ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಿಂದ ‘ಜಾನ್ ಡೋ’ ಆದೇಶ
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಮತ್ತವರ ಕುಟುಂಬದ ವಿರುದ್ಧ ಅವಹೇಳನ-ಅಪಪ್ರಚಾರ ಮಾಡುವವರ ವಿರುದ್ಧ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಜಾನ್ ಡೋ (ಅಶೋಕ ಕುಮಾರ್)ಆದೇಶ ನೀಡಿದೆ.
ಒಎಸ್ 2145/2025 ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಈ ಆದೇಶದನ್ವಯ ಯಾರೇ ಆಗಲಿ ಧರ್ಮಸ್ಥಳ ಕ್ಷೇತ್ರ, ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿತ ಸಂಸ್ಥೆಗಳ ವಿರುದ್ಧ ಅವಹೇಳನಾಕಾರಿ ಮತ್ತು ಅಪಪ್ರಚಾರ ಮಾಡುವ ಮಾಹಿತಿಯನ್ನು ಪ್ರಕಟಿಸಲು ಅಥವಾ ಹರಡಲು ಅವಕಾಶವಿರುವುದಿಲ್ಲ.
ಏನಿದು ಜಾನ್ ಡೋ (ಅಶೋಕ ಕುಮಾರ್) ಆದೇಶ?:
‘ಜಾನ್ ಡೋ’ ಆದೇಶ ಅಂದರೆ ಯಾವುದೇ ಅಪರಿಚಿತನ ವಿರುದ್ಧ ಹೊರಡಿಸುವ ನಿರ್ಬಂಧ ಆದೇಶ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಅಪರಿಚಿತ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡುವ ಆದೇಶವಿದು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಇತರ ಆನ್‌ಲೈನ್ ತಾಣಗಳಲ್ಲಿ ಅವಹೇಳನಕಾರಿ ಮತ್ತು ಅಪಪ್ರಚಾರ ಹೆಚ್ಚಿರುವ ಕಾರಣ, ಇದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.ಯಾರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆಯೋ ಆ ವ್ಯಕ್ತಿ ಅಥವಾ ಸಂಸ್ಥೆಯ ಗುರುತು ಗೊತ್ತಿಲ್ಲದಿದ್ದಾಗ ಈ ‘ಜಾನ್ ಡೋ’ ಆದೇಶ ಅಥವಾ ನಿರ್ಬಂಧ ಹೊರಡಿಸಲಾಗುತ್ತದೆ. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಗುರುತು ಮುಚ್ಚಿಟ್ಟು ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಬರೆಯುವವರ ವಿರುದ್ಧ ಈ ಆದೇಶ ಹೊರಡಿಸಲಾಗುತ್ತದೆ.
ಭಾರತದಲ್ಲಿ ಇದಕ್ಕೆ ‘ಅಶೋಕ್ ಕುಮಾರ್’ ನಿರ್ಬಂಧ ಎಂದು ಹೇಳಲಾಗುತ್ತದೆ. ಪ್ರಸ್ತುತ ಆದೇಶದ ಪ್ರಕಾರ ಧರ್ಮಸ್ಥಳ ಕ್ಷೇತ್ರ, ಕ್ಷೇತ್ರಕ್ಕೆ ಸಂಬಂಧಿತ ಸಂಸ್ಥೆಗಳು ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಅಪಪ್ರಚಾರ ಮಾಡುವುದು, ಅಂತಹ ವಿಚಾರಗಳನ್ನು ಹಂಚಿಕೊಳ್ಳುವುದು ಅಥವಾ ಹರಡುವುದಕ್ಕೆ ನಿಷೇಧ ಇರುತ್ತದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಆದೇಶದ ಪ್ರಕಾರ, ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಯಾವುದೇ ಅವಹೇಳನಕಾರಿ ವಿಚಾರ ಹಂಚಿಕೊಂಡಿದಿದ್ದಲ್ಲಿ ತಕ್ಷಣ ಅಳಿಸಿ ಹಾಕಬೇಕು. ಈ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಹಿರಿಯ ನ್ಯಾಯವಾದಿ ಎಸ್. ರಾಜಶೇಖರ್ ಹಿಳಿಯಾರು ವಾದಿಸಿದ್ದರು.