ಕಡಬ: ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿರುವ ಬಾರ್‌ಗೆ ಊಟಕ್ಕೆಂದು ಹೋಗಿ ಬಾರ್‌ನ ಎದುರು ಬೈಕ್ ನಿಲ್ಲಿಸುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ಬೈದು ತಲವಾರಿನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ರಾಮಕುಂಜ ಗ್ರಾಮದ ಬರೆಮೇಲು ನಿವಾಸಿ ಅವಿನ್(31ವ.)ಎಂಬವರು ನೀಡಿದ ದೂರಿನಂತೆ ರಾಮಕುಂಜ ಗ್ರಾಮದ ಕಂಪ ನಿವಾಸಿ ಮೋಹನ ಕೆ.ಟಿ.(46ವ.)ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಗಾಯಾಳು ಅವಿನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಘಟನೆ ಕುರಿತಂತೆ ಕಡಬ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಾನು ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಂಪ್ರತಿ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತಿರುವುದಾಗಿದೆ. ಕಂಪ ನಿವಾಸಿ ಮೋಹನ ಕೆ.ಟಿ.ಎಂಬಾತ ನನ್ನನ್ನು ನೋಡಿ ದಿನಂಪ್ರತಿ ಹೀಯಾಳಿಸುತ್ತಾ ನನ್ನ ಮುಖನೋಡಿ ಎಂಜಲು ಉಗಿಯುತ್ತಾ ಇರುತ್ತಿದ್ದ. ಮಾ.2ರಂದು ರಾತ್ರಿ 8.40 ಗಂಟೆಗೆ ನಾನು ಮತ್ತು ರಾಮಕುಂಜ ಗ್ರಾಮದ ನಿವಾಸಿ ಚೇತನ ಎಂಬವರು ಗೋಳಿತ್ತಡಿ ಬಾರ್‌ಗೆ ಊಟಕ್ಕೆಂದು ಹೋಗಿ ಬಾರ್‌ನ ಎದುರುಗಡೆ ಬೈಕು ನಿಲ್ಲಿಸಿದಾಗ ಆರೋಪಿ ಮೋಹನ ಕೆ.ಟಿ. ನನ್ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ತುಳುವಿನಲ್ಲಿ ಬೈದಿರುತ್ತಾನೆ. ನನಗೆ ಯಾಕೆ ಬೈಯುತ್ತಿ ಎಂದು ಕೇಳಿದಾಗ ನಿನಗೆ ಬೈಯುದಲ್ಲ, ನಿನ್ನನ್ನು ಕಡಿಯುತ್ತೇನೆಂದು ಹೇಳಿ ರಿಕ್ಷಾದಲ್ಲಿದ್ದ ಮಾರಕಾಯುಧ ತಲವಾರು ತೆಗೆದು ಬೀಸಿದ್ದು, ಆ ವೇಳೆ ಕೈಯಿಂದ ತಡೆದಾಗ ನನ್ನ ಎಡಕೈ ತೋರುಬೆರಳಿಗೆ ರಕ್ತ ಗಾಯ ಮತ್ತು ಬಲ ಕೈಯ ತೋರುಬೆರಳು ಮತ್ತು ಮದ್ಯದ ಬೆರಳಿಗೆ ಜಜ್ಜಿದ ಗಾಯವಾಗಿರುತ್ತದೆ. ನನ್ನ ಜೊತೆ ಇದ್ದ ಚೇತನ್ ತಡೆಯಲು ಬಂದಾಗ ಆತನಿಗೂ ಮಾರಕಾಯುಧ ತಲವಾರಿನಿಂದ ಬೀಸಿದ್ದು ಆತನ ಎಡಕೈ ಕಿರು ಬೆರಳು, ಎರಡನೇ ಬೆರಳು ಮತ್ತು ಉಂಗುರು ಬೆರಳು ಮತ್ತು ತೋರುಬೆರಳಿಗೆ ರಕ್ತ ಗಾಯವಾಗಿರುತ್ತದೆ. ಜನ ಬರುತ್ತಿದ್ದಂತೆ ಮೋಹನ ಕೆ.ಟಿ. ಮಾರಕಾಯುಧ ತಲವಾರನ್ನು ಅಲ್ಲಿಯೇ ಎಸೆದು ಮುಂದಕ್ಕೆ ನನ್ನ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಹೋಗಿರುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ. ಅವಿನ್ ನೀಡಿದ ಹೇಳಿಕೆಯಂತೆ ಕಡಬ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.