ಪ್ರೀತಿಯ ಪೋಷಕರೇ, ಇಂದು ನಾವು ನಮ್ಮಲ್ಲಿ ಸ್ವಲ್ಪ ಮಾತನಾಡಿಕೊಳ್ಳೋಣ, ನನ್ನ ನೆನಪಿನ ಅಂಗಳದಿಂದ ಅಳಿಸಿ ಹೋಗದ ನನ್ನ ಬಾಲ್ಯದ ಅಧ್ಯಾಪಕರು ಹೇಳುತ್ತಿದ್ದ ಆಲ್ಬರ್ಟ್ ಐನ್ಸ್ಟೈನ್”ರವರ ಒಂದು ಮಾತು ಈ ದಿನದವರೆಗೂ ನನ್ನನ್ನು ಕಾಡುತ್ತಿರುತ್ತದೆ. ಅದೇನೆಂದರೆ, `ಪ್ರತಿಯೊಬ್ಬರೂ ಪ್ರತಿಭಾವಂತರು, ಆದರೆ ಮೀನನ್ನು ಮರ ಹತ್ತುವ ಸಾಮರ್ಥ್ಯದಲ್ಲಿ ಅಥವಾ ಹಾರುವ ಹಕ್ಕಿಯನ್ನು ಈಜುವ ಸಾಮರ್ಥ್ಯದಲ್ಲಿ ಅಳೆಯತೊಡಗಿದರೆ ಅದು ಕೇವಲ ಮೂರ್ಖತನವಾಗಿರುತ್ತದೆ. ಈಜಲು ಸಾಮರ್ಥ್ಯವಿರುವ ಮೀನಿಗೆ ಹಾರಲು ಸಾಧ್ಯವೇ? ಹಾರುವ ಸಾಮರ್ಥ್ಯವಿರುವ ಹಕ್ಕಿಗೆ ಈಜಲು ಸಾಧ್ಯವೇ’?. ನಮ್ಮ ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಒತ್ತಡ ಮತ್ತು ಆತಂಕದ ವಿಚಾರವಾಗಿದೆ ಎಂಬುದು ಸಾರ್ವಕಾಲಿಕ ಸತ್ಯ. ಪೋಷಕರಿಗೆ ಇದು ಸಂದಿಗ್ಧ ಪರಿಸ್ಥಿತಿಯಾದರೂ ಅವರ ಪಾತ್ರವು ಪ್ರತಿಬಾರಿಗಿಂತ ಈ ಬಾರಿ ಹೆಚ್ಚು ನಿರ್ಣಾಯಕವಾಗಿದೆ. ಯಾಕೆಂದರೆ ಇಂದಿನ ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಮಹತ್ವದ ಮೈಲಿಗಲ್ಲು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವು ಎಂದಿಗೂ ನಮ್ಮ ಮಕ್ಕಳ ಮೌಲ್ಯವನ್ನು ವ್ಯಾಖ್ಯಾನಿಸಬಾರದು ಅಥವಾ ಅವರ ಸಾಮರ್ಥ್ಯವನ್ನು ಮಿತಿಗೊಳಿಸಬಾರದು ಎಂಬುದನ್ನ ನಾವು ಚಿತ್ತೈಸಿಕೊಳ್ಳುತ್ತಾ ಪ್ರಸ್ತುತ ಪೀಳಿಗೆಯು ತಮ್ಮ ಪೋಷಕರಿಂದ ತಮ್ಮದೇ ವಿಧಾನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಅರ್ಥೈಸುವಿಕೆಯನ್ನು ಬಯಸುತ್ತದೆ.
ನಮ್ಮೆದುರಿರುವ ವಿದ್ಯಾರ್ಥಿ ಸಮೂಹ ಬಹಳಷ್ಟು ಒತ್ತಡಗಳಿಂದ ಕೂಡಿದ ಸಂಕೀರ್ಣ ಪರಿಸ್ಥಿತಿಯನ್ನು ತಮ್ಮಷ್ಟಕ್ಕೆ ತಾವೇ ಎದುರಿಸುತ್ತಿದ್ದಾರೆ. `ಆ ಸಹಪಾಠಿಗೆ ಇಷ್ಟು ಪರ್ಸಂಟೇಜ್’, `ಈ ಸೀನಿಯರ್ಗೆ ಅಷ್ಟು ರ್ಯಾಂಕ್’, `ದೂರದಿಂದ ಬಂದ ಇವಳಿಗೆ ಆ ಗ್ರೇಡ್’, `ಮೊನ್ನೆ ಮೊನ್ನೆಯಷ್ಟೇ ನನಗೆ ಕಾಂಪಿಟೇಷನ್ ಕೊಟ್ಟ ಅವನಿಗೆ ಅಂತಹ ದೊಡ್ಡ ಸರ್ಟಿಫಿಕೇಟ್’ ಎಂಬುವ ಈ ರೀತಿಯ ಸಹಜ ಸ್ಪರ್ಧೆಯ ಜೊತೆಗೆ `ನಮ್ಮ ಶಾಲೆ, ಕಾಲೇಜಿಗೆ ೫ ವರ್ಷದ ಹಿಂದೆ, ೩ ವರ್ಷದ ಹಿಂದೆ, ಕಳೆದ ವರ್ಷ ಇಂತಿಷ್ಟು ರ್ಯಾಂಕ್ಗಳು ಬಂದಿವೆ ಹಾಗೆಯೇ ಈ ವರ್ಷವೂ ಕೂಡಾ ಹೇಗಾದರೂ ನಮ್ಮ ಮರ್ಯಾದೆ ಉಳಿಸಿಕೊಳ್ಳಬೇಕು, ಫಂಡ್ಸ್ ಬರಬೇಕು, ಪೇಪರ್ನಲ್ಲಿ ಪ್ರಕಟವಾಗಬೇಕು’ ಎಂಬ ಶಿಕ್ಷಕರ ನಿರೀಕ್ಷೆಗಳು ಮತ್ತು ಪಠ್ಯಕ್ರಮದ ಪ್ರಮಾಣ ಮತ್ತು ಪರೀಕ್ಷಾ ಅಂಕಗಳಿಗೆ ಹೊಂದಿಕೊಂಡು ಸಮಾಜದ ನಿರೀಕ್ಷೆಗಳು ಇವುಗಳೆಲ್ಲವೂ ವಿದ್ಯಾರ್ಥಿಗಳಿಗೆ ಅಪಾರವಾದ ಮಾನಸಿಕ ಒತ್ತಡವನ್ನು ಅನುಭವಿಸುವ ವಾತಾವರಣವನ್ನು ನಿರ್ಮಿಸುತ್ತಿವೆ. ನಿರಂತರ ಡಿಜಿಟಲ್ ಯುಗದ ಸಂಪರ್ಕದಿಂದ ಮತ್ತು ಅದರಲ್ಲಿ ಬಿಂಬಿಸಲಾಗುವ ಪ್ರಚಾರಾತ್ಮಕ ಯಶಸ್ಸಿನ ಚಿತ್ರಣಗಳು ಕೂಡ ಮುಗ್ಧ ಮನಸ್ಸುಗಳ ಮೇಲೆ ಕಾಣದ ಕೈಗಳಂತೆ ಒತ್ತಡವನ್ನು ಸೃಷ್ಟಿಸುತ್ತಿವೆ. ನಾವು ನಮ್ಮ ಮಕ್ಕಳಿಗೆ ಅತೀ ಅಗತ್ಯವಿರುವ ಭಾವಾನಾತ್ಮಕ ಬೆಂಬಲವನ್ನು ಒದಗಿಸಲು ಈಗಲೇ ಕಾರ್ಯಪ್ರವೃತ್ತರಾಗಬೇಕು. ಮುಖ್ಯವಾಗಿ ಅವರ ದೈನಂದಿನ ಚಟುವಟಿಕೆಯಲ್ಲಿ ಆರೋಗ್ಯಕರ ಕಾರ್ಯ ವಿಧಾನವನ್ನು ಪರಿಚಯಿಸಿ, ಪ್ರಾಣಾಯಾಮ ಉಸಿರಾಟದ ಯೋಗಾಭ್ಯಾಸವನ್ನು ಅಳವಡಿಸಲು ಪ್ರೇರೇಪಿಸಬೇಕು. ಇದರಿಂದ ಮನಸ್ಸು ಶಾಂತವಾಗಿ, ಆತಂಕ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಅನುಲೋಮ-ವಿಲೋಮ ತಂತ್ರಗಳಂತಹ ಸರಳವಾದ ಮತ್ತು ಆಳವಾದ ಉಸಿರಾಟದ ವ್ಯಾಯಾಮಗಳನ್ನು ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಮಾಡಬಹುದು ಎಂಬುದು ಇಲ್ಲಿ ಗಮನಾರ್ಹ. ಏಕಾಗ್ರತೆ ಮತ್ತು ಭಾವನಾತ್ಮಕ ನಿಯಂತ್ರಣವನ್ನು ಸುಧಾರಿಸಲು ಪ್ರತಿದಿನ ಸ್ವಲ್ಪ ಸಮಯ ಧ್ಯಾನವನ್ನು ಪ್ರೋತ್ಸಾಹಿಸುತ್ತಾ ಅದರ ಜೊತೆ ಜೊತೆಯಲ್ಲೇ ಕೆಲವು ಹವ್ಯಾಸಗಳು ಮತ್ತು ಸೃಜನಶೀಲ ಚಟುವಟಿಕೆಗಳನ್ನು ಅಳವ ಡಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸಂಗೀತ, ಕಲೆ, ಕ್ರೀಡೆ, ಬರವಣಿಗೆ ಇಂತಹ ಹವ್ಯಾಸಗಳು ಮನಸ್ಸಿಗೆ ಸಂತೋಷವನ್ನು ತರುತ್ತವೆ ಜೊತೆಗೆ ತನ್ನ ಬೆಳವಣಿಗೆಯನ್ನು ಉತ್ತೇಜಿಸಲು ಪೂರಕವಾದ ಮನೋಬಲವನ್ನುನ್ನು ನೀಡುತ್ತವೆ.
ದೈಹಿಕ ಚಟುವಟಿಕೆಯಾಧಾರಿತ ಒಂದು ಸಣ್ಣ ನಡಿಗೆಯು ಯಥೇಚ್ಛವಾದ ಎಂಡಾರ್ಫಿನ್ ಎಂಬ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಇದು ಧನಾತ್ಮ ಕ ಮನೋಸ್ಥಿತಿಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. `ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎಂಬಂತೆ ಮಕ್ಕಳು ಹೆತ್ತವರನ್ನು ನೋಡಿ ಕಲಿಯುವುದು ಬಹಳ ಹೆಚ್ಚು. ಈ ನಿಟ್ಟಿನಲ್ಲಿ `ಪ್ರಾಣಾಯಾಮ, ವಾಕಿಂಗ್ಗೆ ಹೋಗು, ಮೊಬೈಲ್ ಫೋನ್ ಬಳಸಬೇಡ, ಟಿವಿ ಸಾಕು’, ಎಂದೆಲ್ಲಾ ಹೇಳಿ, ಮಕ್ಕಳೆದುರು ನಾವೇ ಬೇರೆಯವರೊಂದಿಗೆ ಹರಟೆ ಮಾಡುತ್ತಾ, ಜಗಳ ಮಾಡುತ್ತಾ, ಮೊಬೈಲ್ ಫೋನ್ನಲ್ಲಿ ಮುಳುಗಿಹೋದರೆ ಮಕ್ಕಳ ಮನಸ್ಸಲ್ಲಿ ಋಣಾತ್ಮಕ ಭಾವನೆ ಹುಟ್ಟುವುದಕ್ಕೆ ನಾವೇ ಕಾರಣರಾಗುತ್ತೇವೆ. ಇದೆಲ್ಲದರ ಹೊರತಾಗಿ ನಾವು ಮಕ್ಕಳೆದುರು ಮಾದರಿಯಾಗಿ ನಡೆದುಕೊಂಡರೆ ಮಾತ್ರ ಅವರು ನಮ್ಮನ್ನು ಹಿತವಾಗಿ ಅನುಕರಿಸುತ್ತಾರೆ. ಪುಸ್ತಕಗಳ ಬಗ್ಗೆ ಪ್ರೀತಿ, ಗೌರವ ಮತ್ತು ಒಲವು ತೋರಿಸುವ ಪೋಷಕರು ಇರುವಲ್ಲಿ ಮಕ್ಕಳು ತಾವಾಗಿಯೇ ಅಂತಹ ಗುಣಗಳನ್ನು ಅನುಸರಿಸುತ್ತಾರೆ. ತಕ್ಷಣ ಸಾಧ್ಯವಿಲ್ಲದಿದ್ದರೂ ಒಂದಿಷ್ಟು ಸಮಯದ ನಂತರವಾದರೂ ಮಕ್ಕಳು ಅದರ ಸದುದ್ದೇಶವನ್ನು ಅರಿತುಕೊಳ್ಳುತ್ತಾರೆ ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಪೂರಕ ಕಲಿಕಾ ವಾತಾವರಣವನ್ನು ಒದಗಿಸುವುದು ನಮ್ಮ ಜವಾಬ್ದಾರಿ. ಮಕ್ಕಳು ಕಲಿಕೆಗೆ ಪೋಷಕರಿಂದ ಬಯಸುವ ಒಂದು ಸಣ್ಣ ಮಟ್ಟದ ಡಿಮಾಂಡ್ ಏನೆಂದರೆ ತಾನು ಓದುವ ಸ್ಥಳ ಚ್ಛವಾಗಿರಬೇಕು, ಗಾಳಿ ಬೆಳಕು ಚೆನ್ನಾಗಿ ಬರುವಂತಿರಬೇಕು, ಶಾಂತವಾಗಿರಬೇಕು, ಗೊಂದಲಗಳಿಂದ ಮುಕ್ತವಾಗಿರಬೇಕು, ಮುಖ್ಯವಾಗಿ ಏಕಾಗ್ರತೆಯಿಂದ ಓದಲು ಬೇಕಾಗಿರುವ ವಾತಾವರಣ. ಆದಷ್ಟು ಹಾಸಿಗೆ ಮೇಲೆ ಅಧ್ಯಯನ ಮಾಡುವುದನ್ನು ತಪ್ಪಿಸಬೇಕು ಮತ್ತು ಬಿಸಿ ನೀರಿನ ಸೇವನೆಯನ್ನು ಉತ್ತೇಜಿಸಬೇಕು. ಇದರಿಂದ ಮಕ್ಕಳ ಮನಸ್ಸನ್ನು ಅತ್ತಿತ್ತ ಹೊರಳಾಡದೆ ಏಕ ಚಿತ್ತದಿಂದ ಓದಿನ ಕಡೆಗೆ ಸರಿಯುತ್ತದೆ. ಆದಷ್ಟು ನಾವೆಲ್ಲರೂ ಮಕ್ಕಳಿಗೆ ಬೇಕಾದ ಕಲಿಕಾ ವಾತಾವರಣವನ್ನು ನೀಡುವಲ್ಲಿ ಮತ್ತು ಓದಿನಲ್ಲಿ ಅವರಿಗೆ ಒಲವು ಮೂಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮುಕ್ತ ಮಾತುಕತೆ ಹಾಗೂ ಭಾವನಾತ್ಮಕ ಬೆಂಬಲ ಮುಕ್ತ ಹಾಗೂ ಭಾವನಾತ್ಮಕ ಸಂವಹನವು ನಮ್ಮ ಮತ್ತು ಮಗುವಿನ ಬಾಂಧವ್ಯದೊಂದಿಗೆ ಸಲುಗೆ, ಪ್ರೀತಿ, ಗೆಳೆತನ ಹೀಗೆ ಹಲವಾರು ವಿಚಾರಕ್ಕೆ ಪೂರಕವಾಗಿದೆ.
ಮಗುವಿಗೆ ಏನೇ ಸಮಸ್ಯೆ ಬಂದರೂ ಮೊದಲು ಮುಕ್ತವಾಗಿ ಹಂಚಿಕೊಳ್ಳಲು ಆರಿಸುವ ವ್ಯಕ್ತಿ ಅದು ಪೋಷಕರೇ ಆಗಿರಬೇಕು, ನಾವು ಹಾಗೆ ಆಗಬೇಕಾದರೆ ಮೊದಲು ಅವರ ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವ, ಆಧರಿಸುವ ಮತ್ತು ಪರಿಹರಿಸುವ ವ್ಯಕ್ತಿಗಳು ನಾವಾಗಿರಬೇಕು. ಏನೇ ಫಲಿತಾಂಶ ಬಂದರೂ ಅದು ಮಕ್ಕಳ ಮೌಲ್ಯದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂಬ ಅರಿವನ್ನು ಮೊದಲೇ ಮೂಡಿಸಬೇಕು. ಪ್ರೀತಿ, ಪ್ರೋತ್ಸಾಹದಿಂದ ಮಕ್ಕಳಿಗೆ ಉತ್ತಮ ಸಲಹೆಗಾರರಾಗುವುದರ ಮೂಲಕ ಇಂತಹ ಅಂಶಗಳನ್ನು ಪೋಷಿಸಬಹುದು. ಪೋಷಕರಾಗಿ ನಮ್ಮ ದೃಷ್ಟಿಕೋನ ಮತ್ತು ಶ್ರಮ ಪೋಷಕರಾಗಿ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಇದರೊಂದಿಗೆ ನಮ್ಮ ಕೆಲವು ಸಂತೋಷಗಳನ್ನು ತ್ಯಾಗ ಮಾಡಲು ಸಿzರಿರಬೇಕು. ನಮ್ಮ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾದಷ್ಟು ಮಕ್ಕಳ ವೈಯುಕ್ತಿಕ ಸಾಮರ್ಥ್ಯಗಳಲ್ಲಿ ಮತ್ತು ಆಸಕ್ತಿಗಳಲ್ಲಿ ಬೆಳವಣಿಗೆ ಸಾಧ್ಯ. ಮಕ್ಕಳನ್ನು ಇತರರೊಂದಿಗೆ ಹೋಲಿಸುವುದನ್ನು ಬಿಟ್ಟುಯಶಸ್ಸು” ಮತ್ತು “ಸಾಧನೆ” ಎಂಬುದು ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಅದರ ಹೊರತಾಗಿ ಬೇರೆ ಬೇರೆ ಕ್ಷೇತ್ರ್ರದಲ್ಲೂ ಕೂಡ ಗಳಿಸಿದ ಯಶಸ್ಸನ್ನು ಜಗತ್ತು ಕೊಂಡಾಡುತ್ತದೆ ಎಂಬ ಅರಿವನ್ನು ಮೂಡಿಸಬೇಕು. ತಪ್ಪುಗಳನ್ನು ಒಪ್ಪಿಕೊಳ್ಳುವ ಮನೋಭಾವನೆ ಮತ್ತು ಅದೇ ತಪ್ಪುಗಳಿಂದ ಪಾಠ ಕಲಿಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು.
ಇಂದಿನ ಈ ಪರೀಕ್ಷೆಗಳು, ಉತ್ತಮ ಅಂಕಗಳು, ರ್ಯಾಂಕ್ಗಳು, ಮುಂದಿನ ವಿದ್ಯಾಭ್ಯಾಸ ಮತು ಹೊಸ ಕಾಲೇಜಿನ ಹುಡುಕಾಟ ಈ ಎಲ್ಲಾ ನಿರ್ಣಾಯಕ ವಿಚಾರದಲ್ಲಿ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕವಾದ ಬೆಂಬಲ ಅಗತ್ಯವಾಗಿರುತ್ತದೆ. ಅತ್ಯಂತ ಆರೋಗ್ಯಕರ ದಿನಚರಿ ಮತ್ತು ಅಭ್ಯಾಸಕ್ಕಾಗಿ ಪೋಷಕರ ಪ್ರೋತ್ಸಾಹ ಇಂದಿನ ಪೀಳಿಗೆಯ ಸರ್ವರೋಗಕ್ಕೂ ಮದ್ದು. ನಿಮ್ಮ ಮಕ್ಕಳ ಯಶಸ್ಸಿಗಾಗಿ ನೀವು ಎಂಥ ತ್ಯಾಗ ಮಾಡಲು ಕೂಡ ಸಿದ್ದರಿದ್ದೀರಿ ಎಂಬುದನ್ನು ಮಕ್ಕಳು ಅರಿತಾಗ ಅದುವೇ ಅವರಿಗೆ ನಂಬಲಾಗದಷ್ಟು ಪ್ರೇರಣೆದಾಯಕವಾಗಿರುತ್ತದೆ. ನಾವು ನಮ್ಮ ಮಕ್ಕಳಿಗೆ ಸರಿಯಾದ ಪೋಷಕರಾಗುವುದರೊಂದಿಗೆ ಅವರ ಶ್ರೇಯೋಭಿವೃದ್ಧಿಗೆ ಭದ್ರ ಬುನಾದಿ ಹಾಕುವುದು ಕೂಡ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
✍️ಸುಪ್ರೀತ್ ಕೆ.ಸಿ
ಪ್ರಾಂಶುಪಾಲರು, ಸುದಾನ ಪದವಿ ಪೂರ್ವ ಕಾಲೇಜು, ಪುತ್ತೂರು