಣಾಹುತಿ ನಡೆಯಿತು. ಪೂರ್ಣಾಹುತಿ ಸಂದರ್ಭ ರುದ್ರ ಹೋಮದ ಕಲಶದಿಂದ ಶ್ರೀ ದೇವರಿಗೆ ಅಭಿಷೇಕ ನಡೆಯಿತು. ಬಳಿಕ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು.

ಮೂರು ಕಡೆ ಭಜನೆ, ನೃತ್ಯ ಭಜನೆ:
ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ನ ನೇತೃತ್ವದಲ್ಲಿ ದೇವಳದ ಸಹಯೋಗದೊಂದಿಗೆ ಬೆಳಿಗ್ಗೆ ದೇವಳ ರಾಜಗೋಪುರದ ಮುಂಭಾಗ ಭಜನಾ ಕಾರ್ಯಕ್ರಮ ನಡೆಯಿತು. ಈ ನಡುವೆ ದೇವಳದ ಒಳಗಾಂಗಣದಲ್ಲಿ ಗೋಪುರದಲ್ಲೂ ಭಜನೆ ಕಾರ್ಯಕ್ರಮ ನಡಯಿತು. ಸಂಜೆ ದೇವಳದ ಹೋರಾಂಗಣದಲ್ಲಿ ನೃತ್ಯ ಭಜನೆ ಕಾರ್ಯಕ್ರಮ ನಡೆಯಿತು. ಒಟ್ಟು ಎಲ್ಲೆಲ್ಲೂ ಭಜನೆಯ ಸದ್ದು ಕೇಳಿಸುತ್ತಿತ್ತು. ಬೆಳಗ್ಗಿನ ತನಕ ಜಾಗರಣ ಭಜನಾ ಕಾರ್ಯಕ್ರಮ ನಡೆಯಿತು.

ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ:
ಅಖಿಲ ಕರ್ನಾಟಕ ಶಾಸ್ತ್ರೀಯ ನೃತ್ಯ ಒಕ್ಕೂಟದ ನೇತೃತ್ವದಲ್ಲಿ ದೇವಳದ ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ವಿವಿಧ ಸಂಗೀತ ಕಲಾ ಶಾಲೆ ಮತ್ತು ಭರತನಾಟ್ಯ ಕಲಾ ಶಾಲೆಗಳ ವಿದ್ಯಾರ್ಥಿಗಳು ತಮ್ಮ ನೃತ್ಯ ಪ್ರದರ್ಶನವನ್ನು ನೀಡಿದರು.

ಸಾಮೂಹಿಕ ಯೋಗ ಶಿವ ನಮಸ್ಕಾರ:
ದೇವಳದ ಅನ್ನಪೂರ್ಣೇಶ್ವರಿ ಹಾಲ್ನಲ್ಲಿ ಎಸ್ಪಿವೈಎಸ್ಎಸ್ ಯೋಗ ಸಮಿತಿಯ ಸಹಕಾರದಲ್ಲಿ ಸಂಜೆಯಿಂದ ಬೆಳಗ್ಗಿನ ತನಕ ಸಾಮೂಹಿಕ ಯೋಗ ಶಿವ ನಮಸ್ಕಾರ ನಡೆಯಿತು.

ಬೆಳಗ್ಗಿನಿಂದಲೇ ದೇವಳದಲ್ಲಿ ಭಕ್ತಸಾಗರ
ಮಹಾಶಿವರಾತ್ರಿಯ ಅಂಗವಾಗಿ ದೇವಳದಲ್ಲಿ ಬೆಳಗ್ಗಿನಿಂದಲೇ ಭಕ್ತ ಸಾಗರವೇ ತುಂಬಿತ್ತು. ಭಕ್ತರಿಗೆ ಸರದಿ ಸಾಲಿನಲ್ಲಿ ಹೋಗುವ ಮತ್ತು ಎಲ್ಲಿಯೂ ಸಮಸ್ಯೆ ಆಗದಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದ ಸಮಿತಿ ಸದಸ್ಯರು ಉತ್ತಮ ಜೋಡಣೆ ಮಾಡಿದ್ದರು. ದೇವಳದ ಒಳಾಂಗಣದಲ್ಲಿ ಮತ್ತು ಹೋರಾಂಗಣದಲ್ಲಿ ನೂರಕ್ಕೂ ಮಿಕ್ಕಿ ಪ್ರದಕ್ಷಿಣೆ ಬರುವ ಭಕ್ತರು ಬೆಳಗ್ಗಿನ ಜಾವದಿಂದಲೇ ತುಂಬಿದ್ದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಭಜನೆ, ನೃತ್ಯ ಸಹಿತ ವಿವಿಧ ಸೇವಾ ಕಾರ್ಯಕ್ರಮ ನೀಡಿದವರಿಗೆ ಪ್ರತ್ಯೇಕ ಉಪಹಾರದ ವ್ಯವಸ್ಥೆ ಮತ್ತು ದೇವಳದಲ್ಲಿ ಶಲ್ಯ ತೊಡಿಸಿ ಪ್ರಸಾದ ವಿತರಿಸಲಾಯಿತು.
