ಪುತ್ತೂರು: ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಪುತ್ತೂರು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ಜರುಗಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಕೂಟವು ಇಂದಿನ ಒತ್ತಡದ ಜೀವನದ ಮಧ್ಯೆ ವಿದ್ಯಾರ್ಥಿಗಳ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸಿ ದಿನನಿತ್ಯ ವ್ಯಾಯಾಮ ಹಾಗೂ ಒಂದಿಷ್ಟು ಸಮಯ ಯಾವುದಾದರೊಂದು ಕ್ರೀಡೆ ಯನ್ನು ಆಡುವುದರ ಮೂಲಕ ಜೀವನದಲ್ಲಿ ನೆಮ್ಮದಿ, ಉತ್ಸಾಹದಿಂದಿರಲು ಸಾಧ್ಯವಾಗುತ್ತದೆ ಎಂದರು.

ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ ಧ್ವಜಾರೋಹಣ ಮಾಡಿ, ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧವಾದ ಕ್ರೀಡಾಕೂಟವನ್ನು ಅಕ್ಷಯ ಕಾಲೇಜ್ ಆಯೋಜಿಸಿದ್ದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಜೊತೆಗೆ ಕಲೆ, ಕ್ರೀಡೆ,ಪ್ರವಾಸ ಮೊದಲಾದ ಅನುಭವಗಳು ಅತ್ಯಂತ ಅವಿಸ್ಮರಣೀಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಯುಕ್ತ ಮಾನವ ಸಂಪನ್ಮೂಲಕ್ಕೆ ಮಾತ್ರ ಆದ್ಯತೆ ಈ ದೃಷ್ಟಿ ಕೋನದಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಿದರೆ ಮಾತ್ರ ತಮ್ಮ ಕೌಶಲ್ಯ ವೃದ್ಧಿ ಸಲು ಸಹಕಾರಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಡಾ ಎಲಿಯಾಸ್ ಪಿಂಟೊ ಕ್ರೀಡಾ ಜ್ಯೋತಿ ಯನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಕ್ರೀಡಾ ಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ , ವಾರ್ಷಿಕ ಕ್ರೀಡಾಕೂಟವು ವಿದ್ಯಾರ್ಥಿಗಳ ಸೃಜನಶೀಲತೆ, ಮಾನಸಿಕ ಆರೋಗ್ಯಕ್ಕೆ , ವಿದ್ಯಾರ್ಥಿಗಳ ಛಲಕ್ಕೆ ಹಾಗೂ ಲಕ್ಷ್ಯ ವನ್ನು ತಲುಪಲು ಪ್ರೇರೇಪಿಸುತ್ತದೆ ಕ್ರೀಡಾ ಸ್ಫೂರ್ತಿಯನ್ನು ಸದಾ ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ರೀಡಾಕೂಟದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಲಭಿಸಬೇಕಾದ ಪಠ್ಯೇತರ ಚಟುವಟಿಕೆ ಗಳನ್ನು ಒದಗಿಸಿ ವಿದ್ಯಾರ್ಥಿ ಜೀವನದ ಪರಿಪೂರ್ಣತೆಗೆ ಶ್ರಮ ವಹಿಸುವುದು ಅತ್ಯಗತ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಮೌಲ್ಯವನ್ನು, ಕೌಶಲ್ಯವನ್ನು ಹೆಚ್ಚಿಸಿಕೊಂಡು ಜೀವನದ ಸ್ಪರ್ಧೆಯಲ್ಲಿ ಯಶಸ್ವಿಯಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ವಿನಯ್,ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಆರ್ ಅರ್ಪಿತ್ ಟಿ. ಎ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಕೃತಿ ಪ್ರಾರ್ಥನೆ ಹಾಡಿದರು, ಕ್ರೀಡಾ ಕಾರ್ಯದರ್ಶಿ ವಿಸ್ಮಿತ ಕ್ರೀಡಾಳುಗಳಿಗೆ ಪ್ರತಿಜ್ಞೆ ಬೋಧಿಸಿದರು.
ಫ್ಯಾಷನ್ ಡಿಸೈನ್ ವಿಭಾಗದ ಉಪನ್ಯಾಸಕಿ ಧನ್ಯಶ್ರೀ ವಂದಿಸಿ, ಬಿ ಎಚ್ ಎಸ್ ವಿಭಾಗದ ಉಪನ್ಯಾಸಕಿ ಶ್ರುತ ನಿರೂಪಿಸಿದರು.