ಇಲ್ಲಿಂದಲೇ ಪರಿಷತ್ತಿನ ಯೋಜನೆಗಳು ಕಾರ್ಯರೂಪಕ್ಕೆ-ಯು.ಪೂವಪ್ಪ
ಪುತ್ತೂರು:ವಿಶ್ವಹಿಂದು ಪರಿಷತ್‌ನ ಜಿಲ್ಲಾ ಕೇಂದ್ರ ಮತ್ತು ಪರಿಷತ್ತಿನ ಪ್ರಧಾನ ಕಾರ್ಯಾಲಯವಾಗಿ ಮೂಡಿ ಬರಲಿರುವ ಪುತ್ತೂರಿನ ವಿಶ್ವಹಿಂದು ಪರಿಷತ್ ಕಟ್ಟಡ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದು,ಕಟ್ಟಡ ನಿರ್ಮಾಣಕ್ಕೆ ಮಾ.12ರಂದು ಅಧಿಕೃತ ಚಾಲನೆ ನೀಡಲಾಗಿದೆ.
ವಿಶ್ವಹಿಂದು ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾಗಿರುವ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಯು.ಪೂವಪ್ಪ ಅವರು ಗುತ್ತಿಗೆದಾರ ಸಂಸ್ಥೆ ಅವನಿ ಗ್ರೂಪ್ಸ್ ಮಂಗಳೂರು ಇವರಿಗೆ ಭವನದ ನೀಲ ನಕಾಶೆಯನ್ನು ನೀಡಿ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಸದಸ್ಯರಾದ ರೂಪಲೇಖಾ, ದಾಮೋದರ್ ಪಾಟಾಳಿ, ವಿಶ್ವನಾಥ ಕುಲಾಲ್, ಲೋಕೇಶ್ ಹೆಗ್ಡೆ ಉಪಸ್ಥಿತರಿದ್ದರು.
ಇಲ್ಲಿಂದಲೇ ಪರಿಷತ್ತಿನ ಯೋಜನೆಗಳು ಕಾರ್ಯರೂಪಕ್ಕೆ:
ವಿಶ್ವಹಿಂದು ಪರಿಷತ್‌ನಿಂದ ಗ್ರಾಮ ಗ್ರಾಮಕ್ಕೂ ಸಮಿತಿಗಳನ್ನು ವಿಸ್ತರಿಸಿ, ದೇಶ-ಧರ್ಮ-ಸಂಸ್ಕೃತಿಗಳ ಉಳಿವು ಮತ್ತು ಬೆಳವಣಿಗಾಗಿ ಮನೆ ಮನೆಗಳನ್ನು ವ್ಯಕ್ತಿ ವ್ಯಕ್ತಿಗಳನ್ನು ಸಂಪರ್ಕಿಸಿ ಸಂಘಟನೆಯೊಂದಿಗೆ ಜೋಡಿಸುವ ಕಾರ್ಯ ಮಾಡಬೇಕಾಗಿದೆ.ಇದು ನಮ್ಮ ವಿಶ್ವಹಿಂದು ಪರಿಷತ್ತಿನ ಜಿಲ್ಲಾ ಕೇಂದ್ರ ಮತ್ತು ಪರಿಷತ್ತಿನ ಪ್ರಧಾನ ಕಾರ್ಯಾಲಯ.ಪ್ರಚಾರಕರು, ಪೂರ್ಣಾವಧಿ ಕಾರ್ಯಕರ್ತರ ವಾಸಸ್ಥಾನ.ಇಲ್ಲಿಂದಲೇ ಪರಿಷತ್ತಿನ ಯೋಜನೆಗಳೆಲ್ಲವೂ ರೂಪುಗೊಂಡು ಕಾರ್ಯರೂಪಕ್ಕೆ ಬರಲಿದೆ.ಕಾರ್ಯಚಟುವಟಿಕೆಗಳು, ಕಾರ್ಯವಿಸ್ತಾರ ಮತ್ತು ಅವಶ್ಯಕತೆಗಳಿಗನುಸಾರವಾಗಿ ಅದೇ ಸ್ಥಳದಲ್ಲಿ ಹೊಸ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಈ ಭವನದಲ್ಲಿ ನಿತ್ಯ ವ್ಯಾಯಾಮ, ಯೋಗಾಭ್ಯಾಸ, ಸಾಪ್ತಾಹಿಕ ಸತ್ಸಂಗ, ಬಾಲ ಸಂಸ್ಕಾರ ಕೇಂದ್ರ, ಸೇವಾ ಚಟುವಟಿಕೆಗಳು, ಅಭ್ಯಾಸವರ್ಗಗಳು ನಿರಂತರವಾಗಿ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾಗಿರುವ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಯು.ಪೂವಪ್ಪ ಅವರು ತಿಳಿಸಿದ್ದಾರೆ.