*ಕೇಂದ್ರ ಸರಕಾರದ ಯೋಜನೆಗಳಿಂದ ಗ್ರಾಮ ಪಂಚಾಯತ್ಗಳಿಗೆ ಬಲ: ಕ್ಯಾ| ಬ್ರಿಜೇಶ್ ಚೌಟ
*ಗ್ರಾ.ಪಂ.ಗ್ರಾಮದ ಅಭಿವೃದ್ಧಿ ಇರುವಂತದ್ದು; ಭಾಗೀರಥಿ ಮುರುಳ್ಯ
*ಗ್ರಾ.ಪಂ.ಗ್ರಾಮದ ದೇಗುಲ: ಕಿಶೋರ್‌ಕುಮಾರ್ ಪುತ್ತೂರು
*ಕಡಬ ತಾ| ಪ್ರಥಮ ಸ್ಥಾನದಲ್ಲಿದೆ-ನವೀನ್ ಭಂಡಾರಿ
*ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳಿ-ಸಲಾಂ ಬಿಲಾಲ್
ನೆಲ್ಯಾಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಮತ್ತು ಗ್ರಾಮ ಪಂಚಾಯತ್‌ನ ಸ್ವಂತ ನಿಧಿಯಡಿಯಲ್ಲಿ ನಿರ್ಮಿಸಲಾದ ನೆಲ್ಯಾಡಿ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ’ ಗ್ರಾಮ ಸೌಧ ’ ಇದರ ಉದ್ಘಾಟನೆ ಎ.15ರಂದು ಬೆಳಿಗ್ಗೆ ನಡೆಯಿತು.

ನಾಮಫಲಕ ಅನಾವರಣಗೊಳಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ, ದೇಶದಲ್ಲಿ 2014ರಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಶಕ್ತಗೊಳಿಸಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳನ್ನು ಬಲಿಷ್ಠಗೊಳಿಸಿದೆ. 15ನೇ ಹಣಕಾಸು ಅನುದಾನ ನೇರವಾಗಿ ಗ್ರಾ.ಪಂ.ಗೆ ನೀಡಲಾಗುತ್ತಿದೆ.

ಜೆಜೆಎಂ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ದ.ಕ.ಜಿಲ್ಲೆಯೊಂದರಲ್ಲೇ 2500 ಕೋಟಿ ರೂ.ಅನುದಾನ ಜಲ ಜೀವನ್ ಯೋಜನೆಗೆ ಖರ್ಚು ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಯೋಜನೆಗಳು ಗ್ರಾಮ ಪಂಚಾಯತ್‌ಗಳನ್ನು ಬಲಪಡಿಸುತ್ತಿವೆ. ಕೇಂದ್ರ ಸರಕಾರದ ಯೋಜನೆಯನ್ನು ಗ್ರಾಮದಲ್ಲಿ ಸರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಸದಸ್ಯರಿಗೂ ಇದೆ. ನೆಲ್ಯಾಡಿಯಲ್ಲಿ ಉದ್ಘಾಟನೆಗೊಂಡಿರುವ ಗ್ರಾಮ ಸೌಧ ಕಟ್ಟಡ ಗ್ರಾಮದ ಜನರ ಕಷ್ಟ ಕಾರ್ಪಣ್ಯಗಳಿಗೆ, ಸಮಸ್ಯೆಗಳಿಗೆ ಉತ್ತರಕೊಡುವ ಕೇಂದ್ರವಾಗಲಿ ಎಂದರು.
ವಾರ್ಷಿಕ 5 ಕೋಟಿ ರೂ.ಅನುದಾನ:
ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ವಾರ್ಷಿಕ 5 ಕೋಟಿ ರೂ.ಅನುದಾನ ಬರುತ್ತದೆ. ಇದನ್ನು 8 ವಿಧಾನಸಭಾ ಕ್ಷೇತ್ರಗಳಿಗೂ ಹಂಚಿಕೆ ಮಾಡಬೇಕಾಗುತ್ತದೆ. ರಾಜ್ಯ ಸರಕಾರದ ಇಲಾಖೆಗಳ ಮೂಲಕ ಕೇಂದ್ರ ಸರಕಾರದಿಂದ ಬರುವ ಯೋಜನೆಗಳ ನಿರ್ವಹಣೆ ಆಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಸಿಆರ್‌ಎಫ್ ನಿಧಿಯಡಿ 42 ಕೋಟಿ ರೂ.ಅನುದಾನ ಬಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ರೂ.೬ ಕೋಟಿಯಂತೆ ಹಂಚಿಕೆಯಾಗಿದೆ. ಆದ್ದರಿಂದ ಗ್ರಾಮದ ವ್ಯಾಪ್ತಿಯಲ್ಲಿ ಅನುಷ್ಠಾನವಾಗುವ ಯೋಜನೆಯ ವಿವರ ಪಡೆದುಕೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸರಿಯಾಗಿ ಅನುಷ್ಠಾನಗೊಳಿಸಬೇಕು. ಲೋಪ ದೋಷಗಳಿದ್ದಲ್ಲಿ ಸಂಸದರು, ಶಾಸಕರು ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕು. ದ.ಕ.ಜಿಲ್ಲೆಯ ಜನರ ಸಾಮರ್ಥ್ಯ,ಅಪೇಕ್ಷೆಗೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.

ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ:
ಮಂಗಳೂರಿನಿಂದ ಕಬಕ-ಪುತ್ತೂರು ತನಕ ಬರುತ್ತಿದ್ದ ರೈಲು ಓಡಾಟವನ್ನು ಸುಬ್ರಹ್ಮಣ್ಯದ ತನಕ ವಿಸ್ತರಿಸಬೇಕೆಂಬ ಬೇಡಿಕೆ 20 ವರ್ಷಗಳಿಂದ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರ ಸಹಕಾರದಿಂದ ಈ ಬೇಡಿಕೆ ಈಗ ಜಾರಿಗೊಂಡಿದೆ. ಸದ್ರಿ ರೈಲು ಎ.12ರಿಂದ ದಿನದಲ್ಲಿ 3 ಟ್ರಿಪ್‌ನಂತೆ ಮಂಗಳೂರು-ಸುಬ್ರಹ್ಮಣ್ಯ ನಡುವೆ ಓಡಾಟ ನಡೆಸುತ್ತಿದೆ. ಮಂಗಳೂರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರಯಾಣ ಸಾಧ್ಯವಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.

ಮಾಣಿ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ:
ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ರಿ ರಸ್ತೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 2022ರಲ್ಲಿ ಡಿಪಿಆರ್ ಪ್ರಕ್ರಿಯೆ ಆರಂಭಿಸಲಾಗಿತ್ತಾದರೂ ಅಂತಿಮಗೊಂಡಿರಲಿಲ್ಲ. ಈಗ ಏಜೆನ್ಸಿ ಮೂಲಕ ಡಿಪಿಆರ್‌ಗೆ 3.50 ಕೋಟಿ ರೂ.ಅನುದಾನ ಮಂಜೂರಾಗಿದ್ದು ಸರ್ವೆ ಆರಂಭವಾಗಿದೆ. ಮುಂದೆ ಶೀಘ್ರ ಡಿಪಿಆರ್ ಪೂರ್ಣಗೊಳಿಸಿ ಕೇಂದ್ರದಿಂದ ಅನುಮೋದನೆ ಪಡೆಯುತ್ತೇವೆ ಎಂದು ಕ್ಯಾ|ಬ್ರಿಜೇಶ್ ಚೌಟ ಹೇಳಿದರು.
ಪೆರಿಯಶಾಂತಿ-ಪೈಚಾರು ಲಿಂಕ್‌ರಸ್ತೆ ನಿರ್ಮಾಣ:
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪೆರಿಯಶಾಂತಿ-ಸುಬ್ರಹ್ಮಣ್ಯ-ಪೈಚಾರು ರಸ್ತೆ ನಿರ್ಮಾಣಕ್ಕೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಅನುಮೋದನೆ ಪಡೆಯುತ್ತೇವೆ ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.

ಎಲೆಚುಕ್ಕಿ ರೋಗಕ್ಕೆ ಪರಿಹಾರ:
ಈ ಭಾಗದಲ್ಲಿ ಕಾಣಿಸಿಕೊಂಡಿರುವ ಅಡಿಕೆಗೆ ಹಳದಿ ಹಾಗೂ ಎಲೆಚುಕ್ಕಿ ರೋಗ ನಿವಾರಣೆ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಲ್ಟಿಪಲ್ ಏಜೆನ್ಸಿಗಳು ಮಾಡುತ್ತಿರುವ ಸಂಶೋಧನೆಯನ್ನು ಸಿಂಗಲ್ ಏಜೆನ್ಸಿ ಅಡಿಗೆ ತಂದು ಎಲ್ಲರ ಸಂಶೋಧನೆಯನ್ನು ಕೇಂದ್ರೀಕೃತವಾಗಿ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಅಡಿಕೆ ಜೊತೆ ಕಾಫಿ ಬೆಳೆ;
ಅಡಿಕೆಯ ಜೊತೆಗೆ ಉಳಿದ ಬೆಳೆಗಳನ್ನೂ ಬೆಳೆಸುವ ನಿಟ್ಟಿನಲ್ಲಿ ರಾಜ್ಯದ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಚರ್ಚೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಮಣ್ಣು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ಈ ಮಣ್ಣಿನಲ್ಲಿ ಕಾಫಿ ಬೆಳೆ ಬೆಳೆಸಬಹುದೆಂಬ ವೈಜ್ಞಾನಿಕ ವರದಿಯೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೋರ್ಡ್ ಚೇರ್‌ಮೆನ್, ಸಿಇಒ ಹಾಗೂ ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು ಆಸಕ್ತ ಹಾಗೂ ಕೆಲವೊಂದು ರೈತರನ್ನು ಗುರುತಿಸಿ ಅವರ ತೋಟದಲ್ಲಿ ಕಾಫಿ ಬೋರ್ಡ್‌ನ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಕಾಫಿ ಬೆಳೆ ಮಾಡಲಾಗುವುದು. ಈ ಬಗ್ಗೆ ತಾಲೂಕು ಮಟ್ಟದಲ್ಲೂ ತಂಡ ರಚಿಸಿ ಪ್ರಯತ್ನಿಸಲಾಗುವುದು ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಗ್ರಾ.ಪಂ.ಗ್ರಾಮದ ಅಭಿವೃದ್ಧಿ ಇರುವಂತದ್ದು-ಭಾಗೀರಥಿ ಮುರುಳ್ಯ;
ಗ್ರಾಮಸೌಧ ಕಟ್ಟಡ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಗ್ರಾಮಸ್ಥರಿಗೆ ಹುಟ್ಟಿನಿಂದ ಸಾಯುವ ತನಕ ಸೇವೆ ಕೊಡುವ ಕ್ಷೇತ್ರ ಗ್ರಾಮ ಪಂಚಾಯತ್ ಆಗಿದೆ. ಮನೆ ನಿರ್ಮಾಣ, ಬೋರ್‌ವೆಲ್ ಕೊರೆಯಲು ಅನುಮತಿ ಬೇಕಾದರೂ ಗ್ರಾ.ಪಂ.ಗೆ ಬರಬೇಕು. ಕೋಟ್ಯಾಧಿಪತಿ ಉದ್ಯಮಿಯಾದರೂ ಒಮ್ಮೆಯಾದರೂ ಗ್ರಾಮ ಪಂಚಾಯತ್‌ಗೆ ಬರಲೇಬೇಕಾಗುತ್ತದೆ. ಆದ್ದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಇರುವಂತದ್ದು ಗ್ರಾಮ ಪಂಚಾಯತ್ ಆಗಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್‌ಗೆ ಬರುವ ಗ್ರಾಮಸ್ಥರಿಗೆ ಸಿಬ್ಬಂದಿಗಳು ಸರಿಯಾದ ಮಾಹಿತಿ ಕೊಡಬೇಕು. ಪಿಡಿಒ ಇಲ್ಲವೆಂದು ವಾಪಸ್ ಕಳಿಸುವುದಲ್ಲ. ಸೌಜನ್ಯದೊಂದಿಗೆ ಇರಬೇಕೆಂದು ಭಾಗೀರಥಿ ಮುರುಳ್ಯ ಹೇಳಿದರು.

ಗ್ರಾ.ಪಂ.ಗ್ರಾಮದ ದೇಗುಲ-ಕಿಶೋರ್‌ಕುಮಾರ್ ಪುತ್ತೂರು;
ನೂತನ ಕಟ್ಟಡದಲ್ಲಿ ದೀಪ ಬೆಳಗಿಸಿದ ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಮಾತನಾಡಿ, ಜೆಜೆಎಂ. ಸ್ವಚ್ಛಭಾರತ್, ನರೇಗಾ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಿದೆ. ನಿಷ್ಪಕ್ಷಪಾತ, ತಾರತಮ್ಯ, ಭ್ರಷ್ಟಾಚಾರವಿಲ್ಲದೆ ಅಧಿಕಾರ ಚಲಾಯಿಸಿದಾಗ ನಮ್ಮ ಜೀವನವೂ ಸಾರ್ಥಕವಾಗುತ್ತದೆ. ಗ್ರಾಮ ಪಂಚಾಯತ್ ಗ್ರಾಮದ ದೇಗುಲ. ಇಲ್ಲಿಗೆ ಬರುವ ಗ್ರಾಮಸ್ಥರಿಗೆ ಸುಖ, ಶಾಂತಿ ಸಿಗಬೇಕಾದರೆ ಉತ್ತಮ ಸೇವೆ ಸಿಗಬೇಕು ಎಂದರು. ನೆಲ್ಯಾಡಿ ಗ್ರಾ.ಪಂ.ನಲ್ಲಿ ರಾಜಕೀಯ ಇಲ್ಲದೇ ಎಲ್ಲರೂ ಒಮ್ಮತದಿಂದ ಕೆಲಸ ನಿರ್ವಹಿಸುತ್ತಿರುವುದು ಅಭಿನಂದನಾರ್ಹ. ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸಲು ಬದ್ಧನಿದ್ದೇನೆ. ಬಡತನ ನಿರ್ಮೂಲನೆಯಾಗಬೇಕು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಬದುಕು ಸಾಗಿಸೋಣ ಎಂದು ಹೇಳಿದ ಕಿಶೋರ್ ಕುಮಾರ್ ಅವರು, ವಿಧಾನಪರಿಷ್ ಸದಸ್ಯನ ನೆಲೆಯಲ್ಲಿ ವಾರ್ಷಿಕ 2 ಕೋಟಿ ರೂ.ಅನುದಾನ ಬರುತ್ತಿದ್ದು ಇದನ್ನು 13 ಕ್ಷೇತ್ರಗಳಿಗೆ ಹಂಚಿಕೆ ಮಾಡಬೇಕಾಗುತ್ತದೆ. ಮುಂದೆ ನೆಲ್ಯಾಡಿ ಗ್ರಾಮ ಪಂಚಾಯತ್‌ಗೂ ಅನುದಾನ ನೀಡುವುದಾಗಿ ಹೇಳಿದರು.

ಕಡಬ ತಾ| ಪ್ರಥಮ ಸ್ಥಾನದಲ್ಲಿದೆ-ನವೀನ್ ಭಂಡಾರಿ:
ಅತಿಥಿಯಾಗಿದ್ದ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಮಾತನಾಡಿ, ಗ್ರಾಮ ಪಂಚಾಯತ್ ಎಲ್ಲಾ ಜಾತಿ, ಧರ್ಮದವರೂ ಆಗಮಿಸುವ ಕೇಂದ್ರವಾಗಿದೆ. ಸರಕಾರಿ ಸೇವೆ ನೀಡುವ ಕಚೇರಿಯೂ ಆಗಿದೆ. ಎರಡು ದಿನದ ಹಿಂದೆ ಬೆಳಂದೂರಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆಗೊಂಡಿದೆ. ಈಗ ನೆಲ್ಯಾಡಿಯಲ್ಲಿಯೂ ಉದ್ಘಾಟನೆಯಾಗಿದೆ. ತಾಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಸ್ಪಂದನೆಯಿಂದಾಗಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಕಡಬ ತಾಲೂಕು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ನರೇಗಾ ಯೋಜನೆ ಕೇವಲ ಕೂಲಿ ಕೊಡುವ ಯೋಜನೆಯಲ್ಲ. ಸಮುದಾಯ ಆಸ್ತಿಯನ್ನು ನಿರ್ಮಾಣ ಮಾಡುತ್ತದೆ. ಇದರಲ್ಲಿ ಅನುದಾನಕ್ಕೆ ಮಿತಿ ಇಲ್ಲ. ಗ್ರಾಮಸ್ಥರ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಾಣಗೊಂಡಿದೆ ಎಂದರು.
ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳಿ-ಸಲಾಂ ಬಿಲಾಲ್:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯು.ಯಾನೆ ಸಲಾಂ ಬಿಲಾಲ್ ಮಾತನಾಡಿ, ಗ್ರಾ.ಪಂ.ಕಚೇರಿಗೆ ಹೊಸ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಂಡಿರುವುದು ಖುಷಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆ ಎರಡೂ ವಿಭಾಗವಾಗುತ್ತಿದೆ. ಇದರಿಂದ ವರ್ತಕರು, ಆಟೋ ರಿಕ್ಷಾ ಚಾಲಕರು, ಗ್ರಾಮಸ್ಥರು ಚಿಂತೆಗೆ ಒಳಗಾಗಿದ್ದಾರೆ. ಪೇಟೆಯಲ್ಲಿ ಅರ್ಧದಲ್ಲಿ ನಿಂತಿರುವ ತಡೆಗೋಡೆ ತೆರವುಗೊಳಿಸುವಂತೆ ವರ್ತಕ ಸಂಘದಿಂದ ಗ್ರಾ.ಪಂ.ಗೆ ಮನವಿ ಬರುತ್ತಲೇ ಇದೆ. ಆದರೆ ಇದು ಪಂಚಾಯತ್‌ನಿಂದ ಸಾಧ್ಯವಿಲ್ಲ. ಇದೀಗ ವರ್ತಕರ ಮನವಿಯಂತೆ ಸಂಸದರು ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ಮಾಡಿಕೊಡುವ ಭರವಸೆ ನೀಡಿದ್ದು ಅವರಿಗೆ ಗ್ರಾ.ಪಂ.ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಾಂ ಬಿಲಾಲ್ ಹೇಳಿದರು.
ಪಿಡಿಒಗಳಿಗೆ ಸನ್ಮಾನ:
ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿ, ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ ಕಾಣಿಯೂರಿಗೆ ವರ್ಗಾವಣೆಗೊಂಡು ಪ್ರಸ್ತುತ ನಿವೃತ್ತರಾಗಿರುವ ಪಿಡಿಒ ದೇವರಾಜ್, ನೆಲ್ಯಾಡಿ ಗ್ರಾ.ಪಂ.ನಲ್ಲಿ 5 ವರ್ಷ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ ತುಮಕೂರಿಗೆ ವರ್ಗಾವಣೆಗೊಂಡಿರುವ ಮಂಜುಳ ಎನ್. ಹಾಗೂ ನೆಲ್ಯಾಡಿ ಗ್ರಾ.ಪಂ.ನಲ್ಲಿ 1 ವರ್ಷ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ ಕುಟ್ರುಪ್ಪಾಡಿ ಗ್ರಾ.ಪಂ.ಪಿಡಿಒ ಆನಂದ ಗೌಡರವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್‌ರವರು ಸನ್ಮಾನಿತರನ್ನು ಪರಿಚಯಿಸಿದರು. ಪಿಡಿಒ ಮಂಜುಳಾ ಅವರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು.

ಅಧಿಕಾರಿಗಳಿಗೆ ಸನ್ಮಾನ:
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿ, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಸಂಗಪ್ಪ ಎಸ್.ಹುಕ್ಕೇರಿ, ನರೇಗಾ ಯೋಜನೆ ತಾಂತ್ರಿಕ ಸಹಾಯಕ ಮನೋಜ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನರೇಗಾ ಯೋಜನೆ ಇನ್ನೋರ್ವ ತಾಂತ್ರಿಕ ಸಹಾಯಕಿ ಶ್ರೀಲಕ್ಷ್ಮೀ ಅವರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಟಿ.ಯವರಿಗೆ ಸನ್ಮಾನ:
ಕಾರ್ಯಕ್ರಮ ನಿರೂಪಿಸಿದ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಯವರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ.ಸದಸ್ಯರಿಗೆ/ಸಿಬ್ಬಂದಿಗಳಿಗೆ ಗೌರವಾರ್ಪಣೆ:
ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಚೇತನಾ, ಅಬ್ದುಲ್ ಜಬ್ಬಾರ್, ಆನಂದ ಗೌಡ ಪಿಲವೂರು, ಜಯಂತಿ, ಶ್ರೀಲತಾ ಸಿ.ಹೆಚ್., ಮಹಮ್ಮದ್ ಇಕ್ಬಾಲ್, ಉಷಾಜೋಯಿ, ಜಯಲಕ್ಷ್ಮೀಪ್ರಸಾದ್, ಪುಷ್ಪಾ, ರವಿಪ್ರಸಾದ್ ಶೆಟ್ಟಿ, ಪ್ರಕಾಶ ಕೆ., ಪಿಡಿಒ ಮೋಹನ್‌ಕುಮಾರ್ ಜಿ., ಲೆಕ್ಕ ಸಹಾಯಕ ಅಂಗು, ಸಿಬ್ಬಂದಿಗಳಾದ ಶಿವಪ್ರಸಾದ್, ಲಲಿತಾ ಪಿ., ಭವ್ಯ, ಗಿರೀಶ್, ಸೋಮಶೇಖರ, ಲೀಲಾವತಿ, ಗ್ರಂಥಾಲಯ ಮೇಲ್ವಿಚಾರಕಿ ಮನಿಷಾ, ವಿಆರ್‌ಡಬ್ಲ್ಯು ಕಾರ್ಯಕರ್ತೆ ಸಹನಾ ಆರ್.ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ವಾಹಣಾಧಿಕಾರಿ ವಿನಯಕುಮಾರಿ ಶುಭಹಾರೈಸಿದರು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್., ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ನರೇಗಾ ಯೋಜನೆ ತಾಂತ್ರಿಕ ಸಹಾಯಕ ಮನೋಜ್‌ಕುಮಾರ್, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಸಂಗಪ್ಪ ಎಸ್.ಹುಕ್ಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳಿಗೆ ಗ್ರಾ.ಪಂ.ಸದಸ್ಯರು ಶಾಲುಹಾಕಿ, ಹೂ ನೀಡಿ ಸ್ವಾಗತಿಸಿದರು. ಪಿಡಿಒ ಮೋಹನ್‌ಕುಮಾರ್ ಜಿ.,ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ರವಿಪ್ರಸಾದ್ ಶೆಟ್ಟಿ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಸದಸ್ಯೆಯರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ, ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಪುಲಾರ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಸುಂದರ ಗೌಡ ಅತ್ರಿಜಾಲು, ನೆಲ್ಯಾಡಿ ಅಲ್‌ಬದ್ರಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಝೀಂ ಸಾಹೇಬ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್‌ಕುಮಾರ್ ನೆಲ್ಯಾಡಿ, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಮಾಜಿ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉದ್ಯಮಿ ಕೆ.ಪಿ.ತೋಮಸ್, ನೆಲ್ಯಾಡಿ ಆಟೋ ಚಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ ಸಹಿತ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವರ್ತಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯರಾದ ಚೇತನಾ, ಅಬ್ದುಲ್ ಜಬ್ಬಾರ್, ಆನಂದ ಗೌಡ ಪಿಲವೂರು, ಜಯಂತಿ, ಶ್ರೀಲತಾ ಸಿ.ಹೆಚ್., ಮಹಮ್ಮದ್ ಇಕ್ಬಾಲ್, ಉಷಾಜೋಯಿ, ಜಯಲಕ್ಷ್ಮೀಪ್ರಸಾದ್, ಪುಷ್ಪಾ, ರವಿಪ್ರಸಾದ್ ಶೆಟ್ಟಿ, ಪ್ರಕಾಶ ಕೆ., ಲೆಕ್ಕ ಸಹಾಯಕ ಅಂಗು, ಸಿಬ್ಬಂದಿಗಳಾದ ಶಿವಪ್ರಸಾದ್, ಲಲಿತಾ ಪಿ., ಭವ್ಯ, ಗಿರೀಶ್, ಸೋಮಶೇಖರ, ಲೀಲಾವತಿ, ಗ್ರಂಥಾಲಯ ಮೇಲ್ವಿಚಾರಕಿ ಮನಿಷಾ, ವಿಆರ್‌ಡಬ್ಲ್ಯು ಕಾರ್ಯಕರ್ತೆ ಸಹನಾ ಆರ್.ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಸಿಹಿ ಭೋಜನ ನೀಡಲಾಯಿತು. ಅತಿಥಿಗಳನ್ನು ಶ್ರೀ ಕಪಿಲೇಶ್ವರ ಕಲಾ ಸಮಿತಿ ಚಾರ್ವಾಕ ಇವರ ಚೆಂಡೆ ವಾದನ ಹಾಗೂ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯರವರ ನೇತೃತ್ವದಲ್ಲಿ ಎ.14ರಂದು ಸಂಜೆ ವಾಸ್ತುಹೋಮ, ಎ.15ರಂದು ಬೆಳಿಗ್ಗೆ ಗಣಹೋಮ ನಡೆಯಿತು.
