ಜಾಂಬ್ರಿಗೆ ಬಿಟ್ಟ ಚಿರತೆ ಸೆರೆಗೆ ಕಾರ್ಯಾಚರಣೆ ಅರಣ್ಯಾಧಿಕಾರಿಗಳ ತಂಡದಿಂದ ಗಸ್ತು-ಬೋನು, ಕ್ಯಾಮೆರಾ ಅಳವಡಿಕೆ

0

ಪುತ್ತೂರು: ಕೇರಳದ ಬೇಡಡ್ಕದಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಕೇರಳ ಮತ್ತು ಕರ್ನಾಟಕ ಗಡಿ ಪ್ರದೇಶವಾದ ಬಂಟಾಜೆ ರಕ್ಷಿತಾರಣ್ಯ ವ್ಯಾಪ್ತಿಯ ಜಾಂಬ್ರಿ ಪರಿಸರದಲ್ಲಿ ಬಿಟ್ಟಿರುವ ಪ್ರಕರಣದಿಂದ ಪಾಣಾಜೆ ಗ್ರಾಮದಲ್ಲಿ ಆತಂಕ ಸೃಷ್ಟಿಯಾದ ಬಳಿಕ ಅರಣ್ಯ ಇಲಾಖೆಯಿಂದ ಜಾಂಬ್ರಿ ಪರಿಸರದಲ್ಲಿ ಬೋನು ಅಳವಡಿಸಿ, ಗಸ್ತು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಈವರೆಗೆ ಚಿರತೆಯ ಯಾವುದೇ ಸುಳಿವು ಲಭ್ಯವಾಗಿಲ್ಲ.


ಕೇರಳದ ಕಾಸರಗೋಡು ಜಿಲ್ಲೆಯ ಬೇಡಡ್ಕ ಗ್ರಾಮ ಪಂಚಾಯತ್‌ನ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಬಿದ್ದ ಚಿರತೆಯನ್ನು ಕೇರಳ ಅರಣ್ಯ ಇಲಾಖಾಧಿಕಾರಿಗಳು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದ ವ್ಯಾಪ್ತಿಯ ಜಾಂಬ್ರಿ ಎಂಬಲ್ಲಿ ತಂದು ಬಿಟ್ಟಿದ್ದರು. ಈ ಬಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಆಕ್ರೋಶಗೊಂಡು ಪಾಣಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕದ ಅರಣ್ಯ ಇಲಾಖೆಯ ಗಮನಕ್ಕೆ ತಾರದೆ ರಾತ್ರೋರಾತ್ರಿ ಜಾಂಬ್ರಿ ಪರಿಸರದಲ್ಲಿ ಚಿರತೆ ತಂದು ಬಿಟ್ಟರುವ ಅರಣ್ಯ ಇಲಾಖಾಽಕಾರಿಗಳ ಮೇಲೆ ಧಿಕ್ಕಾರ ಕೂಗಿ, ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು. ಗ್ರಾಮಸಭೆಗೆ ಸೇರಿದ್ದ ಗ್ರಾಮಸ್ಥರು ಸಂಪ್ಯ ಠಾಣಾಧಿಕಾರಿಗೆ ಮನವಿ ಸಲ್ಲಿಸಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಚಿರತೆಯ ಪ್ರಕರಣ ಗ್ರಾಮಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿ ಗ್ರಾಮಸಭೆ ಮುಂದೂಡಿಕೆಯೂ ಆಗಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪುತ್ತೂರು ಉಪವಲಯ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.


ಜಾಗೃತಿ ಸಭೆ:
ಗಡಿ ಭಾಗದ ಪ್ರದೇಶದಲ್ಲಿ ಚಿರತೆ ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಜನರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಪೆರ್ಲದ ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ಗಡಿ ಪ್ರದೇಶವಾದ ಪಡ್ರೆ ವಾಣಿನಗರ ಸರಕಾರಿ ಶಾಲೆಯಲ್ಲಿ ಜಾಗೃತಿ ಸಭೆ ಆಯೋಜಿಸಲಾಗಿತ್ತು. ಎರಡೂ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಭೀತಿ ನಿವಾರಿಸಲು ಕ್ರಮಕೈಗೊಳ್ಳಬೇಕು, ಗಡಿ ಭಾಗದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಜಾಗೃತಿ ಸಭೆ ಆಯೋಜಿಸಿ ಜಾಗೃತಿ ಮೂಡಿಸಬೇಕು, ಅರಣ್ಯ ವ್ಯಾಪ್ತಿಯಲ್ಲಿರುವ ಮನೆಗಳಿಗೆ ತೆರಳಿ ಧೈರ್ಯ ಹೇಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.


ಕಾರ್ಯಾಚರಣೆ ಆರಂಭ:
ಕೇರಳ ಅರಣ್ಯಾಧಿಕಾರಿಗಳು ಚಿರತೆ ಬಿಟ್ಟಿದ್ದಾರೆ ಎನ್ನಲಾದ ಜಾಂಬ್ರಿ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿಗಳ ತಂಡ ಕಾಡು ಪ್ರಾಣಿಗಳು ಬರಬಹುದಾದ ದಾರಿಯನ್ನು ಗುರುತಿಸಿ ಬೋನು ಇಡುವ ಕಾರ್ಯ ಮಾಡಿದ್ದಾರೆ. ಬೋನು ಇಟ್ಟಿರುವ ಜಾಗವನ್ನು 2 ದಿನಕ್ಕೊಮ್ಮೆ ಬದಲಾವಣೆ ಮಾಡುತ್ತಿದ್ದಾರೆ. ಪ್ರಾಣಿಗಳ ನಡಿಗೆಯ ಗುರುತು ಗೊತ್ತಿರುವ ಜಾಗಗಳಲ್ಲಿ 3 ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಮಾ.1ರಂದು ಎಸಿಎಫ್ ಸುಬ್ಬಯ್ಯರವರ ನೇತೃತ್ವದ ತಂಡ ಜಾಂಬ್ರಿ ಪರಿಸರಕ್ಕೆ ತೆರಳಿ ಪರಿಶೀಲನೆ ನಡೆಸಿದೆ.‌


8 ಜನರ ತಂಡದಿಂದ ಗಸ್ತು:
ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. 8 ಜನರ ತಂಡದಿಂದ ಗಸ್ತು ಕಾರ್ಯ ನಡೆಸಲಾಗುತ್ತಿದೆ. ಪಾಣಾಜೆ ಉಪ ವಿಲಯ ಅರಣ್ಯಾಧಿಕಾರಿ ಮದನ್ ಸಹಿತ 8 ಜನರ ತಂಡ ಗಸ್ತು ಕಾರ್ಯಾಚರಣೆ ಮಾಡುತ್ತಿದೆ. ಸಂಜೆಯಿಂದ ತಡರಾತ್ರಿರವರೆಗೆ ಅರಣ್ಯಾಧಿಕಾರಿಗಳ ತಂಡ ಗಸ್ತು ಕಾರ್ಯ ನಿರ್ವಹಿಸುತ್ತಿದೆ.


ಧಾರ್ಮಿಕ, ಪ್ರವಾಸಿ ಜಾಂಬ್ರಿ ಪ್ರದೇಶ:
ಬಂಟಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಕರ್ನಾಟಕ ವ್ಯಾಪ್ತಿಯ ಸ್ವಲ್ಪ ಭಾಗ ಹೊಂದಿದ್ದು ಕೇರಳದ ವ್ಯಾಪ್ತಿ ಹೆಚ್ಚಾಗಿದೆ. ಕರ್ನಾಟಕ ವ್ಯಾಪ್ತಿಯಲ್ಲಿರುವ ಜಾಂಬ್ರಿ ಪ್ರದೇಶದ ಸಮೀಪದ ಗಿಳಿಯಾಲು ಪರಿಸರದಲ್ಲಿ ಹಲವು ಮನೆಗಳಿವೆ. ಸಮೀಪದಲ್ಲಿ ಅಂಗನವಾಡಿಗಳಿವೆ. ಐತಿಹಾಸಿಕ, ಧಾರ್ಮಿಕ ಹಿನ್ನಲೆಯಿರುವ ಜಾಂಬ್ರಿ ಪ್ರದೇಶ ಬಂಟಾಜೆ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿದೆ. ಜಾಂಬ್ರಿ ಪ್ರದೇಶಕ್ಕೆ ಪ್ರವಾಸಿಗರು ಬರುತ್ತಿರುತ್ತಾರೆ. ಜಾಂಬ್ರಿ ಪ್ರದೇಶದಿಂದ ಕೇರಳಕ್ಕೆ ಸಂಪರ್ಕಿಸುವ ದಾರಿಯೂ ಇದೆ. ಜಾಂಬ್ರಿ ಪ್ರದೇಶದ ಅರಣ್ಯ ಭಾಗದಲ್ಲಿಯೇ ಚಿರತೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಚಿರೆತೆ ಸೆರೆಗೆ ಬೋನು ಇಡಲಾಗಿದೆ. 8 ಜನರ ತಂಡದಿಂದ ಗಸ್ತು ನಡೆಸುತ್ತಿದ್ದೇವೆ. ಅಲ್ಲದೆ 3 ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟರವರೆಗೆ ಚಿರತೆ ಸುಳಿವು ಲಭ್ಯವಾಗಿಲ್ಲ
-ಸುನೀಶ್, ಬೀಟ್ ಅರಣ್ಯ ಪಾಲಕ


ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕ್ರಮಕೈಗೊಂಡಿದೆ. ಜಾಂಬ್ರಿ ಪರಿಸರದಲ್ಲಿ ಈ ತನಕ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿಲ್ಲ.
-ಮೈಮುನತ್ತುಲ್ ಮೆಹ್ರಾ,
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ

LEAVE A REPLY

Please enter your comment!
Please enter your name here