ಕೊೖಲ: ಪಂಚಗ್ಯಾರಂಟಿ ಯೋಜನೆ ನೋಂದಣೆ ಶಿಬಿರ

0

ಕಡಬ ತಾಲೂಕಿಗೆ 141 ಕೋಟಿ ರೂ.ಅನುದಾನ: ಸುಧೀರ್‌ಕುಮಾರ್ ಶೆಟ್ಟಿ

ರಾಮಕುಂಜ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ಮತ್ತು  ಕೊೖಲ, ರಾಮಕುಂಜ ಹಾಗೂ ಗೋಳಿತ್ತೊಟ್ಟು ಗ್ರಾ.ಪಂ. ಸಹಯೋಗದಲ್ಲಿ  ಕೊೖಲ, ರಾಮಕುಂಜ, ಹಳೆನೇರೆಂಕಿ, ಗೋಳಿತ್ತೊಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಯಡಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣೆ ಅಭಿಯಾನ ಮಾ.6ರಂದು  ಕೊೖಲ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆ ಕಡಬ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿಯವರು ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಯುವನಿಧಿ ಕಡಬ ತಾಲೂಕಿನಲ್ಲಿ ಶೇ.95ರಷ್ಟು ಯಶಸ್ವಿಯಾಗಿದೆ. ಈ ಯೋಜನೆಗಳಿಗೆ ಕಳೆದ ಡಿಸೆಂಬರ್ ತನಕ ಕಡಬ ತಾಲೂಕಿಗೆ 141 ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳಿದರು. ತಾಂತ್ರಿಕ ಕಾರಣಗಳಿಂದಾಗಿ ಕೆಲವರಿಗೆ ಯೋಜನೆ ಸಿಗುತ್ತಿಲ್ಲ. ಇದು ಸರಕಾರದಿಂದ ಆಗಿರುವ ಲೋಪವಲ್ಲ. ಈ ಸಮಸ್ಯೆಯನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಅರ್ಹರಿಗೆ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಲಾಗುವುದು ಎಂದು ಹೇಳಿದ ಅವರು, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಮನವಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಡಬ ತಾಲೂಕಿನ ಶಿರಾಡಿ, ಉದನೆಯಲ್ಲಿ ವೇಗದೂತ ಬಸ್‌ಗಳ ನಿಲುಗಡೆಗೆ ಆದೇಶವಾಗಿದೆ. ಜನರ ಸಮಸ್ಯೆಗೆ ಅನುಷ್ಠಾನ ಸಮಿತಿ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಅನುಷ್ಠಾನ ಸಮಿತಿ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಸರಕಾರ ಬಡವರಿಗೆ ಆರ್ಥಿಕ ಸ್ವಾವಲಂಬನೆ ನೀಡಿದೆ. ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಪ್ರಯೋಜನ ಸಿಗುವಂತೆ ಮಾಡಲಾಗುವುದು ಎಂದರು. ಇನ್ನೋರ್ವ ಸದಸ್ಯೆ ಉಷಾ ಅಂಚನ್ ಅವರು ಮಾತನಾಡಿ, ರಾಜ್ಯ ಸರಕಾರ ಘೋಷಿಸಿರುವ ಪಂಚಗ್ಯಾರಂಟಿ ಯೋಜನೆ ಯಾವ ಅರ್ಹ ಫಲಾನುಭವಿಗೆ ಸಿಗುತ್ತಿಲ್ಲವೋ ಆ ಫಲಾನುಭವಿಯನ್ನು ಗುರುತಿಸಿ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ಅನುಷ್ಠಾನ ಸಮಿತಿ ರಚನೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಯಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ ಎಂದರು. ಸದಸ್ಯ ಎ.ಕೆ.ಬಶೀರ್ ಮಾತನಾಡಿ, ಕೊೖಲ, ರಾಮಕುಂಜ, ಹಳೆನೇರೆಂಕಿ ಗ್ರಾಮದ ಜನರ ಮನೆ ಬಾಗಿಲಿಗೆ ಪಂಚ ಗ್ಯಾರಂಟಿ ಯೋಜನೆ ಮುಟ್ಟಿಸಲು ಸಿದ್ಧನಿದ್ದೇನೆ. ಈ ಮೂರು ಗ್ರಾಮದ ಜನತೆ ಯಾವುದೇ ಸಮಸ್ಯೆ ಇದ್ದರೂ ಸಂಪರ್ಕಿಸುವಂತೆ ಹೇಳಿದರು.

ಯುವನಿಧಿ ಯೋಜನೆ ಕುರಿತು ಮಾಹಿತಿ ನೀಡಿದ ಇಲಾಖೆಯ ಅರುಣ್‌ಕುಮಾರ್ ಅವರು, ಯುವ ನಿಧಿ ಯೋಜನೆಯಡಿ ಕಡಬ ತಾಲೂಕಿನಲ್ಲಿ 308 ಅರ್ಜಿಗಳ ನೋಂದಾವಣೆಯಾಗಿದ್ದು ಈ ಪೈಕಿ 227 ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದು 32.86 ಲಕ್ಷ ರೂ.ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ನೆಲ್ಯಾಡಿ, ಸುಬ್ರಹ್ಮಣ್ಯದಲ್ಲಿ ಯುವನಿಧಿ ನೋಂದಾವಣೆ ಶಿಬಿರ ನಡೆಸಲಾಗುವುದು ಎಂದು ಹೇಳಿದರು. ಫಲಾನುಭವಿಗಳ ಜೊತೆಗೆ ಕೊೖಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಸ್ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯ ಯತೀಶ್ ಬಾನಡ್ಕ, ಕೊೖಲ ಗ್ರಾ.ಪಂ.ಸದಸ್ಯೆ ಸಫಿಯಾ, ನೀತಾ, ಪಂಚ ಗ್ಯಾರಂಟಿ ಯೋಜನೆ ಕಡಬ ತಾಲೂಕು ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿ ಶಂಕರ್, ಸತೀಶ್ ಇಚ್ಲಂಪಾಡಿ, ಅವಿನಾಶ್ ಬೈತಡ್ಕ, ಹರಿಣಾಕ್ಷಿ, ಜಗದೀಶ್, ಸಿ.ಜೆ.ಸೈಮನ್, ಅಂಗನವಾಡಿ ಮೇಲ್ವಿಚಾರಕಿ ನಂದನಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಡಬ ತಾ.ಪಂ. ಪ್ರಭಾರ ಸಹಾಯಕ ನಿರ್ದೇಶಕರೂ, ಕೊೖಲ ಗ್ರಾ.ಪಂ.ಪಿಡಿಒ ಆದ ಸಂದೇಶ್ ಸ್ವಾಗತಿಸಿ, ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್‌ಕುಮಾರ್ ವಂದಿಸಿದರು. ಅನುಷ್ಠಾನ ಸಮಿತಿ ನೋಡೆಲ್ ಅಧಿಕಾರಿ ಭರತ್‌ರಾಜ್ ನಿರೂಪಿಸಿದರು. ತಾ.ಪಂ.ನ ಗೋಪಿನಾಥ್, ರಾಮಕುಂಜ ಗ್ರಾ.ಪಂ.ಕಾರ್ಯದರ್ಶಿ ಲಲಿತಾ, ಕೊೖಲ ಗ್ರಾ.ಪಂ.ಕಾರ‍್ಯದರ್ಶಿ ಪಮ್ಮು ಮತ್ತಿತರರು ಸಹಕರಿಸಿದರು. ಗೃಹಜ್ಯೋತಿ, ಯುವನಿಧಿ, ಶಕ್ತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ಯೋಜನೆಯ ಮಾಹಿತಿ ನೀಡಿ ಅರ್ಜಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here