ಪುತ್ತೂರು: ಭಾರತೀಯ ಭೂ ಸೇನೆಯ ಬಿಹಾರದ ತರಬೇತಿ ಕೇಂದ್ರದಲ್ಲಿ ಅಧಿಕಾರಿ ತರಬೇತಿ ಮುಗಿಸಿ ಭಾರತೀಯ ಭೂ ಸೇನೆಯ ಇನ್ಫ್ಯಾಂಟ್ರಿ ವಿಭಾಗದ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿರುವ ಸುರತ್ಕಲ್ ಅಗರಮೇಲು ನಿವಾಸಿ ಆಕಾಶ್ ಆರ್. ಅವರು ಮಾ.೯ರಂದು ಬೆಳಿಗ್ಗೆ ೭ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ನೇತೃತ್ವದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ಆಕಾಶ್ ಆರ್. ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ತೆರೆದ ವಾಹನದಲ್ಲಿ ಮೆರವಣಿಗೆ ಮತ್ತು ವಾಹನ ಜಾಥಾದ ಮೂಲಕ ಸುರತ್ಕಲ್‌ಗೆ ಕರೆದುಕೊಂಡು ಹೋಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಉರುವ ನಿವಾಸಿಯಾಗಿದ್ದು ಸುರತ್ಕಲ್‌ನಲ್ಲಿ ಉದ್ಯಮಿಯಾಗಿರುವ ರತ್ನಾಕರ ಮತ್ತು ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಮೀಳಾ ಅವರ ಪುತ್ರ ಆಕಾಶ್ ಅವರನ್ನು ಬರಮಾಡಿಕೊಳ್ಳುವ ವೇಳೆ ಪುತ್ತೂರಿನಿಂದ ಹಲವರು ಭಾಗಿಯಾಗಿದ್ದರು.