ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರೂ ಆದ ಗಣರಾಜ ಕುಂಬ್ಳೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಡಾ.ಶ್ರೀಪತಿ ಕಲ್ಲೂರಾಯ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ದ್ವಾರಕ, ಕಾರ್ಯದರ್ಶಿಯಾಗಿ ಚೇತನ್ ಮೊಗ್ರಾಲ್, ಕೋಶಾಧಿಕಾರಿಯಾಗಿ ಅವಿನಾಶ ಕೊಡೆಂಕಿರಿ, ಜತೆ ಕಾರ್ಯದರ್ಶಿಯಾಗಿ ಸ್ವಪ್ನ ಉದಯ ಕುಮಾರ, ಮಾಧ್ಯಮ ಪ್ರಮುಖ್ ಆಗಿ ನವೀನ ಕೃಷ್ಣ ಉಪ್ಪಿನಂಗಡಿ, ಸಮಿತಿ ಸದಸ್ಯರಾಗಿ ಕುಮಾರ ಪೆರ್ನಾಜೆ, ಬಾಬು ನಾಯ್ಕ ದೇವಸ್ಯ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಗಣರಾಜ್ ಕುಂಬ್ಳೆ ಅವರು ಸುಮಾರು 37 ವರ್ಷಗಳ ಕಾಲ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಎ.30,2021ರಲ್ಲಿ ನಿವೃತ್ತಿಯಾಗಿದ್ದರು. ಪ್ರಸ್ತುತ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಡಬ ತಾಲೂಕು 3ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೂ ಆಗಿದ್ದ ಇವರು ಲೇಖಕರು, ಕವಿಗಳು, ಯಕ್ಷಗಾನ ಅರ್ಥಧಾರಿಗಳು, ಯಕ್ಷಗಾನ ವೇಷಧಾರಿಗಳು, ಆಕಾಶವಾಣಿಯ ಯಕ್ಷಗಾನ ಕಲಾವಿದರು, ಚಿಂತನ ಹಾಗೂ ಭಾಷಣಕಾರರು ಆಗಿದ್ದಾರೆ. ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ವಿವೇಕ ಜಾಗೃತಿ ಪ್ರಶಸ್ತಿ, ಮಲ್ಪೆ ಶಂಕರನಾರಾಯಣ ಸಾಮಗ ಸ್ಮಾರಕ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್ಟ ಶತಮಾನೋತ್ಸವ ಪ್ರಶಸ್ತಿ ಲಭಿಸಿದೆ. ಇವರು ಹಿರೇಬಂಡಾಡಿ ಗ್ರಾಮದ ಬೊಲುಂಬುಡದಲ್ಲಿ ವಾಸವಾಗಿದ್ದಾರೆ.