ಮುಕ್ಕೂರು : ನಿವೃತ್ತಿ ಹೊಂದಿದ್ದ ಶಿಕ್ಷಕಿ ಲಲಿತಾ ಕುಮಾರಿ ಅವರಿಗೆ ಗೌರವಾರ್ಪಣೆ

0

ಮುಕ್ಕೂರು ಶಾಲೆ ನನ್ನ ತಾಯಿ ಮನೆ ಇದ್ದ ಹಾಗೆ : ಲಲಿತಾ ಕುಮಾರಿ
ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ಲಲಿತಾ ಕುಮಾರಿ ನಮಗೆಲ್ಲ ಮಾದರಿ : ಜಗನ್ನಾಥ ಪೂಜಾರಿ ಮುಕ್ಕೂರು

ಮುಕ್ಕೂರು : ಮುಕ್ಕೂರು ಶಾಲೆ ನನ್ನ ತಾಯಿ ಮನೆ ಇದ್ದ ಹಾಗೆ. ಇಲ್ಲಿನ ಮಕ್ಕಳ, ಊರಿನವರ ಮೇಲೆ ನನ್ನ ಪ್ರೀತಿ ತುಸು ಹೆಚ್ಚೆ. ಅಂತಹ ಭಾವನಾತ್ಮಕ ಸಂಬಂಧ ಹೊಂದಿರುವ ಮುಕ್ಕೂರು ಶಾಲೆ ಬದುಕಿನೊದ್ದಕ್ಕೂ ಮರೆಯಲಾಗದ ಸಂಸ್ಥೆ ಎಂದು ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಹೇಳಿದರು.

ಪೆರುವಾಜೆ ಸ.ಹಿ.ಪ್ರಾ.ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಲಲಿತಾ ಕುಮಾರಿ ಅವರಿಗೆ ಮುಕ್ಕೂರು ಶಾಲೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಶಾಲಾ ವತಿಯಿಂದ ಎ.8 ರಂದು ಸಮ್ಮಾನ ಸಮಾರಂಭದ ನಡೆಯಿತು.

1996 ರಲ್ಲಿ ಶಿಕ್ಷಕಿಯಾಗಿ ಮುಕ್ಕೂರಿಗೆ ಬಂದೆ. ಆಗ ಈ ಊರಿನ ಸಂಪರ್ಕಕ್ಕೆ ವಾಹನಗಳು ಇಲ್ಲದ ಕಾಲಘಟ್ಟ‌ವದು. ಪಾಲ್ತಾಡಿಯಿಂದ ನಡೆದುಕೊಂಡೇ ಬಂದ ದಿನ ಚೆನ್ನಾಗಿ ನೆನಪಿದೆ. ಅನಂತರ ಈ ಊರೇ ನನ್ನ ನೆಲೆಯಾಯಿತು. ಪ್ರಾರಂಭದ ದಿನಗಳಲ್ಲಿ ಶಾಲೆಯ ಕಟ್ಟಡದಲ್ಲೇ ಉಳಿದುಕೊಂಡು ಬದುಕು ಸಾಗಿಸಿದೆ. ಸುದೀರ್ಘ ಪಯಣದಲ್ಲಿ ಊರಿನವರು, ಶಾಲೆಯವರು ತೋರಿದ ಪ್ರೀತಿಗೆ ಆಬಾರಿ ಎಂದು ಲಲಿತಾ ಕುಮಾರಿ ಸ್ಮರಿಸಿದರು.ಶಿಕ್ಷಕನ ಸಾರ್ಥಕತೆ ಎಂದರೆ ಶಾಲಾ ಬಿಟ್ಟ ಮೇಲೂ ನಮ್ಮಿಂದ ಪಾಠ ಹೇಳಿಸಿಕೊಂಡ ಮಕ್ಕಳು ನಮ್ಮನ್ನು ನೋಡಿ ಖುಷಿಯಿಂದ ಮಾತನಾಡುವುದು. ಆ ಪ್ರೀತಿಯನ್ನು ವೃತ್ತಿಯೊದ್ದಕ್ಕೂ ಕಂಡಿದ್ದೇನೆ. ಇದು ಬೆಲೆ ಕಟ್ಟಲಾಗದ ಪ್ರೀತಿ. ಅದು ಭಾವನಾತ್ಮಕ ಸಂಬಂಧದ ಸಂಕೇತ ಎಂದು ಲಲಿತಾ ಕುಮಾರಿ ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ಲಲಿತಾ ಕುಮಾರಿ ಅವರು ನಮಗೆಲ್ಲ ಮಾದರಿ. ನೂರಾರು ವಿದ್ಯಾರ್ಥಿಗಳ ಬದುಕಿನಲ್ಲಿ‌ ಬೆಳಕಾಗಿ, ದಾರಿ ತೋರಿದವರು. ವೃತ್ತಿಯೊದ್ದಕ್ಕೂ ಮಕ್ಕಳ, ಪೋಷಕರ ಪ್ರೀತಿ ಸಂಪಾದಿಸಿದ್ದಾರೆ. ಅವರ ಭವಿಷ್ಯದ ಬದುಕು ಕೂಡ ಸುಂದರವಾಗಿರಲಿ ಎಂದರು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಶಿಕ್ಷಕ ವೃತ್ತಿ ಎಲ್ಲದಕ್ಕಿಂತ ಮಿಗಿಲಾದದು. ಸಾವಿರಾರು ಮಂದಿಯ ವ್ಯಕ್ತಿತ್ವ ವಿಕಸನ ಮಾಡುವ ಮಹತ್ವದ ಕಾರ್ಯ ಶಿಕ್ಷಕರಿಂದ ಆಗುತ್ತದೆ. ಪ್ರತಿ ವ್ಯಕ್ತಿಗೆ ವಿದ್ಯೆ ಕಲಿಸಿದ ಶಿಕ್ಷಕರು ದೇವರಿಗೆ ಸಮಾನ ಎಂದ ಅವರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಲಲಿತಾ ಕುಮಾರಿ ಸಮ್ಮಾನಕ್ಕೆ ಅರ್ಹ ವ್ಯಕ್ತಿ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಶಿಕ್ಷಕಿಯಾಗಿ ಲಲಿತಾ ಕುಮಾರಿ ಅವರು ಪ್ರಾಮಾಣಿಕತೆ ಸೇವೆಯ ಜತೆಗೆ ಮಕ್ಕಳ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ನಮ್ಮ ಊರಿನವರು ಕೂಡ. ಅವರ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ ಎಂದರು.

ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಮುಕ್ಕೂರು ಶಾಲಾ ಹಿತ ಚಿಂತನ ಸಮಿತಿಯ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಹಿರಿಯ ವಿದ್ಯಾರ್ಥಿ ಪುರುಷೋತ್ತಮ ಕುಂಡಡ್ಕ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್ ಡಿಎಂಸಿ ಉಪಾಧ್ಯಕ್ಷೆ ಗುಣಶ್ರೀ ಬೀರುಸಾಗು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಕವಿತಾ ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಲತಾ ಸ್ವಾಗತಿಸಿದರು. ಅಪೂರ್ವ ಸಮ್ಮಾನ ಪತ್ರ ವಾಚಿಸಿದರು. ಸಹ ಶಿಕ್ಷಕಿ ಸೌಮ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here