ಶೇಕಮಲೆ- ದೇರ್ಲ ರಸ್ತೆ ಅಭಿವೃದ್ದಿಗೆ 2 ಕೋಟಿ ಅನುದಾನ- ಗುದ್ದಲಿಪೂಜೆ

0

ಚುನಾವಣೆ ಸಂದರ್ಭದಲ್ಲಿ ನಿಮ್ಮ ಬಳಿ ಏನೆಲ್ಲಾ ಹೇಳಿದ್ದೇನೋ ಅದೆಲ್ಲವೂ ನೆನಪಿದೆ: ಶಾಸಕ ಅಶೋಕ್ ರೈ

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವೋಟು ಕೇಳಲು ಬರುವಾಗ ನಿಮ್ಮ ಬಳಿ ಏನು ಹೇಳಿದ್ದೇನೋ ಅದೆಲ್ಲವೂ ನನಗೆ ನೆನಪಿದೆ. ಅವುಗಳನ್ನು ಒಂದೊಂದಾಗಿ ಈಡೇರಿಸುವೆ, ಶೇಕಮಲೆ ದೇರ್ಲ ರಸ್ತೆಗೆ ಅನುದಾನ ನೀಡುವುದಾಗಿ ಹೇಳಿದ್ದೆ 2 ಕೋಟಿ ನೀಡಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಶೇಕಮಲೆ- ದೇರ್ಲ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಈ ರಸ್ತೆಯನ್ನು ಅಭಿವೃದ್ದಿ ಮಾಡಬೇಕೆಂದು ಜನ ಬೇಡಿಕೆ ಇಟ್ಟಿದ್ದರು. ಕೌಡಿಚ್ಚಾರ್- ಕಣಿಯಾರ್ ರಸ್ತೆಗೆ 5 ಕೋಟಿ ಅನುದಾನವನ್ನು ನೀಡಿದ್ದು, ಈ ರಸ್ತೆಗೆ ಎರಡು ಕೋಟಿ ಇಡುವ ಮೂಲಕ ಕೊಟ್ಟ ಮಾತನ್ನು ಪಾಲಿಸಿದ್ದೇನೆ. ಮುಂದೆಯೂ ಕೆಯ್ಯೂರು ಗ್ರಾಮಕ್ಕೆ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಶಾಸಕರು ಹೇಳಿದರು.

ಜನ ಮರೆಯಬಾರದು
ಇಷ್ಟು ವರ್ಷ ಈ ರಸ್ತೆಯನ್ನು ಯಾರೂ ಅಭಿವೃದ್ದಿ ಮಾಡಿಲ್ಲ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವಧಿಯಲ್ಲಿ ಸ್ವಲ್ಪ ರಸ್ತೆ ಡಾಮರೀಕರಣವಾಗಿದೆ, ಅದನ್ನು ಬಿಟ್ಟರೆ ಯಾವೊಬ್ಬ ಜನಪ್ರತಿನಿಧಿಯೂ ಈ ರಸ್ತೆಯನ್ನು ಕಣ್ಣೆತ್ತಿ ನೋಡಿಲ್ಲ. ಸರಕಾರದ ಐದು ಗ್ಯಾರಂಟಿಗಳು ಜನರ ಮನೆ ಬಾಗಿಲಿಗೆ ಬರುತ್ತಿದೆ. ಎಲ್ಲರೂ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಆದರೆ ಜನತೆ ಇದನ್ನು ಮರೆಯಬಾರದು. ರಾಜ್ಯದಲ್ಲಿ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ, ನೊಂದವರ ಪರವಾಗಿದೆ ಎಂದು ಶಾಸಕರು ಹೇಳಿದರು.

ಗ್ರಾಮಸ್ಥರ ನಡೆದುಹೋಗುವ ರಸ್ತೆಗೂ ಕಾಂಕ್ರೀಟ್
ಗ್ರಾಮದ ಕಟ್ಟಕಡೇಯ ವ್ಯಕ್ತಿಗಳು ನಡೆದುಕೊಂಡು ಹೋಗುವವರು, ಅವರಲ್ಲಿ ವಾಹನ ಇಲ್ಲದೇ ಇದ್ದರೂ ಅವರು ತೆರಳುವ ರಸ್ತೆಯೂ ಕಾಂಕ್ರೀಟ್ ಆಗಬೇಕೆಂಬುದು ನನ್ನ ಕನಸು ಅದನ್ನು ಕೂಡಾ ಹಂತ ಹಂತವಾಗಿ ನನಸು ಮಾಡಲಿದ್ದೇನೆ. ಸರಕಾರದ ಸೌಲಭ್ಯ ಕೇವಲ ಇರುವವನ ಪಾಲಾಗಬಾರದು, ಬಡವರ ಮನೆಗೆ ತೆರಳುವ ರಸ್ತೆಯೂ ಹೈಫೈ ರಸ್ತೆಯಾಗಬೇಕು ಆಗ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು.


ಸುಳ್ಳು ಹೇಳದ ಶಾಸಕ ಅಶೋಕ್ ರೈ
ಬಹುತೇಕ ಜನಪ್ರತಿನಿಧಿಗಳು ಸುಳ್ಳು ಹೇಳುತ್ತಾರೆ. ಭರವಸೆಗಳನ್ನು ಕೊಟ್ಟು ಮತ್ತೆ ಮರೆತುಬಿಡುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದೆಲ್ಲಾ ಭರವಸೆ ಕೊಡುತ್ತಾರೆ. ಆದರೆ ಬಳಿಕ ಏನೂ ಮಾಡುವುದಿಲ್ಲ ಆದರೆ ಪುತ್ತೂರು ಶಾಸಕರು ಕಳೆದ ಚುನಾವಣೆಯ ಸಂದರ್ಭದಲ್ಲಿ ಏನು ಹೇಳಿದ್ದರೋ ಅದನ್ನು ಮಾಡಿ ತೋರಿಸುತ್ತಿದ್ದಾರೆ. ಕ್ಷೇತ್ರದಾದ್ಯಂತ ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ಕಂಡು ಬಿಜೆಪಿಯವರು ದಿಕ್ಕಾಪಾಲಾಗುತ್ತಿದ್ದಾರೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಕನಸಲ್ಲೂ ಗ್ರಹಿಸಿರಲಿಲ್ಲ: ಎ ಕೆ ಜಯರಾಮ ರೈ
ಕೆಯ್ಯೂರು ಗ್ರಾಮದ ರಸ್ತೆ ಅಭಿವೃದ್ದಿಗೆ 8 ಕೋಟಿ ಅನುದಾನ ಒಂದೇ ವರ್ಷದಲ್ಲಿ ಬರುತ್ತದೆ ಎಂದು ಕನಸಲ್ಲೂ ನಾವು ಗ್ರಹಿಸಿಲ್ಲ, ಅದ್ಬುತ ಎಂಬಂತೆ ಅನುದಾನ ಬಂದಿದೆ ಇದಕ್ಕಾಗಿ ಶಾಸಕರನ್ನು ಅಭಿನಂದಿಸುವುದಾಗಿ ಕಾಂಗ್ರೆಸ್ ಮುಖಂಡ ಎ ಕೆ ಜಯರಾಮ ರೈ ಹೇಳಿದರು. ಮುಂದಿನ ಐದು ವರ್ಷದಲ್ಲಿ ಕೆಯ್ಯೂರು ಗ್ರಾಮದ ಎಲ್ಲಾ ರಸ್ತೆಗಳು ಕಾಂಕ್ರೀಟ್ ಆಗುತ್ತದೆ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ಅವರು ಹೇಳಿದರು.

ಬಿಜೆಪಿಯವರೂ ಶಾಸಕರ ಕಾರ್ಯವೈಖರಿಯನ್ನು ಹೊಗಳುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರಿರುವಾಗ ಇಷ್ಟೊಂದು ಅಭಿವೃದ್ದಿ ಕೆಲಸಗಳು ಆಗಿರಲಿಲ್ಲ, ಕುಡಿಯುವ ನೀರಿಗೆ 1010 ಕೋಟಿ ರೂ ಬಂದಿದೆ, ಕಾಮಗಾರಿ ನಡೆಯುತ್ತಿದೆ ಎಂದು ಬಿಜೆಪಿಯವರೇ ನಮ್ಮ ಬಳಿ ಹೇಳುತ್ತಿರುವುದು ಶಾಸಕರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮುಂದೆ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಶಾಸಕರ ಬಳಿ ತಿಳಿಸಿ ಪರಿಹಾರ ಕಂಡುಕೊಳ್ಳುತ್ತೇವೆ ಇದಕ್ಕೆ ಎಲ್ಲರ ಸಹಕಾರ ಬೇಕಿದೆ.
ಕೃಷ್ಣಪ್ರಸಾದ್ ಆಳ್ವ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪುತ್ತೂರು

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪಕ್ಷದ ಮುಖಂಡರಾದ ಸಂತೋಷ್ ಕುಮಾರ್ ರೈ ಇಳಂತಾಜೆ, ದೇರ್ಲ ಚೆನ್ನಪ್ಪ ರೈ, ಅಶೋಕ್ ರೈ ದೇರ್ಲ, ಗ್ರಾಪಂ ಸದಸ್ಯರುಗಳಾದ ಬಟ್ಯಪ್ಪ ರೈ, ಮೇರ್ಲ ಅಬ್ದುಲ್ ಖಾದರ್, ದಾಮೋದರ ಪೂಜಾರಿ ಕೆಂಗುಡೇಲು, ವಿನೀತ್ ದೇರ್ಲ, ಹನೀಫ್ ಕೆ ಎಂ , ಶಿವಶ್ರೀ ರಂಜನ್ ರೈ, ಹರೀಶ್ ಪಾಟಾಳಿ, ಬೇಬಿಪೂಜರಿ ದೇರ್ಲ, ಬಾಬು ಪಾಟಾಳಿ ದೇರ್ಲ, ಮಮತಾ, ವಿಮಲಾ, ಅಂಗಾರ ಇಳಂತಾಜೆ, ರೋಹಿತ್ ದೇರ್ಲ, ಲಕ್ಷ್ಮಣ ಬಾಕುಡ, ಸುಂದರ ಗೌಡ ದೇರ್ಲ, ಸೇಸಪ್ಪ ದೇರ್ಲ, ಪ್ರಕಾಶ್ ಶೆಟ್ಟಿ ದೇರ್ಲ, ಅಮರನಾಥ ರೈ ದೇರ್ಲ, ಶಿವರಾಮ ರೈ ದೇರ್ಲ ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ್ ಪೂಜಾರಿ ಕೆಂಗುಡೇಲು ಸ್ವಾಗತಿಸಿ ವಂದಿಸಿದರು

LEAVE A REPLY

Please enter your comment!
Please enter your name here