ಸುಳ್ಯದಲ್ಲಿ ಮಾಸ್ ಶಾಖೆಯ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನೆ

0

ಪುತ್ತೂರು: ಮಾಸ್ ಲಿಮಿಟೆಡ್ ಸಂಸ್ಥೆಯ ಸುಳ್ಯ ಶಾಖೆಯ ಅಡಿಕೆ ಸಂಸ್ಕರಣಾ ಘಟಕವು ಫೆ. 28 ರಂದು ಸುಳ್ಯದಲ್ಲಿ ಉದ್ಘಾಟನೆಗೊಂಡಿತು.ಮಾಸ್ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು, ದೀಪ ಬೆಳಗಿಸಿ, ನೆರವೇರಿಸಿ ಮಾತನಾಡಿ, ಸುಳ್ಯದಲ್ಲಿ ಮಾಸ್ ಸಂಸ್ಥೆಯ ವತಿಯಿಂದ ಅಡಿಕೆ ಸಂಸ್ಕೃರಣ ಘಟಕವನ್ನು ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈಯವರು ಪ್ರಾರಂಭಿಸಿದ್ದಾರೆ. ಇದರಿಂದ ಈ ಭಾಗದ ಅಡಿಕೆಯು ಸಂಸ್ಕರಣೆಯಾಗಿ ನೇರವಾಗಿ ಗುಜರಾತ್ ತಲುಪಲಿದೆ, ಇದರಿಂದ ಒಂದಷ್ಟು ಜನರಿಗೆ ಉದ್ಯೋಗ ಲಭಿಸಿದೆ. ಇದು ಸುಳ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದರಲ್ಲದೇ, ಸುಳ್ಯದಲ್ಲಿ ಕೈಗಾರಿಕಾ ಕೇಂದ್ರಗಳನ್ನು ಪ್ರಾರಂಭ ಮಾಡಬೇಕೆಂಬ ಕನಸು ಇದೆ, ಇದಕ್ಕೆ ಪೂರಕವಾದ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ ಅವರು ಅಡಿಕೆ ಕೃಷಿಗೆ ಹಳದಿ ರೋಗ, ಎಲೆಚುಕ್ಕಿ ರೋಗಗಳು ಬಂದ ಪರಿಣಾಮ ಅಡಿಕೆ ಕೃಷಿಕನಿಗೆ ಭಾರೀ ತೊಂದರೆ ಉಂಟಾಗಿದೆ. ಇದನ್ನು ಸಂಪೂರ್ಣ ನಿವಾರಿಸಲು ವೈಜ್ಞಾನಿಕ ಪ್ರಯತ್ನ ಆಗಬೇಕಾಗಿದೆ ಎಂದು ಹೇಳಿದರು.

ಸೀತಾರಾಮ ರೈ ಸಹಕಾರ ರಂಗದ ಅನುಭವಿ- ಶಶಿಕುಮಾರ್ ರೈ ಬಾಲ್ಯೊಟ್ಟು
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಣೂರು ಸೀತಾರಾಮ ರೈಯವರು ಮಾಸ್ ಸಂಸ್ಥೆಯ ಅಧ್ಯಕ್ಷರಾಗಿ 10 ತಿಂಗಳಲ್ಲಿ ಸಂಸ್ಥೆಯನ್ನು ಭದ್ರವಾಗಿ ಬೆಳೆಸುತ್ತಿದ್ದಾರೆ, ಸೀತಾರಾಮ ರೈಯವರು ಮಾಸ್‌ನ ಅಧ್ಯಕ್ಷರಾದ ಬಳಿಕ 10 ತಿಂಗಳಲ್ಲಿ 19 ಮಂದಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಸಹಕಾರ ಕ್ಷೇತ್ರದ ಅಪಾರ ಅನುಭವವನ್ನು ಹೊಂದಿರುವ ಸೀತಾರಾಮ ರೈಯವರು ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಮೂಲಕ ಅಡಿಕೆ ಕೃಷಿಕರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದ್ದಾರೆ ಎಂದು ಹೇಳಿ, ಸಂಸ್ಥೆಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಸೀತಾರಾಮ ರೈ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ-ಎಸ್. ಎನ್. ಮನ್ಮಥ
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್. ಮನ್ಮಥರವರು ಮಾತನಾಡಿ, ಮಾಸ್ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸೀತಾರಾಮ ರೈಯವರು ಭಾರೀ ಪ್ರಯತ್ನದಿಂದ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ ಎಂದರು.

ಸಂತಸದ ವಿಚಾರವಾಗಿದೆ- ಜಯಪ್ರಕಾಶ್ ರೈ
ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈಯವರು ಮಾತನಾಡಿ, ನನ್ನ ಸಹೋದರ ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಅನುಭವಿಯಾಗಿದ್ದು, ಇದೀಗ ಮಾಸ್ ಅಡಿಕೆ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಪ್ರಗತಿಯತ್ತ ಸಾಗಲು ಅನೇಕ ಶಾಖೆಗಳನ್ನು ತೆರೆಯುವುದು, ಜೊತೆಗೆ ಅಡಿಕೆ ಸಂಸ್ಕರಣಾ ಘಟಕವನ್ನು ಪ್ರಾರಂಭ ಮಾಡಿರುವುದು ತುಂಬಾ ಸಂತಸದ ವಿಚಾರವಾಗಿದೆ. ರೈತರು ಅಡಿಕೆಗೆ ಬಂಪರ್ ಬೆಲೆ ಬಂದಾಗ ರಬ್ಬರ್ ಮರ ಕಡಿದು ಅಡಿಕೆ ಸಸಿ ನಾಟಿ ಮಾಡುತ್ತಾರೆ, ರಬ್ಬರ್ ಗೆ ಬಂಪರ್ ಬೆಲೆ ಬಂದಾಗ ಅಡಿಕೆ ಕೃಷಿಯನ್ನು ನಾಶ ಮಾಡುತ್ತಾರೆ. ಇಂಥ ವರ್ತನೆಯನ್ನು ರೈತರು ಬಿಡಬೇಕು ಎಂದು ಹೇಳಿದರು.

ಮಾಸ್ ಸಂಸ್ಥೆಯ ವಹಿವಾಟು ಶೇಕಡ 40ರಷ್ಟು ವೃದ್ಧಿ- ಸವಣೂರು ಸೀತಾರಾಮ ರೈ
ಮಾಸ್ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ರತ್ನ ದಿ. ವಾರಣಾಶಿ ಸುಬ್ರಾಯ ಭಟ್‌ರವರ ಪ್ರಯತ್ನ ಹಾಗೂ ಸಹಕಾರ ರತ್ನ ಎಂ.ಎನ್. ರಾಜೇಂದ್ರಕುಮಾರ್ ಇವರ ಪ್ರೋತ್ಸಾಹದೊಂದಿಗೆ ಪ್ರಾರಂಭಗೊಂಡ ಮಾಸ್ ಸಂಸ್ಥೆ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟಿದೆ. ಹತ್ತು ತಿಂಗಳ ಹಿಂದೆ ನಾನು ಸಂಸ್ಥೆಯ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಹಿವಾಟನ್ನು ವೃದ್ಧಿಗೊಳಿಸುವ ಗುರಿ ಹೊಂದುವುದರೊಂದಿಗೆ . ಈಗಾಗಲೇ ಜುಲೈ 2024ರಲ್ಲಿ ಕಾವು ಶಾಖೆಯನ್ನು ಹಾಗೂ ನವೆಂಬರ್ 2024ರಲ್ಲಿ ನಿಂತಿಕಲ್ಲು ಶಾಖೆಯನ್ನು ತೆರೆಯಲಾಗಿದೆ. ಇದೀಗ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಕಡ 40ರಷ್ಟು ವೃದ್ಧಿಯಾಗಿದೆ ಎಂದು ಹೇಳಿದ ಅವರು ಮುಂದಿನ ತಿಂಗಳು ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಮಾಸ್ ಅಡಿಕೆ ಖರೀದಿಯ ಶಾಖೆಯನ್ನು ತೆರೆಯಲಾಗುವುದು ಎಂದು ಸೀತಾರಾಮ ರೈ ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಮಾಸ್ ಸಂಸ್ಥೆಯ ನಿರ್ದೇಶಕರಾದ ಸುಧಾ ಎಸ್ ರೈ ಪುಣ್ಚಪ್ಪಾಡಿ, ಶ್ರೀರಾಮ ಪಾಟಾಜೆ ಹಾಗೂ ಪುಷ್ಪರಾಜ್ ಅಡ್ಯಂತಾಯ ಉಪಸ್ಥಿತರಿದ್ದರು.

ಚಂದ್ರಶೇಖರ್ ಪಿಯವರಿಗೆ ಗೌರವಾರ್ಪಣೆ
ಸಭಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ರವರನ್ನು ಶಾಸಕಿ ಭಾಗೀರಥಿ ಮುರುಳ್ಯರವರು ಗೌರವಿಸಿದರು.

ವಿದ್ಯಾರ್ಥಿನಿ ಈಶಾನ್ಯ ಪ್ರಾರ್ಥನೆಗೈದರು. ಮಾಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ ಮಹಾಬಲೇಶ್ವರ ಭಟ್ ವಂದಿಸಿದರು. ಚೀಫ್ ಮಾರ್ಕೆಟಿಂಗ್ ಆಫೀಸರ್ ಲೋಕೇಶ್ ಕೆ.ಎಂ., ಸುಳ್ಯ ಬ್ರಾಂಚ್ ಮೇನೇಜರ್ ಧನಂಜಯ ಎಂ.ಎನ್, ಮಾಸ್ ಸಂಸ್ಥೆಯ ಸವಣೂರು ಶಾಖಾ ಮೆನೇಜರ್ ಯತೀಶ್, ಉಪ್ಪಿನಂಗಡಿ ಶಾಖಾ ಮೆನೇಜರ್ ಚೇತನ್‌ ಸಹಕರಿಸಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಕಾವು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಕೇಶವ ಮೂರ್ತಿ, ಮುರುಳ್ಯ -ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ್ ನಡುಬೈಲು, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಿದಾನಂದ ರೈ, ಉಬರಡ್ಕ ಸಿ.ಎ, ಬ್ಯಾಂಕ್ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಜಯಪ್ರಕಾಶ್ ಸಹಿತ ಸಹಕಾರ ಕ್ಷೇತ್ರದ ಅನೇಕ ಪ್ರಮುಖರುಗಳು ಉಪಸ್ಥಿತರಿದ್ದರು.

ಮಾಸ್ ಸಂಸ್ಥೆಯಿಂದ ಅಡಿಕೆ ಕೃಷಿಕರ ಹಿತರಕ್ಷಣೆ
ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಮಾಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟಿದೆ. ಹತ್ತು ತಿಂಗಳ ಹಿಂದೆ ನಾನು ಸಂಸ್ಥೆಯ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಹಿವಾಟನ್ನು ವೃದ್ಧಿಗೊಳಿಸುವ ಗುರಿಯನ್ನು ಹೊಂದಲಾಗಿದೆ

LEAVE A REPLY

Please enter your comment!
Please enter your name here