ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಹಾಗೂ ಉದನೆ ಪೇಟೆಯಲ್ಲಿ ವೇಗದೂತ ಬಸ್‌ಗಳ ನಿಲುಗಡೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶಿಸಿದೆ.
ಈ ಹಿಂದೆ ಉದನೆ ಹಾಗೂ ಶಿರಾಡಿಯಲ್ಲಿ ಕೆಎಸ್‌ಆರ್‌ಟಿಸಿ ವೇಗದೂತ ಬಸ್‌ಗಳ ನಿಲುಗಡೆ ಆಗುತ್ತಿರಲಿಲ್ಲ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ವೇಗದೂತ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಎಂಜಿರ ಮಲ್ನಾಡು ಹೋಟೆಲ್ ಬಳಿ ಇಲ್ಲವೇ ಗುಂಡ್ಯದಲ್ಲಿ ಇಳಿದು ಬೇರೆ ವಾಹನದಲ್ಲಿ ಸಂಚಾರ ಮಾಡಬೇಕಾಗಿತ್ತು. ಈ ವಿಚಾರ ಶಿರಾಡಿ ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡುವಂತೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುತ್ತಿರುವ ಎಲ್ಲಾ ವೇಗದೂತ ಸಾರಿಗೆಗಳನ್ನು ಶಿರಾಡಿ ಮತ್ತು ಉದನೆಯಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿ ಮಾರ್ಗಾಚರಣೆಗೊಳಿಸಲು ಸದ್ರಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಸಾರಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಇಲಾಖೆಯ ಹಿರಿಯ ಅಧಿಕಾರಿ ಜಾನ್ ಅಂತೋನಿ ಜಾರ್ಜ್ ಅವರು ಆದೇಶಿಸಿದ್ದಾರೆ.