ʼಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 4000ರೂ. ಸಿಗಬಹುದು- ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ಅಪಪ್ರಚಾರʼ : ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ

0

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ 2000ರೂ ಅಕೌಂಟಿಗೆ ಬರುತ್ತಿದೆ. ಇದೇ ಯೋಜನೆ ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ 4000 ರೂ ಆದರೂ ಆಗಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಕೆಳಗಿನ ಮನೆ ಜಗನ್ನಾಥ ಶೆಟ್ಟಿ ಅವರ ಮನೆಯಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸರಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾರಣ ಜನ ಇಂದು‌ ನೆಮ್ಮದಿಯಿಂದ ಇದ್ದಾರೆ. ಪ್ರತೀ ಕುಟುಂಬ ನೆಮ್ಮದಿಯ ಜೀವನ ಮಾಡುವಂತಾಗಿದೆ,ಇದು ಮುಂದೆಯೂ ಮುಂದುವರೆಯಬೇಕಾದರೆ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.‌ಕಾಂಗ್ರೆಸ್ ಸರಕಾರ ಮಾತ್ರ ಬಡವರ ಪರ ಕೆಲಸ ಮಾಡುತ್ತದೆ ಇದನ್ನು ಜನ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿಯವರ ಅಪಪ್ರಚಾರ
ಕಾಂಗ್ರೆಸ್ ಹಿಂದೂ ವಿರೋಧಿಯಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ,ಕಾಂಗ್ರೆಸ್ ಎಲ್ಲಾ ಧರ್ಮವನ್ನು ಗೌರವಿಸುವ ಪಕ್ಷ ಇದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಇದಕ್ಕೆ ಈ ಅಪಪ್ರಚಾರ ಎಂದರು.
ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರುವ ಕನಸು ಕಾಣುವ ಬಿಜೆಪಿಗೆ ಅಭಿವೃದ್ದಿ ಕೆಲಸ ಬೇಕಿಲ್ಲ, ವೋಟಿನ ಸಮಯದಲ್ಲಿ ಹಿಂದೂ- ಮುಸ್ಲಿಂ ವಿಚಾರ ಹೇಳಿದರೆ ಜನ ವೋಟು ಹಾಕುತ್ತಾರೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪ್ರತೀ ಬಾರಿ ಚುನಾವಣೆ ಸಮಯದಲ್ಲಿ ಹಿಂದೂ‌ ಮುಸ್ಲಿಂ ವಿಚಾರವನ್ನು ಬಿಜೆಪಿ‌ ಮುನ್ನೆಲೆಗೆ ತರುತ್ತಿದೆ ,‌ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಪಾಯವಿದೆ ಎಂದು ಸುಳ್ಳು ಹೇಳಿ ಜನರ ದಿಕ್ಕು‌ ತಪ್ಪಿಸುತ್ತಾರೆ. ಕಾಂಗ್ರೆಸ್ ನಿಂದ ಲಾಭ ಪಡೆದವರೂ ಕಾಂಗ್ರೆಸ್ ಗೆ ವಿರುದ್ದವಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ಶಾಸಕರು ಹೇಳಿದರು.

ಕೋಮು ವಿಷ ಬೀಜ ಬಿತ್ತಿದ್ದು ಮಾತ್ರ. ಬಿಜೆಪಿ ವಲಯ ಅಧ್ಯಕ್ಷನ ಅಕ್ರಮ ಸಕ್ರಮವೂ ಮಾಡಿಲ್ಲ:
ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರತೀ ವಿಚಾರದಲ್ಲೂ ಕೋಮು ವಿಷ ಬೀಜ ಬಿತ್ತಿದ್ದೇ ವಿನಃ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷನ ಅಕ್ರಮ ಸಕ್ರಮವನ್ನೂ ಮಾಡಿಕೊಟ್ಟಿಲ್ಲ, ಯಾವುದೇ ಕೆಲಸ ಮಾಡದೇ ಇದ್ದರೂ ಧರ್ಮದ ವಿಚಾರವನ್ನು ಮುಂದಿಟ್ಟು ವೋಟು ಪಡೆಯಬಹುದು ಎಂಬ ನಂಬಿಕೆ ಬಿಜೆಪಿಯವರಲ್ಲಿದೆ ಇದನ್ನು ಜನ ಹುಸಿ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಇಲ್ಲದಿದ್ರೆ ಯಾವುದೂ ಇಲ್ಲ:
ಕಾಂಗ್ರೆಸ್ ಸರಕಾರ ಇದ್ದ ಕಾರಣ ಇಂದು ತಿಂಗಳಿಗೆ 2000, ಕರೆಂಟ್ ಬಿಲ್ ಫ್ರೀ ,ಬಸ್ ಫ್ರೀ, ಅಕ್ಕಿ ಫ್ರೀ ಇದೆ ,ಕಾಂಗ್ರೆಸ್ ಇಲ್ಲದಿದ್ರೆ ಇದಾವುದೂ ಇಲ್ಲ , ನಾಳೆ ನಮ್ಮ‌ ಮತ್ತು ನಮ್ಮ ಮಕ್ಕಳ ನೆಮ್ಮದಿಗಾಗಿ ಕಾಂಗ್ರೆಸ್ ಸರಕಾರ ಅತೀ ಅಗತ್ಯವಾಗಿದೆ ಎಂದು ಶಾಸಕರು ಹೇಳಿದರು.

ಬಿಜೆಪಿಯವರ ಮನೆಯವರಿಗೂ ದುಡ್ಡು ಬರುತ್ತಿದೆ: ಜಗನ್ನಾಥ ಶೆಟ್ಟಿ
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಯ‌ ಲಾಭ ಬಿಜೆಪಿಗೂ ದೊರೆಯುತ್ತಿದೆ, ಬಿಜೆಪಿ ಮುಖಂಡನ ಹೆಂಡತಿಗೂ ಹಣ ಬರುತ್ತಿದೆ.‌ಇಲ್ಲಿರುವ ಪ್ರತೀಯೊಂದು ಕುಟುಂಬವೂ ಕಾಂಗ್ರೆಸ್ ನಿಂದ ಲಾಭ ಪಡೆದವರೇ ಇದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆಳಗಿನ ಮನೆ ಜಗನ್ನಾಥ ಶೆಟ್ಟಿ ಹೇಳಿದರು.

ದಲಿತ ಹೆಣ್ಣಿಗೆ ಅನ್ಯಾಯವಾದಾಗ ಬಿಜೆಪಿಯವರು ಹೋಗಿಲ್ಲ: ಪದ್ಮನಾಭ ಪೂಜಾರಿ
ಮಾಣಿಲ ಗ್ರಾಮದಲ್ಲಿ ದಲಿತ ಹೆಣ್ಣು‌ಮಗಳ ಮೇಲೆ ಅತ್ಯಾಚಾರ ಆದಾಗ ಆ ಕುಟುಂಬಕ್ಕೆ ಸಾಂತ್ವನ ಹೇಳಲು ಒಬ್ಬನೇ ಒಬ್ಬ ಬಿಜೆಪಿಯವರು ಹೋಗಿಲ್ಲ ಯಾಕೆ?ಪ್ರತೀಯೊಂದಕ್ಕೂ ಹಿಂದೂ ಹಿಂದೂ ಎಂದು ಬೊಬ್ಬೆ ಹಾಕುವ ಬಿಜೆಪಿಯವರಿಗೆ ದಲಿತ ಹೆಣ್ಣು‌ಮಗಳು ಹಿಂದುವಾಗಿ ಕಾಣದೇ ಇದ್ದದ್ದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯವರು ಹಿಂದೂ ಮುಸ್ಲಿಂ ವಿಚಾರದಲ್ಲಿ ಬೆಂಕಿ ಹಚ್ಚುವುದು ಮಾತ್ರ. ಅವರದ್ದು ನಕಲಿ ಹಿಂದುತ್ವ, ಅಧಿಕಾರದ ಹಿಂದುತ್ವವಾಗಿದೆ.‌ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಅಡ್ಡಿ ಪಡಿಸಿದ್ದು ಬಿಜೆಪಿಯ ಹಿಂದುತ್ವವಾ? ಎಂದು ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಆರೋಪಿಸಿದರು.


ವೇದಿಕೆಯಲ್ಲಿ ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಮಾಣಿಲ ಗ್ರಾ.ಪಂ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ವಲಯ ಅಧ್ಯಕ್ಷ ವಿಷ್ಣು ಭಟ್, ಸೂರಜ್,ಬಾಲಕೃಷ್ಣ, ಬೂತ್ ಅಧ್ಯಕ್ಷ ಜಯರಾಂ ಬಳ್ಳಾಲ್, ಪ್ರಶಾಂತ್ ಮಾಣಿಲ,ಬೂತ್ ಅಧ್ಯಕ್ಷ ಪಿ ಕೆ ನಾರಾಯಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here