ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಲಾಗುವ ವಿಶೇಷ ಪ್ರಶಸ್ತಿಗೆ ಸುದ್ದಿ ಬಿಡುಗಡೆ ಪತ್ರಿಕೆಯ ಜಿಲ್ಲಾ ವರದಿಗಾರ ಭಾಸ್ಕರ ರೈ ಕಟ್ಟ ಆಯ್ಕೆಯಾಗಿದ್ದಾರೆ.
ಕೊಪ್ಪಳದಲ್ಲಿ ಮಾ.9ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಸ್ಕರ ರೈ ಸಹಿತ 35 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸುಳ್ಯ ತಾಲೂಕಿನ ಎಣ್ಮೂರು ಕಟ್ಟಬೀಡು ಮನೆತನದಲ್ಲಿ ಹುಟ್ಟಿದ ಭಾಸ್ಕರ ರೈ ಪ್ರಸ್ತುತ ಮಂಗಳೂರಿನಲ್ಲಿ ವಾಸವಿದ್ದಾರೆ. ಎಂ.ಎ. ಪದವೀಧರರಾಗಿರುವ ಇವರು ಮುಂಗಾರು ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಕಳೆದ ಹತ್ತು ವರ್ಷಗಳಿಂದ ಸುದ್ದಿ ಬಿಡುಗಡೆಯ ದ.ಕ. ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷರಾಗಿ, ಬಂಟರ ಯಾನೆ ನಾಡವರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ರೋಟರಿ ಕ್ಲಬ್ ಮಂಗಳೂರು ಸಂಸ್ಥೆಯ 2024-25ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಭಾಸ್ಕರ ರೈ ಅವರು ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಪತ್ರಕರ್ತರಿಗೆ ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.