ಉಪ್ಪಿನಂಗಡಿ: ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ಗಯಾಪದ ರಂಗ ಸಂಭ್ರಮ ಮತ್ತು ಕಲಾ ಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮಾ.25ರಂದು ರಾತ್ರಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ.ರಾಧ ಶಾಂತಿನಗರ ಮತ್ತು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಶುಭ ಕೋರಿದರು.
ಉಬಾರ್ ಗಯಾಪದ ಕಲಾವಿದೆರ್ ತಂಡದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ ಅವರು ಸರ್ವರ ಸಹಕಾರ ಕೋರಿದರು. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಟಕ ರಚನೆಕಾರ, ನಿರ್ದೇಶಕ, ಕಲಾವಿದರೂ ಆಗಿರುವ ಉದ್ಯಮಿ ಕಲಾ ತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲ ಅವರನ್ನು ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಕಲಾ ಮಾಣಿಕ್ಯ ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು.
ಬಳಿಕ ಕಲಾ ಪೋಷಕರಿಗೆ ಮತ್ತು ನಾಟಕ ತಂಡದ ಕಲಾವಿದರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಹಿರಿಯ ಕಲಾವಿದ ರಂಗಯ್ಯ ಬಳ್ಳಾಲ್ ಕೆದಂಬಾಡಿಬೀಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಕಿಶೋರ್ ಕುಮಾರ್ ಜೋಗಿ ವಂದಿಸಿದರು. ಸುನಿಲ್ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು. ಚಿನ್ಮಯಿ ಜೋಗಿ ಮತ್ತು ಚೈತನ್ಯ ಜೋಗಿ ಪ್ರಾರ್ಥಿಸಿದರು. ಸುಧಾಕರ ಕೋಟೆ ಸನ್ಮಾನಪತ್ರ ವಾಚಿಸಿದರು. ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಕಾರ್ತಿಕ್ ಶಾಸ್ತ್ರಿ ಮಣಿಲ ಮತ್ತು ಗುಣಕರ ಅಗ್ನಾಡಿ ಅತಿಥಿಗಳನ್ನು ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಗಯಾಪದ ಕಲಾವಿದೆರ್ ಉಬಾರ್ ತಂಡದಿಂದ ತುಳುಭೂಮಿಯಲ್ಲಿ ಸಂಚಲನ ಮೂಡಿಸಿದ ಅದ್ದೂರಿ ರಂಗವಿನ್ಯಾಸದ ರೋಚಕ ಸನ್ನಿವೇಶಗಳಿಂದ ಕೂಡಿದ ತುಳು ಚಾರಿತ್ರಿಕ ಪೌರಾಣಿಕ ನಾಟಕ ನಾಗಮಾಣಿಕ್ಯ ಪ್ರದರ್ಶನಗೊಂಡಿತು.