ಆರ್ಯಾಪು ಗ್ರಾ.ಪಂ ಸ್ವಚ್ಛತಾ ಸೇನಾನಿಗಳಿಗೆ ಬೂಡಿಯಾರ್ ರಾಧಾಕೃಷ್ಣ ರೈ ನಿವಾಸದಲ್ಲಿ ಸನ್ಮಾನ, ಗೌರವಾರ್ಪಣೆ

0

*ಇದೊಂದು ಅಪರೂಪದ ಎಲ್ಲರೂ ಮೆಚ್ಚುವ ಕೆಲಸವಾಗಿದೆ: ನವೀನ್ ಭಂಡಾರಿ
*ಕಳ್ಳತನಕ್ಕಿಂತಲೂ ಕಸ ಹಾಕುವುದು ದೊಡ್ಡ ಅಪರಾಧ: ಬೂಡಿಯಾರ್ ರಾಧಾಕೃಷ್ಣ ರೈ
*ಸ್ವಚ್ಛತೆ ಮೊದಲು ಮನೆಯಲ್ಲಿ ಆರಂಭವಾಹಬೇಕು: ಡಾ.ದೀಪಕ್ ರೈ
*ಇದೊಂದು ಮಾದರಿ ಕಾರ್ಯಕ್ರಮವಾಗಿದೆ: ನಾಗೇಶ್ ಎಂ

ಪುತ್ತೂರು: ಗ್ರಾಮ ಪಂಚಾಯತ್‌ನ ಸ್ವಚ್ಛತಾ ಸೇನಾನಿಗಳನ್ನು ಮನೆಯಲ್ಲಿ ಸನ್ಮಾನಿಸಿ ಗೌರವಿಸಿರುವುದು ಅತ್ಯಂತ ಖುಷಿ ಕೊಟ್ಟ ಮತ್ತು ಇದೊಂದು ಅಪರೂಪದ ಎಲ್ಲರೂ ಮೆಚ್ಚುವಂತಹ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಬೂಡಿಯಾರ್ ರಾಧಾಕೃಷ್ಣ ರೈಯವರಿಗೆ ಅಭಿನಂದನೆ ಸಲ್ಲಿಸಬೇಕು ಹಾಗೇ ಪ್ರತಿಯೊಬ್ಬರು ಸ್ವಚ್ಛತಾ ಸೇನಾನಿಗಳನ್ನು ಈ ರೀತಿಯಾಗಿ ಗೌರವದಿಂದ ಕಾಣುವಂತಾಗಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.

ಅವರು ಮಾ.4ರಂದು ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈಯವರ ನಿವಾಸದಲ್ಲಿ ನಡೆದ ಆರ್ಯಾಪು ಗ್ರಾ.ಪಂನ ಸ್ವಚ್ಚತಾ ಸೇನಾನಿಗಳಿಗೆ ಸನ್ಮಾನದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುದ ದ.ಕ ಜಿಲ್ಲೆಯವರಾದ ನಾವು ಸ್ವಚ್ಚತೆ ಇಲ್ಲದ ನೆರಳಲ್ಲಿ ಇದ್ದೇವೋ ಎಂಬ ಭಾವನೆ ಬರುತ್ತಿತ್ತು ಅದಕ್ಕಾಗಿ ಒಂದು ಆಂದೋಲನವನ್ನು ಆರಂಭಿಸಿದ್ದೇವು, ಅದುವೇ ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಎಂದು ಇದಕ್ಕೆ ಪ್ರತಿಯೊಬ್ಬರು ಬೆಂಬಲ ಸಹಕಾರ ಕೊಟ್ಟಿದ್ದೀರಿ ಎಂದ ನವೀನ್ ಭಂಡಾರಿಯವರು ಮುಂದಿನ ದಿನಗಳಲ್ಲಿ ಮತ್ತೆ ಈ ಆಂದೋಲನವನ್ನು ಮುಂದುವರಿಸುವ ಬಗ್ಗೆ ಅವಲೋಕನ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈಯವರು ಮಾತನಾಡಿ, ಸ್ವಚ್ಚತಾ ಸೇನಾನಿಗಳಿಗೆ ಮನೆಯಲ್ಲಿ ಗೌರವ ಕೊಟ್ಟಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಸ್ವಚ್ಚತೆ ಎಂಬುದು ಮನೆಯಲ್ಲಿ ಆರಂಭವಾಗಿ ಬೀದಿಗೆ ಗ್ರಾಮಕ್ಕೆ ಬರಬೇಕು, ಸ್ವಚ್ಛತೆ ಎಂಬುದು ನಿರಂತರದ ಕರ್ತವ್ಯವಾಗಬೇಕು, ಸ್ವಚ್ಛ ಪರಿಸರ ನಮ್ಮ ಪರಿಸರವಾಗಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿ ಶುಭ ಹಾರೈಸಿದರು.

ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಸ್ವಚ್ಛತೆಯ ವಿಷಯದಲ್ಲಿ ತಾಲೂಕಿನಲ್ಲೇ ಅತ್ಯುತ್ತಮ ಕಾರ್ಯಕ್ರಮ ಆಗಿದೆ. ಆರ್ಯಾಪು ಗ್ರಾಪಂನಲ್ಲೂ ಪಿಡಿಓ,ಅಧಿಕಾರಿ ವರ್ಗ, ಸದಸ್ಯರು, ಅಧ್ಯಕ್ಷರು ಎಲ್ಲರೂ ಸೇರಿಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ ಆದರೆ ಕಸ ಹೆಕ್ಕಿದ ಮರುದಿನವೇ ಅಲ್ಲಿಗೆ ಕಸ ತಂದು ಹಾಕುವ ಕೆಲಸ ನಡೆದಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ನಾವು ಕಂಡು ಹಿಡಿಯಲೇಬೇಕಾಗಿದೆ. ಕಸ ಹಾಕುವವರನ್ನು ಹಿಡಿದು 10 ಸಾವಿರ ರೂ.ತನಕ ದಂಡ ಹಾಕಬೇಕು ಮತ್ತು ಅವರ ಹೆಸರನ್ನು ಪಬ್ಲಿಕ್ ಮಾಡಬೇಕು ಹೀಗೆ ಮಾಡಿದರೆ ಒಂದಷ್ಟು ಜಾಗೃತಿ ಮೂಡಲು ಸಾಧ್ಯ ಎಂದು ಬೂಡಿಯಾರ್ ಹೇಳಿದರು. ನಮ್ಮ ಮನೆಗೆ ಬರುವ ಸ್ವಚ್ಛತಾ ಸೇನಾನಿಗಳಿಗೆ ನಾವು ಚಹಾ ತಿಂಡಿ ಕೊಟ್ಟು ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಒಣ ಮತ್ತು ಹಸಿ ಕಸಗಳನ್ನು ವಿಂಗಡಣೆ ಮಾಡಿ ಕೊಡುತ್ತಿದ್ದೇವೆ. ಸ್ವಚ್ಚತಾ ಸೇನಾನಿಗಳಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಅದನ್ನು ನಾವು ಇಲ್ಲಿ ಮಾಡಿದ್ದೇವೆ ಎಂದ ಅವರು ಈ ರೀತಿ ಪ್ರತಿಯೊಂದು ಮನೆಯವರು ಮಾಡಬೇಕು ಎಂದು ಹೇಳಿದರು. ಕಳ್ಳತನಕ್ಕಿಂತಲೂ ಬೀದಿಗೆ ಕಸ ಹಾಕುವುದು ದೊಡ್ಡ ಅಪರಾಧವಾಗಿದೆ ಬೀದಿಗೆ ಕಸ ಹಾಕುವ ವ್ಯಕ್ತಿ ಕಳ್ಳನಿಗಿಂತಲೂ ಕಡೆ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗೇಶ್ ಎಂ.ರವರು ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಹೆಚ್ಚಾಗಿ ನಾವು ಗಣ್ಯರನ್ನು, ಸಾಧಕರನ್ನು ಹುಡುಕಿ ಅವರಿಗೆ ಸನ್ಮಾನ ಮಾಡುತ್ತೇವೆ ಆದರೆ ಸ್ವಚ್ಚತಾ ಸೇನಾನಿಗಳಿಗೆ ಗೌರವಾರ್ಪಣೆ ಮಾಡಿರುವುದು ಅದಕ್ಕಿಂತಲೂ ಹೆಚ್ಚು ಮಹತ್ವದ ಕೆಲಸವಾಗಿದೆ. ಸ್ವಚ್ಚತಾ ಸೇನಾನಿಗಳು ಕಸದವರು ಅಲ್ಲ ಬದಲಾಗಿ ಸ್ವಚ್ಛ ಮಾಡುವವರು ಯಾರೂ ಬೀದಿಗೆ ಕಸ ತಂದು ಹಾಕುತ್ತಾರೋ ಅವರು ಕಸದವರು ಎಂದ ಪಿಡಿಓರವರು ಆರ್ಯಾಪು ಗ್ರಾಪಂನಿಂದ ಗಾಜು ಹುಡಿ ಮಾಡಿ ವಿಲೇವಾರಿ ಮಾಡುವ ಘಟಕವನ್ನು ಆರಂಭಿಸುವ ಬಗ್ಗೆ ಯೋಚನೆ ಇದೆ ಎಂದ ಅವರು, ಪ್ಲಾಸ್ಟಿಕ್ ಮಹಾಮಾರಿಯಲ್ಲ ಆದರೆ ಪ್ಲಾಸ್ಟಿಕ್ ಅನ್ನು ಬಳಕೆ ಮಾಡುವ ರೀತಿ ಸರಿಯಾಗಿರಬೇಕು ಅದನ್ನು ಯಾವುದೇ ಕಾರಣಕ್ಕೂ ಸುಡಬಾರದು ಮತ್ತು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಆಗ ಅದು ಮಹಾಮಾರಿಯಾಗಲು ಸಾಧ್ಯವಿಲ್ಲ ಎಂದು ನಾಗೇಶ್ ಎಂ.ರವರು ಹೇಳಿದರು.

ಈ ಸಂದರ್ಭದಲ್ಲಿ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಬಿಜೆಪಿ ಕುರಿಯ ಬೂತ್ ಅಧ್ಯಕ್ಷ ಗಣೇಶ್ ರೈ ಬೂಡಿಯಾರ್,ಆನಂದ ರೈ ಡಿಂಬ್ರಿ,ರಾಮಯ್ಯ ಗೌಡ ಗಡಾಜೆ, ವಸಂತ ಗೌಡ ಕೊಡ್ಲಾರು, ಗಣೇಶ್ ಗೌಡ ಕೊಡ್ಲಾರು, ನಾರಾಯಣ ಕೊಡ್ಲಾರು, ಸುಧಾಮಣಿ ಜಿ.ರೈ ಬೂಡಿಯಾರ್, ಜಯಲಕ್ಷ್ಮೀ, ತಿಲಕ್ ರೈ ಕುತ್ಯಾಡಿ, ಅಶ್ವಿತ್, ರಾಧಾಕೃಷ್ಣ ಮುಂಡೂರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಿದ್ದ ಬೂಡಿಯಾರ್
ವಿಶೇಷವಾಗಿ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಬೇಕಾಗಿದೆ. ಈ ನಿಟ್ಟಿನಲ್ಲಿ 2017ರಲ್ಲಿ ಬೂಡಿಯಾರ್ ರಾಧಾಕೃಷ್ಣ ರೈಯವರು ಕುರಿಯ ಶಾಲೆಯ 100 ಮಕ್ಕಳಿಗೆ ಕಸ ಸಂಗ್ರಹದ ಮೂಲಕ ಸ್ವಚ್ಛತೆಯ ಅರಿವು ಮೂಡಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ 100 ಮಕ್ಕಳಿಗೂ ಬಹುಮಾನ ಕೂಡ ವಿತರಿಸಿದ್ದರು. ಸ್ವಚ್ಚತೆ ಎಂಬುದು ಮಕ್ಕಳಲ್ಲಿ ಬರಬೇಕು ಎಂದೇಳುವ ರೈಯವರು ನಮ್ಮ ಮನೆಯ ಮಕ್ಕಳಿಗೆ ಸ್ವಚ್ಚತೆಯ ಅರಿವು ಮೂಡಿಸುವ ಕೆಲಸ ಮಾಡಬೇಕು ಎನ್ನುತ್ತಾರೆ.

ಸ್ವಚ್ಚತಾ ಸೇನಾನಿಗಳಿಗೆ ನಗದಿನೊಂದಿಗೆ ಗೌರವಾರ್ಪಣೆ
ಆರ್ಯಾಪು ಗ್ರಾ.ಪಂನ ಸ್ವಚ್ಛತಾ ಸೇನಾನಿಗಳಾದ ಪುಷ್ಪಲತಾ ಸಂಪ್ಯ, ಉಷಾ ಸಂಪ್ಯ, ಪರಮೇಶ್ವರ ಕುಂಜೂರುಪಂಜರವರುಗಳನ್ನು ಶಾಲು,ಹಾರ ಹಾಕಿ, ಪೇಟಾ ತೊಡಿಸಿ ಫಲಪುಷ್ಪ ಹಾಗೂ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಒಂದು ಅಪರೂಪದ ಕಾರ್ಯಕ್ರಮ
ಮನೆಗೆ ಬಂದು ಕಸ ಸಂಗ್ರಹಿಸುತ್ತಿರುವ ಗ್ರಾಪಂ ಸ್ವಚ್ಚತಾ ಸೇನಾನಿಗಳಿಗೆ ಉಪಹಾರ ನೀಡುವುದು ಅಲ್ಲದೆ ಅವರ ಸೇವೆಯನ್ನು ಕಂಡು ಅವರಿಗೆ ತನ್ನ ಮನೆಯಲ್ಲೇ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವಿಸುವ ಮೂಲಕ ರಾಧಾಕೃಷ್ಣ ರೈಯವರು ಒಂದು ಅಪರೂಪದ ಮಾನವೀಯ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಅತಿಥಿಗಳಿಗೆ ಶ್ಲಾಘನ ವ್ಯಕ್ತಪಡಿಸಿದರು.

‘ನಮ್ಮ ಮನೆಯ ಕಸ ಸಂಗ್ರಹಿಸುವವರನ್ನು ನಾವು ಗೌರವದಿಂದ ಕಾಣುವುದು ನಮ್ಮ ಮಾನವೀಯತೆ ಆಗಿದೆ. ನನ್ನ ಮನೆಯಿಂದ ಕಸ ಸಂಗ್ರಹಿಸುತ್ತಿರುವ ಸ್ವಚ್ಚತಾ ಸೇನಾನಿಗಳಿಗೆ ನಾವು ಚಹಾ ತಿಂಡಿ ಕೊಟ್ಟು ಪ್ರೀತಿಯಿಂದ ಕಾಣುತ್ತೇವೆ. ಇಂತಹ ವ್ಯಕ್ತಿಗಳನ್ನು ಗೌರವಿಸುವುದು ನಮಗೆ ಹೆಮ್ಮೆ ತಂದಿದೆ.’
ಬೂಡಿಯಾರ್ ರಾಧಾಕೃಷ್ಣ ರೈ, ಉದ್ಯಮಿ, ಬೂಡಿಯಾರ್ ಗ್ಯಾಸ್ ಕುಂಬ್ರ

LEAVE A REPLY

Please enter your comment!
Please enter your name here